Site icon Vistara News

Accident News : ಭಾರಿ ಮಳೆಗೆ ಉರುಳಿ ಬಿದ್ದ ಮರ; ಬೈಕ್‌ನಲ್ಲಿ ತೆರಳುತ್ತಿದ್ದ ಹೆಸ್ಕಾಂ ನೌಕರರ ದುರ್ಮರಣ

Accident case

ಹಾವೇರಿ: ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ವರುಣನ (Karnataka Rain) ಆರ್ಭಟಕ್ಕೆ ಬೈಕ್‌ ಸವಾರರು (Accident News) ಮೃತಪಟ್ಟಿದ್ದಾರೆ. ಭಾರಿ ಮಳೆಗೆ ಮರವೊಂದು ಉರುಳಿ, ನೇರವಾಗಿ ಸವಾರರ ಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಿರೇಕೆರೂರಿನಲ್ಲಿ ಹೆಸ್ಕಾಂ ನೌಕರರಾಗಿದ್ದ ಮಂಜುನಾಥ (35), ಹನುಮಂತಪ್ಪ (25) ಮೃತ ದುರ್ದೈವಿಗಳು. ಚಿನ್ನಮುಳುಗುಂದ ಗ್ರಾಮದ ನಿವಾಸಿ ಮಂಜುನಾಥ, ಯತ್ತಿನಹಳ್ಳಿ ಗ್ರಾಮದ ನಿವಾಸಿ ಹನುಮಂತಪ್ಪ ಊಟ ಮುಗಿಸಿ ಹೆಸ್ಕಾಂ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಮರವೊಂದು ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಿರೇಕೆರೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ರಾಯಚೂರಿನಲ್ಲಿ ಜನರ ಮೇಲೆ ಬಿದ್ದ ಕಮಾನು

ರಾಯಚೂರಿನಲ್ಲಿ ಜನರ ಮೇಲೆ ಏಕಾಏಕಿ ಕಮಾನು ಕುಸಿದು ಬಿದಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ಕೂದಲೆಳೆಯ ಅಂತರದಲ್ಲಿ ಭಾರಿ ಅನುಹಾತ ತಪ್ಪಿದೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಸಿಗ್ನಲ್ ಬಳಿ ನೂತನ ಎಂಎಲ್‌ಸಿ ಬಸನಗೌಡ ಬಾದರ್ಲಿ ಸ್ವಾಗತಕ್ಕೆ ಕಮಾನು ಹಾಕಲಾಗಿತ್ತು. ಆದರೆ ಏಕಾಏಕಿ ಕಮಾನು ಕಳಚಿ ಬಿದ್ದಿದೆ. ಘಟನೆಯಲ್ಲಿ ವೀರಾಪುರ ಯಮನಪ್ಪ, ಅಂಬಮ್ಮ,ಬೂದಿಹಾಳದ ಚಿಟ್ಟಿಬಾಬು ಎಂಬುವವರಿಗೆ ಗಾಯವಾಗಿದೆ. ಸ್ಥಳೀಯ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಧನೂರು ಟೌನ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Rain : ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಗೋಡೆ ಕುಸಿತ; ನಾಲ್ವರು ಗಂಭೀರ

ಉಡುಪಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್

ಉಡುಪಿಯ ಕೊಲ್ಲೂರು ಸಮೀಪದ ನಾಗೋಡಿ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ವೊಂದು ಚರಂಡಿಗೆ ಉರುಳಿ ಬಿದ್ದಿದೆ. ಶಿವಮೊಗ್ಗದಿಂದ ಕೊಲ್ಲೂರಿನತ್ತ ಬರುತ್ತಿದ್ದ ಖಾಸಗಿ ಬಸ್, ಮಳೆಯಿಂದಾಗಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ವಿದ್ಯಾರ್ಥಿಗಳೆ ಹೆಚ್ಚಾಗಿದ್ದ ಬಸ್‌ನಲ್ಲಿ 17 ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ಎಎಸ್ಪಿ ಎಸ್.ಟಿ‌. ಸಿದ್ಧಲಿಂಗಪ್ಪ, ಕೊಲ್ಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯುವಕನ ತಲೆ ಮೇಲೆ ಮುರಿದು ಬಿದ್ದ ವಿದ್ಯುತ್‌ ಕಂಬ

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ (Karnataka Rain) ಮುಂದುವರಿದಿದೆ. ಜೋರಾಗಿ ಬೀಸಿದ ಗಾಳಿ-ಮಳೆಗೆ ವಿದ್ಯುತ್ ಕಂಬ ಬಿದ್ದಿದೆ. ಅಲ್ಲೆ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ತಲೆಗೆ ಕಂಬ ತಾಗಿದ್ದು, ಗಾಯಗೊಂಡಿದ್ದಾರೆ. ಸ್ವಲ್ಪದರಲ್ಲಿ ಸಾವಿನ‌ ದವಡೆಯಿಂದ ವ್ಯಕ್ತಿ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಾರಗೋಡು ತುಂಬರಗಡಿಯಲ್ಲಿ ಘಟನೆ ನಡೆದಿದೆ. ದಿವೀತ್‌ ಎಂಬುವವರು ಬಸ್ ಇಳಿದು ಹೋಗುತ್ತಿರುವಾಗ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಿದ್ರೆ ಮಂಪರಿನಲ್ಲಿದ್ದಾಗ ಕುಸಿದು ಬಿದ್ದ ಮನೆ

ನಿರಂತರ ಮಳೆಗೆ ಸೋಮವಾರ ನಸುಕಿನ ಜಾವ ಮನೆಯೊಂದು ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದಂತೆ ನಿದ್ದೆಯಲ್ಲಿ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿ ಘಟನೆ ನಡೆದಿದೆ. ರಾಜಕುಮಾರ ಬಾಳಪ್ಪಗೋಳ ಎಂಬುವವರ ಮನೆ ಕುಸಿದಿದೆ. ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version