ನವ ದೆಹಲಿ: ಲಿವ್ ಇನ್ ಸಂಗಾತಿಯಿಂದ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ವಾಳ್ಕರ್ ಕೇಸ್ ತನಿಖೆ ಮುಂದುವರಿದೆ. ಆರೋಪಿ ಅಫ್ತಾಬ್ ಪೂನಾವಾಲಾ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಮತ್ತೊಂದೆಡೆ ಅವನ ವಿಚಾರಣೆಯೂ ನಡೆಯುತ್ತಿದೆ. ಅಫ್ತಾಬ್ ಮತ್ತು ಶ್ರದ್ಧಾ ಬೇರೆ ಧರ್ಮದವರು. ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್ ಜತೆ ಬದುಕುತ್ತಿದ್ದಳು. ಕಳೆದ ಮೇ ತಿಂಗಳಲ್ಲಿ ಅಫ್ತಾಬ್ ಆಕೆಯನ್ನು ಕೊಂದು, 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನೆಲ್ಲ ಫ್ರಿಜ್ನಲ್ಲಿಟ್ಟುಕೊಂಡಿದ್ದ. ಬಳಿಕ ತಮ್ಮ ಅಪಾರ್ಟ್ಮೆಂಟ್ಗೆ ಸಮೀಪದಲ್ಲೇ ಇರುವ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಗುರುಗ್ರಾಮದ ಬಳಿಯ ಅರಣ್ಯದಲ್ಲೂ ಕೆಲವು ತುಂಡುಗಳನ್ನು ಎಸೆದಿದ್ದ.
ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್ಎ ಟೆಸ್ಟ್ನಲ್ಲಿ ಸಾಬೀತಾಗಿತ್ತು. ಅಫ್ತಾಬ್ ಶ್ರದ್ಧಾಳ ದೇಹವನ್ನು ಯಾವ ಆಯುಧದಿಂದ ಕತ್ತರಿಸಿದ್ದಾನೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಆ ಮೂಳೆಗಳನ್ನು ಇನ್ನಷ್ಟು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಈಗ ಹೊರಬಿದ್ದಿದೆ. ಅಫ್ತಾಬ್ ಪೂನಾವಾಲಾ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳನ್ನು ಕೊಂದು, ಬಳಿಕ ಗರಗಸದಲ್ಲಿ ಆಕೆಯ ದೇಹವನ್ನು ತುಂಡರಿಸಿದ್ದಾನೆ ಎಂಬುದು ಗೊತ್ತಾಗಿದೆ.
ಅಫ್ತಾಬ್ ಪೂನಾವಾಲಾ ಅಪಾರ್ಟ್ಮೆಂಟ್ನಿಂದ ಪೊಲೀಸರು ಹಲವು ಬಗೆಯ ಮಾರಕಾಸ್ತ್ರಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಶ್ರದ್ಧಾಳನ್ನು ತುಂಡರಿಸಲು ಆತ ಯಾವ ಆಯುಧ ಬಳಸಿದ್ದ ಗೊತ್ತಾಗಿರಲಿಲ್ಲ. ಅಫ್ತಾಬ್ ಮಂಪರು ಪರೀಕ್ಷೆ ವೇಳೆ, ತಾನು ಚೀನಿ ಕ್ಲೀವರ್ (ಮಾಂಸವನ್ನು ಕತ್ತರಿಸಲು ಬಳಸುವ ದೊಡ್ಡ ಚಾಕು) ಬಳಸಿದ್ದಾಗಿ ಹೇಳಿಕೊಂಡಿದ್ದಾನೆ ಎಂಬ ವರದಿ ಬಂದಿದ್ದರೂ, ಅದು ಸ್ಪಷ್ಟವಾಗಿರಲಿಲ್ಲ.
ಇದನ್ನೂ ಓದಿ: Shraddha Murder Case| ಹೌದು ನಾನೇ ಶ್ರದ್ಧಾಳ ಕೊಲೆ ಮಾಡಿದೆ; ಮಂಪರು ಪರೀಕ್ಷೆಯಲ್ಲೂ ಅದೇ ಉತ್ತರ ಕೊಟ್ಟ ಅಫ್ತಾಬ್