ಕೊಡಗು: ಕ್ರಿಕೆಟ್ ಪಂದ್ಯಾವಳಿಗಾಗಿ ಬ್ಯಾನರ್ ಕಟ್ಟಲು ಹೋದ ವ್ಯಕ್ತಿಗೆ ಕರೆಂಟ್ ಶಾಕ್ (Electric Shock) ಹೊಡೆದಿದ್ದು, ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಆರಿಫ್ (34) ವಿದ್ಯುತ್ ಅವಘಡದಿಂದ (Accident Case) ಮೃತಪಟ್ಟವರು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಹೀಗಾಗಿ ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟಲು ಮುಂದಾಗಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿ ಕ್ಷಣ ಮಾತ್ರದಲ್ಲೇ ಆರಿಫ್ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಮೂರ್ನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Assault Case : ಹಣಕ್ಕಾಗಿ ಕಿಡ್ನ್ಯಾಪ್; ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್!
ಕಾರು ಪಲ್ಟಿ ಮೂವರು ಗಂಭೀರ
ರಸ್ತೆ ಡಿವೈಡರ್‌ಗೆ ಗುದ್ದಿ ಕಾರು ಪಲ್ಟಿ ಆಗಿದೆ. ಪರಿಣಾಮ ಕಾರಲ್ಲದ್ದ ಮೂವರಿಗೆ ಗಂಭೀರ ಗಾಯವಾಗಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮ ಬಳಿ ರಾ. ಹೆ 50ರಲ್ಲಿ ಘಟನೆ ನಡೆದಿದೆ. ಬೆಂಗಳೂರಿನಿಂದ ಕೊಪ್ಪಳ ಕಡೆ ಚಲಿಸುತ್ತಿದ್ದ ಕಾರು ಪಲ್ಟಿಯಾಗಿದೆ.
ಘಟನೆಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತೋರ್ವ ವ್ಯಕ್ತಿಗೆ ಸಣ್ಣ ಪುಟ್ಟ ಗಾಯವಾಗಿದೆ. ಘಟನಾ ಸ್ಥಳಕ್ಕೆ ಕಾನಾ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾನಾ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರು, ಬೈಕ್ ನಡುವೆ ಭೀಕರ ಅಪಘಾತ; ಸವಾರ ಸಾವು
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಯನಗುಂಟೆ ಬಳಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಯನಗುಂಟೆ ಗ್ರಾಮದ ಕೃಷ್ಣಪ್ಪ ( 70 ) ಮೃತರು.
ಕೃಷ್ಣಪ್ಪ ಹೊಸಕೋಟೆಯಿಂದ ಗ್ರಾಮದ ಕಡೆಗೆ ಬರುತ್ತಿದ್ದಾಗ, ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೆಳಗೆ ಬಿದ್ದ ವೃದ್ಧ ಕೃಷ್ಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು; ಕರೆಂಟ್ ವೈರ್ ತಾಗಿ ವ್ಯಕ್ತಿ ಮೃತ್ಯು
ಶಿವಮೊಗ್ಗ/ಕೋಲಾರ : ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಭೀಕರ ಅಪಘಾತ (Road Accident) ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ದುರ್ಮರಣ ಹೊಂದಿದ್ದಾರೆ. ನಿಂತಿರುವ ಟಿಪ್ಪರ್ ವಾಹನಕ್ಕೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಎರಡು ವಾಹನಗಳ ಮುಂಭಾಗ ಜಖಂಗೊಂಡಿದ್ದು, ಅದರಡಿ ಸಿಲುಕಿದ ಸಲ್ಮಾನ್ ಎಂಬಾತ ಮೃತಪಟ್ಟಿದ್ದಾನೆ.
ತೀರ್ಥಹಳ್ಳಿ ಪಟ್ಟಣದ ದೊಡ್ಡಮನೆಕೇರಿ ನಿವಾಸಿ ಸಲ್ಮಾನ್ ದಾರುಣವಾಗಿ ಮೃತಪಟ್ಟರೆ ಇತ್ತ ಟಿಪ್ಪರ್ ವಾಹನ ಚಾಲಕ ಗಂಭೀರಗೊಂಡಿದ್ದಾರೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಗುಂಬೆಯಿಂದ ತೀರ್ಥಹಳ್ಳಿಗೆ ಬರುವ ವೇಳೆ ದುರ್ಘಟನೆ ನಡೆದಿದೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೋಲಾರದಲ್ಲಿ ಬೈಕ್‌ಗೆ ಲಾರಿ ಡಿಕ್ಕಿ, ಸವಾರ ಸಾವು
ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಬಳಿ ನಡೆದಿದೆ. ಗುಲ್ಲಹಳ್ಳಿ ಗ್ರಾನದ (25) ಮಧು ಮೃತ ದುರ್ದೈವಿ.
ಕಾಮಸಮುದ್ರದಿಂದ ಬೂದಿಕೋಟೆ ಕಡೆ ಬರುತ್ತಿದ್ದ ಲಾರಿಯು ವೇಗವಾಗಿ ಬಂದು ಬೈಕ್ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕ ಲಾರಿ ನಿಲ್ಲಿಸದೇ ಪರಾರಿಯಾಗಿದ್ದಾನೆ. ಬೂದಿಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕೊಪ್ಪಳದಲ್ಲಿ ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸಾವು
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತಪಟ್ಟಿದ್ದಾರೆ. ಈರಪ್ಪ ಕುರಿ (55) ಮೃತ ದುರ್ದೈವಿ. ಕಟ್ಟಿಗೆ ತರಲು ಹೋದಾಗ ಅವಘಡ ನಡೆದಿದೆ. ರೆನ್ಯೂ ವಿಂಡ್ ಪವರ್ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುಕನೂರು ಪೊಲೀಸರು ಪರಿಶೀಲಿಸಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ