ಉದಯಪುರ: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಹಿಂದು ಯುವಕನ ಶಿರಚ್ಛೇದ ಮಾಡಲಾಗಿದೆ. ಈ ಭೀಕರ ಘಟನೆ ನಡೆದಿದ್ದು ರಾಜಸ್ಥಾನದ ಉದಯಪುರದಲ್ಲಿ. ಇಲ್ಲಿನ ಮಾಲ್ಡಾಸ್ ರಸ್ತೆಯಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಸೇರಿ ಯುವಕನ ತಲೆ ಕತ್ತರಿಸಿದ್ದಾರೆ. ಹಾಡಹಗಲಲ್ಲೇ ರಕ್ತದೋಕುಳಿಯಾಗಿದೆ. ಮೃತನನ್ನು ಕನ್ನಯ್ಯ ಲಾಲ್ (27)ಎಂದು ಗುರುತಿಸಲಾಗಿದೆ.
ಜ್ಞಾನವಾಪಿ ಮಸೀದಿ ವಿಚಾರದ ಬಗ್ಗೆ ಮಾತನಾಡಲು ಟಿವಿ ಚಾನೆಲ್‌ವೊಂದಕ್ಕೆ ಬಿಜೆಪಿ ಪರ ಹೋಗಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದವರು ತಿರುಗಿಬಿದ್ದರು. ದೇಶದಲ್ಲಷ್ಟೇ ಅಲ್ಲ, ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳಿಂದಲೂ ತೀವ್ರ ಆಕ್ರೋಶ ವ್ಯಕ್ತವಾಯಿತು. ನೂಪುರ್ ಶರ್ಮಾಗಂತೂ ಹತ್ಯೆ-ಅತ್ಯಾಚಾರ ಬೆದರಿಕೆಗಳು ಸಾಲುಸಾಲು ಬರತೊಡಗಿದವು. ನೂಪುರ್ ಶರ್ಮಾ ವಿರುದ್ಧವೂ ಹಲವು ಠಾಣೆಗಳಲ್ಲಿ ದೂರು ದಾಖಲಾಗಿವೆ. ಆದರೆ ಅವರನ್ನು ವಿಚಾರಣೆಗೆ ಒಳಪಡಿಸೋಣವೆಂದರೆ ಎಲ್ಲಿಯೂ ಕಾಣಿಸುತ್ತಿಲ್ಲವೆಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ನೂಪುರ್ ಶರ್ಮಾ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಆದರೆ ಈಗ ರಾಜಸ್ಥಾನದಲ್ಲಿ ನಡೆದ ಯುವಕನ ಹತ್ಯೆ ಮತ್ತೆ ಆತಂಕ ಮೂಡಿಸಿದೆ. ಈ ಕೊಲೆಗೆಡುಕರು ಯುವಕನ ಶಿರಚ್ಛೇದ ಮಾಡಿದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಜೀವ ತೆಗೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆಂದು ಸುದ್ದಿ ಮಾಧ್ಯಮ ಎಎನ್‌ಐ ವರದಿ ಮಾಡಿದೆ. ಅಂದಹಾಗೇ, ಮೃತ ಯುವಕ ಟೇಲರ್ ಆಗಿದ್ದ. ಅವನ ಅಂಗಡಿಗೇ ನುಗ್ಗಿದ್ದ ದುಷ್ಕರ್ಮಿಗಳು ಮೊದಲು ಚಾಕುವಿನಿಂದ ಹಲ್ಲೆ ನಡೆಸಿ, ನಂತರ ತಲೆ ಕತ್ತರಿಸಿದ್ದಾರೆ. ಬಳಿಕ ತಮ್ಮ ತಪ್ಪನ್ನೂ ವಿಡಿಯೋ ಮೂಲಕ ಒಪ್ಪಿಕೊಂಡಿದ್ದಾರೆ. ಸದ್ಯ ಇವರಿಬ್ಬರೂ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಠಿಣ ಕ್ರಮದ ಭರವಸೆ
ಘಟನೆಯನ್ನು ರಾಜಸ್ಥಾನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಯುವಕನ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ ಇದೇ ಘಟನೆ ಮತ್ತೆ ಗಲಾಟೆಗೆ ಕಾರಣವಾಗಬಾರದು. ಶಾಂತಿ ಕಾಪಾಡಬೇಕು. ಯುವಕನ ಶಿರಚ್ಛೇದದ ವಿಡಿಯೋವನ್ನು ಶೇರ್ ಮಾಡಿಕೊಳ್ಳಬಾರದು ಎಂದು ಸಿಎಂ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ. ಆದರೂ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನ ೂ ಓದಿ: ಎಲ್ಲೂ ಕಾಣಿಸುತ್ತಿಲ್ಲ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಮುಂಬೈ ಪೊಲೀಸರಿಂದ ಹುಡುಕಾಟ