ನವದೆಹಲಿ: ಭಾನುವಾರ ಮುಂಜಾನೆ ದೆಹಲಿಯ ಸುಲ್ತಾನಪುರಿಯಲ್ಲಿ ಸಂಭವಿಸಿದ ಕಾರು-ಸ್ಕೂಟಿ ಅಪಘಾತಕ್ಕೆ (Accident in Delhi) ಇದೀಗ ಹೊಸ ತಿರುವೊಂದು ಸಿಕ್ಕಿದೆ. ಅಪಘಾತದಲ್ಲಿ ಮೃತಳಾದ ಯುವತಿಯ ಜತೆಯಲ್ಲಿ ಮತ್ತೊಬ್ಬ ಯುವತಿ ಸ್ಕೂಟಿಯಲ್ಲಿ ಇದ್ದಿದ್ದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮೃತಳಾದ ಯುವತಿ ಹಾಗೂ ಆಕೆಯ ಸ್ನೇಹಿತೆ ಶನಿವಾರ ರಾತ್ರಿ ಹೋಟೆಲ್ ಒಂದರಲ್ಲಿ ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆಂದು ತೆರಳಿದ್ದರು. ಅಲ್ಲಿಂದ ಭಾನುವಾರ ಮುಂಜಾನೆ ಇಬ್ಬರೂ ಒಟ್ಟಿಗೆ ಸ್ಕೂಟಿಯಲ್ಲಿ ಬಂದಿದ್ದಾರೆ. ಆಗ ಈ ಅಪಘಾತ ಸಂಭವಿಸಿದೆ. ಒಬ್ಬ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಕೆ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನೊಬ್ಬ ಯುವತಿಯ ಕಾಲು ಕಾರಿನ ಚಕ್ರಕ್ಕೆ ಸಿಲುಕಿಕೊಂಡ ಹಿನ್ನೆಲೆ ಆಕೆಯನ್ನು ಕಾರು ಎಳೆದುಕೊಂಡು ಹೋಗಿದೆ ಎಂದಿದ್ದಾರೆ ಪೊಲೀಸರು.
ಸ್ಕೂಟಿಯಲ್ಲಿದ್ದ ಯುವತಿ ಹಾಗೂ ಪಾರ್ಟಿಯಲ್ಲಿದ್ದ ಅವರ ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣದ (Accident in Delhi) ತನಿಖೆ ನಡೆಸಿ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:Accident In Delhi | ಕಾರಿನಡಿ ಎಳೆಯಲ್ಪಟ್ಟ ಯುವತಿ ಮೇಲೆ ರೇಪ್ ಆಗಿರಬಹುದು ಎಂದ ಆಪ್; ಕಾರ್ಯಕರ್ತರಿಂದ ಪ್ರತಿಭಟನೆ
ಬಟ್ಟೆ ಇರಲಿಲ್ಲ ಏಕೆ?
ಇದೇ ವೇಳೆ ಮೃತ ಯುವತಿಯ ಕುಟುಂಬದವರು ಅಪಘಾತದ (Accident in Delhi) ಬಗ್ಗೆ ಹಲವಾರು ಅನುಮಾನಗಳನ್ನು ಹೊರಹಾಕಿದ್ದಾರೆ. ಯುವತಿಯ ಶವ ರಸ್ತೆಗೆ ಬಿದ್ದಾಗ ಆಕೆಯ ದೇಹದ ಮೇಲೆ ಒಂದು ಚೂರೂ ಬಟ್ಟೆ ಇರಲಿಲ್ಲ. ಅಪಘಾತವಾಗಿದ್ದೇ ಆದರೆ ಬಟ್ಟೆ ಎಲ್ಲಿಗೆ ಹೋಯಿತು? ಎಂದು ಅವರು ಪ್ರಶ್ನಿಸಿದ್ದಾರೆ. ಇದರ ಹಿಂದೆ ಬೇರೆಯವರ ಕೈವಾಡವಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.