Site icon Vistara News

Delhi Crime | ಶ್ರದ್ಧಾಳ ಶವದ ತುಂಡು ಫ್ರಿಜ್‌ನಲ್ಲಿರುವಾಗಲೇ ಕೋಣೆಯಲ್ಲಿ ಮತ್ತೊಬ್ಬ ಹುಡುಗಿ ಜತೆ ಅಫ್ತಾಬ್​ ರೋಮ್ಹಾನ್ಸ್‌!

Aaftab Amin Poonawala Have link with Several Women

ನವ ದೆಹಲಿ: ಅದೊಂದು ಸಂಜೆ ದಕ್ಷಿಣ ದೆಹಲಿಯ ಛತ್ತರ್​ಪುರ ಪಹಾಡಿಯಲ್ಲಿರುವ 93/1 ಎಂಬ ಮನೆಯ ಕಾಲಿಂಗ್​ ಬೆಲ್​ ರಿಂಗ್​ ಆಯಿತು. ಆ ಮನೆ ಮಾಲೀಕ ಬಂದು ಬಾಗಿಲು ತೆರೆದ, ಹುಡುಗಿಯೊಬ್ಬಳು ಮೌನವಾಗಿ ಮನೆಯೊಳಗೆ ನಡೆದಳು. ಬಾಗಿಲು ತೆರೆದವನು ಕೊಲೆಗೆಡುಕ ಅಫ್ತಾಬ್​ ಅಮೀನ್​ ಪೂನಾವಾಲಾ. ಶ್ರದ್ಧಾಳನ್ನು ಹತ್ಯೆ ಮಾಡಿ, ತನಗೇನೂ ಗೊತ್ತಿಲ್ಲ ಎಂಬಂತೆ ಇದ್ದ ಅಮೀನ್​ ಮನೆಗೆ ಇನ್ನೊಬ್ಬಳು ಹುಡುಗಿ ಬಂದಿದ್ದಳು. ಅಮೀನ್ ಕೋಣೆಯಲ್ಲಿ ಅವರ ಸರಸ-ಸಲ್ಲಾಪ ನಡೆದಿತ್ತು. ಅದೇ ಮನೆಯ ಬಾಗಿಲ ಬಲಭಾಗದಲ್ಲಿ, ಸರಿಯಾಗಿ ಬೆಳಕು ಇಲ್ಲದ ಜಾಗದಲ್ಲಿ ಇದ್ದ ಫ್ರಿಜ್​​ನಲ್ಲಿ ಶ್ರದ್ಧಾ ದೇಹದ ತುಂಡುಗಳು ತಣ್ಣನೆ ಅಡಗಿದ್ದವು. ಅಲ್ಲಿ ಕೋಣೆಯಲ್ಲಿ ಅಫ್ತಾಬ್​ ಜತೆ ಇದ್ದ ಹುಡುಗಿಗೆ ಇದ್ಯಾವುದೂ ಗೊತ್ತಿಲ್ಲ, ತಾನೆಂಥಾ ವಿಕೃತ ಕೊಲೆಗೆಡುಕನ ತೆಕ್ಕೆಯಲ್ಲಿದ್ದೇನೆ ಎಂಬುದರ ಅರಿವೂ ಆಕೆಗಿಲ್ಲ!

ಪೊಲೀಸರ ತನಿಖೆ ಪ್ರಕಾರ ಶ್ರದ್ಧಾಳನ್ನು ಅಫ್ತಾಬ್​ ಅಮೀನ್ ಹತ್ಯೆ ಮಾಡಿದ್ದು ಮೇ ತಿಂಗಳಲ್ಲಿ. ಮೂಲತಃ ಮಹಾರಾಷ್ಟ್ರದವಳಾದ ಶ್ರದ್ಧಾ, ಡೇಟಿಂಗ್ ಆ್ಯಪ್​​ನಲ್ಲಿ ಭೇಟಿಯಾದ ಅಫ್ತಾಬ್​ಗಾಗಿ ಏಪ್ರಿಲ್​ ತಿಂಗಳಲ್ಲಿ ತನ್ನ ಮನೆ-ಹೆತ್ತವರನ್ನು ಬಿಟ್ಟು ದೆಹಲಿಗೆ ಬಂದಿದ್ದಳು. ಶ್ರದ್ಧಾ ಇಲ್ಲಿಗೆ ಬಂದು ನೆಲೆಸಿದರೂ ಅಫ್ತಾಬ್​ ಡೇಟಿಂಗ್ ಆ್ಯಪ್​​ನಲ್ಲಿ ಮತ್ತೂ ಹಲವು ಯುವತಿಯರ ಜತೆ ಚಾಟ್ ಮಾಡುತ್ತಿದ್ದ. ಎಲ್ಲ ಹಿಂದೂ ಯುವತಿಯರೊಂದಿಗೇ ಆತನ ಸ್ನೇಹ ಇತ್ತು. ತಾನಿದ್ದೂ, ಅಫ್ತಾಬ್​ ಬೇರೆ ಮಹಿಳೆಯರೊಂದಿಗೆ ಚಾಟ್​ ಮಾಡುವುದು, ಅವರನ್ನು ಭೇಟಿಯಾಗುವುದು ಮುಂದುವರಿಸಿದಾಗ ಶ್ರದ್ಧಾ ಗಲಾಟೆ ಮಾಡಿದ್ದಳು. ಇದೇ ವಿಚಾರಕ್ಕೆ ಅವರ ಮಧ್ಯೆ ಪದೇಪದೆ ಜಗಳ ಆಗುತ್ತಿತ್ತು. ‘ಶ್ರದ್ಧಾ ನನ್ನ ಬಗ್ಗೆ ತುಂಬ ಪೊಸೆಸ್ಸಿವ್ ಆಗಿದ್ದಳು. ನನಗೆ ಉಸಿರುಗಟ್ಟುತ್ತಿತ್ತು. ಅವಳೇನೂ ಸಾಚಾ ಆಗಿರಲಿಲ್ಲ. ಡೇಟಿಂಗ್​ ಆ್ಯಪ್​ ಮೂಲಕ ಬೇರೆ ಪುರುಷರ ಜತೆ ಸಂಪರ್ಕ ಹೊಂದಿ, ಅವರನ್ನು ಮೀಟ್ ಮಾಡುತ್ತಿದ್ದಳು. ಪ್ರತಿದಿನ ಗಲಾಟೆ-ಜಗಳ ನಡೆಯುತ್ತಿತ್ತು. ಹಾಗಾಗಿಯೇ ಕೊಲೆ ಮಾಡಿದ್ದೇನೆ’ ಎಂದು ಅಫ್ತಾಬ್ ಹೇಳಿದ್ದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿವಿಧ ವೆಬ್​ ಸೀರಿಸ್​, ಅಮೆರಿಕಾದ ಕ್ರೈಂ ಶೋಗಳನ್ನು ನೋಡಿದ್ದ ಅಫ್ತಾಬ್​ ಮೇ ತಿಂಗಳಲ್ಲಿ ಶ್ರದ್ಧಾಳನ್ನು ಹತ್ಯೆ ಮಾಡಿ, ಆಕೆಯ ದೇಹವನ್ನು ಒಮ್ಮೆಲೇ ವಿಲೇವಾರಿ ಮಾಡಲಿಲ್ಲ. ಮೊದಲು 35 ತುಂಡುಗಳನ್ನಾಗಿ ಮಾಡಿ, ಅದನ್ನು ಇಡಲೆಂದೇ ಹೊಸ ರೆಫ್ರಿಜರೇಟರ್​ ಖರೀದಿ ಮಾಡಿದ್ದ. ಅದನ್ನು ಮನೆಯ ಮೂಲೆಯಲ್ಲಿ ಇಟ್ಟು, ಅದರಲ್ಲಿ ಶ್ರದ್ಧಾ ದೇಹದ ತುಂಡುಗಳನ್ನು ಇಟ್ಟಿದ್ದ. ವಾಸನೆ ಬಾರದಿರಲಿ ಎಂದು ಅಗರಬತ್ತಿ ಹಚ್ಚುತ್ತಿದ್ದ. ಆ ಭಾಗವನ್ನು ಸದಾ ಸ್ವಚ್ಛಗೊಳಿಸುತ್ತಿದ್ದ. ಹಲವು ದಿನಗಳು ಅದೇ ಫ್ರಿಜ್​​ನಲ್ಲಿ ಆಕೆಯ ದೇಹದ ತುಂಡುಗಳು ಇದ್ದವು. ಹಾಗೇ, ತುಂಡಾದ ಹೆಣ ಅಲ್ಲಿದ್ದಾಗಲೇ ಅಫ್ತಾಬ್​ ಮನೆಗೆ ಹಲವು ಯುವತಿಯರು ಭೇಟಿ ಕೊಟ್ಟಿದ್ದಾರೆ. ಅವನ ಕೆಲವು ಸ್ನೇಹಿತರೂ ಬಂದಿದ್ದರು. ಫುಡ್​ ಡೆಲಿವರಿ ಸಿಬ್ಬಂದಿಯೂ ಮನೆಗೆ ಆಗಮಿಸಿದ್ದರು. ಇಷ್ಟೆಲ್ಲ ಆದರೂ ಒಬ್ಬೇ ಒಬ್ಬ ವ್ಯಕ್ತಿಗೆ ಅನುಮಾನ ಬಂದಿರಲಿಲ್ಲ. ಅತ್ಯಂತ ನಾಜೂಕಾಗಿ ಎಲ್ಲವನ್ನೂ ನಿಭಾಯಿಸಿದ್ದ.

‘ಶ್ರದ್ಧಾಳನ್ನು ಕೊಂದ ಬಳಿಕ ರೆಫ್ರಿಜರೇಟರ್​​ನಲ್ಲಿ ಇಟ್ಟಾಗ ಆ ಭಾಗಗಳು ಕ್ರಮೇಣ ವಾಸನೆ ಹೊಡೆಯಲು ಶುರು ಮಾಡಿದ್ದವು. ಆಗ ಈತ ಆನ್​ಲೈನ್​​ನಲ್ಲಿ ಬ್ಲೀಚಿಂಗ್​ ವಸ್ತುಗಳನ್ನು ತರಿಸಿ, ಕುಳಿತು ದೇಹದ ಭಾಗಗಳನ್ನೆಲ್ಲ ತೊಳೆದಿದ್ದ. ಇದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ಹಾಗೇ, ‘ಸಮಗ್ರ ತನಿಖೆಯನ್ನು ನಡೆಸುತ್ತೇವೆ. ಆತನ ಫೋನ್​, ಕಂಪ್ಯೂಟರ್​ಗಳನ್ನೆಲ್ಲ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುವುದು’ ಎಂದೂ ಹೇಳಿದ್ದಾರೆ. ಶನಿವಾರ ಅಫ್ತಾಬ್​​ನನ್ನು ಪೊಲೀಸರು ಬಂಧಿಸಿದ್ದು, ಇಂದು ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಲಿದ್ದಾರೆ.

ಇದನ್ನೂ ಓದಿ: Delhi Crime | ಡೇಟಿಂಗ್‌ ಆ್ಯಪ್‌ನಿಂದ ಅಫ್ತಾಬ್‌ನ ಪರಿಚಯ ಆಯ್ತು, ಜಾಲತಾಣ ಆ್ಯಪ್ ಶ್ರದ್ಧಾ ಕೊಲೆ ಪತ್ತೆಗೆ ಕಾರಣವಾಯ್ತು!

Exit mobile version