ಬೆಂಗಳೂರು: ಬೆಂಗಳೂರು, ಹಾಸನ, ಕೊಪ್ಪಳ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಶುಕ್ರವಾರ (ಜೂನ್ 17) ಬೆಳಗ್ಗೆ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್ (ACB raid) ನೀಡಿದೆ. ಬೆಳ್ಳಂಬೆಳಗ್ಗೆ ಸುಂಮಾರು 80 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳ ದಾಳಿಯಾಗಿದೆ.
ಹಾಸನ
ಹಾಸನದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ರಾಮಕೃಷ್ಣ ಅವರ ವಿದ್ಯಾನಗರದಲ್ಲಿರುವ ಹಿರಿಸಾವೆ ನಿವಾಸ ಹಾಗೂ ಕುವೆಂಪುನಗರದಲ್ಲಿರುವ ಕಚೇರಿ ಮೇಲೆ ದಾಳಿ ಆಗಿದೆ. ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಕೊಪ್ಪಳ
ಕೊಪ್ಪಳದ ಗಂಗಾವತಿಯ ವಡ್ಡರಹಟ್ಟಿಯಲ್ಲಿ ದಾಳಿ ನಡೆದಿದ್ದು, ಬೆಂಗಳೂರಿನ ಗುಪ್ತಚರ ವಿಭಾಗದ ಪಿಐ ಉದಯರವಿ ಮನೆಯ ಮೇಲೆ ಹಾಗೂ ಉದಯರವಿಗೆ ಸೇರಿದ ಮುದಗಲ್‌ನ ಎರಡು ಕಡೆ ದಾಳಿ ಮಾಡಿ ಪರಿಶಿಲನೆ ನಡೆಸಲಾಗುತ್ತಿದೆ. ಎಸಿಬಿ ಕೊಪ್ಪಳ ಡಿವೈಎಸ್ಪಿ ಶಿವಕುಮಾರ ನೇತೃತ್ವದಲ್ಲಿ ದಾಳಿ ನಡೆದಿದೆ. ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಆಗಿದ್ದ ಉದಯರವಿ, ಇತ್ತೀಚೆಗಷ್ಟೆ ವರ್ಗಾವಣೆ ಗೊಂಡಿದ್ದರು.
ಇದನ್ನೂ ಓದಿ | ಬೆಂಗಳೂರು, ಹಾಸನ, ಕೊಪ್ಪಳ ಸೇರಿ 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಂದುವರಿದ ಎಸಿಬಿ ಬೇಟೆ
ಬಾಗಲಕೋಟೆ
ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮನೆ ಮೇಲೆ ದಾಳಿ ನಡೆದಿದೆ. ಶಂಕರ್ ಗೋಗಿ ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದು, ಆದಾಯಕ್ಕಿಂತ ಅಧಿಕ ಆಸ್ತಿ ಬಗ್ಗೆ ಮಾಹಿತಿಯ ಹಿನ್ನಲೆಯಲ್ಲಿ ಶಂಕರ್ ಗೋಗಿ ಹಾಗೂ ಆಪ್ತರ ಮನೆ ಸೇರಿ ಐದು ಕಡೆ ಎಸಿಬಿ ದಾಳಿ ಮಾಡಿದೆ.
ಎಸಿಬಿ ಡಿವೈಎಸ್ ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಹದಿನೈದು ಜನ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಬಾಗಲಕೋಟೆ ಆರ್ ಟಿ ಒ ಯಲ್ಲಪ್ಪ ಪಡಸಾಲೆ ಮನೆ ಮೇಲೆಯೂ ಎಸಿಬಿ ದಾಳಿ ಮಾಡಿದ್ದು ಡಿವೈಎಸ್‌ಪಿ ಮಾಂತೇಶ್ ಜಿದ್ದಿ ಸೆಕ್ಟರ್ ನಂ55 ರಲ್ಲಿನ ಮನೆಯಲ್ಲಿ ಪರಿಶೀಲನೆ ಆಗುತ್ತಿದೆ.
ಆರ್ ಟಿ ಒ ಎಲ್ಲಪ್ಪ ಪಡಸಾಲಿ ಮನೆ ಮೇಲಿನ ದಾಳಿ ವೇಳೆ ಆರ್ ಟಿ ಒ ಮನೆಯಲ್ಲಿ 3 ಚಿನ್ನದ ಕಾಯಿನ್, 2 ಬೆಳ್ಳಿ ಕಾಯಿನ್ ಹಾಗೂ ಸುಮಾರು 20 ಲಕ್ಷ ನಗದು ಪತ್ತೆಯಾಗಿದೆ. ಧಾರವಾಡದ ಲಕಮನಹಳ್ಳಿ ಅರವಿಂದ ನಗರದಲ್ಲಿ ಇರುವ ಮನೆಯಾಗಿದ್ದು, ಸದ್ಯ ಬಾಗಲಕೋಟೆಯಲ್ಲಿ ಆರ್‌ಟಿಒ ಆಗಿದ್ದಾರೆ.
ಬಾಗಲಕೋಟೆ ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕರ ಗೋಗಿ ನಿವಾಸದಲ್ಲಿ ದಾಖಲೆಯನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಸದ್ಯ ಮನೆಯಲ್ಲಿ 1 ಲಕ್ಷ 15 ಸಾವಿರ ರೂ. ನಗದು ಹಣ ಪತ್ತೆಯಾಗಿದೆ. ಮಗನ ಹೆಸರಿನಲ್ಲಿ 8 ಲಕ್ಷ 90 ಸಾವಿರ ರೂ. ಇಟ್ಟಿರುವ ಮಾಹಿತಿಯೂ ಸಿಕ್ಕಿದ್ದು ಬಂಗಾರದ ಒಡವೆ, ಚಿನ್ನದ ಸರ, ಬೆಳ್ಳಿಯ ಗಣಪತಿ, ಬೆಳ್ಳಿಯ ಚೆಂಬು, ಲೋಟ, ಸೇರಿ ನಗದು ಪತ್ತೆಯಾಗಿದೆ. ನವನಗರದ ಸೆಕ್ಟರ್ ನಂಬರ್ 55 ರಲ್ಲಿ ಇರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರ ಗೋಗಿ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ.
ವಿಜಯನಗರ
ಹೂವಿನಹಡಗಲಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪರಮೇಶ್ವರಪ್ಪ ಮನೆ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿದೆ. ಸದ್ಯ ಕೂಡ್ಲಿಗಿಯ ಸಣ್ಣ ನೀರಾವರಿ ಇಲಾಖೆಯ ಕಚೇರಿಯಲ್ಲಿ ಕರ್ತವ್ಯ ಮಾಡುತ್ತಿರುವ ಅಧಿಕಾರಿ ಪರಮೇಶ್ವರಪ್ಪ ಸೇರಿದ ಹಗರಿಬೊಮ್ಮನಹಳ್ಳಿಯ ವಾಸದ ಮನೆಗೆ ದಾಳಿ ಆಗಿದೆ. ಚಿತ್ರದುರ್ಗದ ವಿದ್ಯಾನಗರ ಬಡಾವಣೆಯ ಸ್ವಂತದ ಮನೆ ಹಾಗೂ ಕಚೇರಿ ಮೇಲೆ ಪ್ರತ್ಯೇಕ ದಾಳಿ ಆಗಿದೆ.
ಚಿಕ್ಕಮಗಳೂರು
SDA ತಿಮ್ಮಯ್ಯ ನಿವಾಸದ ಮೇಲೆ ಡಿವೈಎಸ್ಪಿ ಅನಿಲ್ ರಾಥೋಡ್ ನೇತೃತ್ವದಲ್ಲಿ ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ತಿಮ್ಮಯ್ಯ ನಿವಾಸ ಹಾಗೂ ತಿಮ್ಮಯ್ಯ ಕರ್ತವ್ಯ ನಿರ್ವಹಿಸುತ್ತಿದ್ದ ಅಜ್ಜಂಪುರ ಪುರಸಭೆ ಕಚೇರಿ, ತಿಮ್ಮಯ್ಯ ತಂದೆಯ ಬಸೂರು ನಿವಾಸದ ಮೇಲೂ ದಾಳಿ ಆಗಿದೆ. ಆದಾಯಕ್ಕಿಂತ 80 ಲಕ್ಷಕ್ಕೂ ಅಧಿಕ ಹಣ ಗಳಿಸಿರುವ ಆರೋಪದಡಿ ಮೂರು ಕಡೆಗಳಲ್ಲೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
ಗದಗ
ಪಂಚಾಯ್ತಿ ಗ್ರೇಡ್ 2 ಸೆಕ್ರೆಟರಿ ಪ್ರದೀಪ್ ಆಲೂರು ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, ಅಸುಂಡಿ ಪಂಚಾಯ್ತಿಯಲ್ಲಿ ಗ್ರೇಡ್ 2 ಸೆಕ್ರೆಟರಿ ಆಗಿರುವ ಪ್ರದೀಪ್ ಆಲೂರು ಹುಲಕೋಟಿ, ಬೆಂತೂರು ಮನೆ, ಅಸುಂಡಿ ಕಚೇರಿ ಮೇಲೆ ದಾಳಿ ನಡೆದಿದೆ.
ಉಡುಪಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗದ ಇಲಾಖೆ ಸಹಾಯಕ ಅಭಿಯಂತರ ಹರೀಶ್ ಮನೆ ಹಾಗೂ ಕಚೇರಿ ಮೇಲೆ ಉಡುಪಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿವೈಎಸ್‌ಪಿ ಮಂಜುನಾಥ ಕವರಿ, ಇನ್ಸ್‌ಪೆಕ್ಟರ್‌ಗಳಾದ ಸತೀಶ್ಜಿ .ಜೆ, ರಫಿಕ್ ಎಂ, ಸಿಬಂದಿ ಯತಿನ್ ಕುಮಾರ್, ಪ್ರಸನ್ನ ದೇವಾಡಿಗ, ರವೀಂದ್ರ ಗಾಣಿಗ, ಅದ್ಬುಲ್ ಜಲಾಲ್, ಅಬ್ದುಲ್ ಲತೀಫ್, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು, ರಮೇಶ್ ಭಂಡಾರಿ ಹಾಗೂ ಪ್ರತಿಮಾ ದಾಳಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ