ಬೆಂಗಳೂರು: ಪರಪ್ಪನ ಜೈಲಿನಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ಹಾಗೂ ಮೊಬೈಲ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಿಚಾರಣೆ ನಡೆಯಲಿದೆ. ಕೋರ್ಟ್ ಅನುಮತಿ ಪಡೆದು ಜೈಲಿನಲ್ಲಿ ವಿಚಾರಣೆಗೆ ಸಿದ್ಧತೆ ನಡೆಯುತ್ತಿದೆ. ಒಂದು ವೇಳೆ ದರ್ಶನ್ ತನಿಖೆಗೆ ಸಹಕಾರ ಕೊಟ್ಟಿಲ್ಲ ಅಂದರೆ ವಶಕ್ಕೆ ಪಡೆಯಲು ತೀರ್ಮಾನ ಮಾಡಿದ್ದಾರೆ.
ಆಗ್ನೇಯ ವಿಭಾಗ ಪೊಲೀಸರು ಮೂರು ಆಯಾಮದಲ್ಲಿ ತನಿಖೆಗೆ ಮುಂದಾಗಿದ್ದಾರೆ. ತನಿಖೆ ಜೊತೆಗೆ ಮಹಜರು ಪ್ರಕ್ರಿಯೆ ಕೂಡ ನಡೆಯಲಿದೆ. ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಕುಳಿತಿದ್ದ ಜಾಗ, ದರ್ಶನ್ ವೀಡಿಯೊ ಕಾಲ್ ಮಾಡಿದ್ದ ಜಾಗದ ಮಹಜರು ನಡೆಯಲಿದೆ.
ದರ್ಶನ್ ವಿರುದ್ಧ ಎರಡು ಪ್ರಕರಣ ದಾಖಲು
ಕೊಲೆ ಆರೋಪಿ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ. ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಕಲಂ 42 ಅಡಿಯಲ್ಲಿ ದಾಖಲಾಗಿದೆ. ಕಾರಾಗೃಹ ಅಧಿನಿಯಮ ಸೆಕ್ಷನ್ 42ಕ್ಕೆ ಆರು ತಿಂಗಳು ಶಿಕ್ಷೆ ಅಥವಾ ಇನ್ನೂರು ರೂಪಾಯಿ ದಂಡ ಇಲ್ಲವಾದರೆ ಶಿಕ್ಷೆ ಜೊತೆಗೆ ದಂಡ ವಿಧಿಸಲು ಅವಕಾಶವಿದೆ.
ವಿಡಿಯೊ ಚಾಟ್ ಮಾಡಿದ ಸತ್ಯ ಲಾಕ್
ಜೈಲಿನಲ್ಲಿರುವ ನಟ ದರ್ಶನ್ ಜತೆ ಸತ್ಯ ವಿಡಿಯೊ ಚಾಟಿಂಗ್ ಮಾಡಿದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ಸತ್ಯನನ್ನು ವಶಕ್ಕೆ ಪಡೆದುಕೊಂಡು, ಪರಪ್ಪನ ಅಗ್ರಹಾರ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಬೇಗೂರು ಇನ್ಸ್ ಪೆಕ್ಟರ್ ನೇತೃತ್ವದ ತಂಡದಿಂದ ಸತ್ಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: Uttarkashi Tour: ಪ್ರವಾಸ ಪ್ರಿಯರಿಗೆ ಸ್ವರ್ಗ ಉತ್ತರಕಾಶಿಗೆ ಹೋಗಲು ಉತ್ತಮ ಸಮಯ ಯಾವುದು?
ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳ ರಚನೆ
ಜೈಲಿನಲ್ಲಿ ರಾಜಾತಿಥ್ಯ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರಿಂದ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಜೈಲಿನ ಲಾನ್‌ನಲ್ಲಿ ಕುಳಿತು ಕಾಫಿ, ಸಿಗರೇಟ್ ಸೇವನೆ ಬಗ್ಗೆ ಬೇಗೂರು ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್ ತನಿಖೆ ನಡೆಸಲಿದ್ದಾರೆ. ರೌಡಿಶೀಟರ್‌ಗಳ ಜತೆ ದರ್ಶನ್ ಬೇರೆತಿದ್ದು ಹೇಗೆ? ಲಾನ್‌ನಲ್ಲಿ ಎಲ್ಲರು ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು, ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧ ಇದ್ದರೂ ಸಿಗರೇಟ್ ಹೇಗೆ ಸಿಕ್ಕಿತು ಎಂದು ತನಿಖೆ ನಡೆಸಲಿದ್ದಾರೆ.
ಇನ್ನೂ ಎರಡನೇ ಪ್ರಕರಣದ ತನಿಖೆ ಹುಳಿಮಾವು ಇನ್ಸ್‌ಪೆಕ್ಟರ್ ಹೆಗಲಿಗೆ ಬಿದ್ದಿದೆ. ಮೊಬೈಲ್ ಫೋನ್‌ನಲ್ಲಿ ಫೋಟೊ ತೆಗದಿದ್ದು ಹಾಗೂ ವಿಡಿಯೊ ಕರೆ ಬಗ್ಗೆ ಹುಳಿಮಾವು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಎರಡನೇ ಪ್ರಕರಣದ ತನಿಖೆ ನಡೆಯಲಿದೆ. ಇನ್ನೂ ಜೈಲಿನಲ್ಲಿ ಫೋಟೊ ತೆಗೆದು ಹೊರಗಡೆ ರವಾನೆ ಮಾಡಿದ್ದು ಯಾರು? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧ ಇದ್ದರೂ ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ? ನೆಟ್ ಕನೆಕ್ಷನ್ ಹೇಗೆ ಬಂತು? ಅಲ್ಲದೇ ಹೊರಗಡೆಯಿಂದ ಜೈಲಿಗೆ ವಿಡಿಯೊ ಕರೆ ಮಾಡಿ ದರ್ಶನ್ ತೋರಿಸಿದ ಬಗ್ಗೆಯೂ ತನಿಖೆ ನಡೆಯಲಿದೆ.
ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮಂಜುನಾಥ್ ಅವರಿಂದ ಮೂರನೇ ಪ್ರಕರಣದ ತನಿಖೆ ನಡೆಯಲಿದೆ. ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸಲಿದ್ದಾರೆ. ಯಾರೆಲ್ಲ ಸಹಾಯ ಮಾಡಿದ್ದರೂ, ಇದರ ಹಿಂದೆ ಯಾರ ಕುಮ್ಮಕ್ಕು ಇದೆ? ಹೇಗೆಲ್ಲ ಸಹಾಯವನ್ನು ಮಾಡುತ್ತಿದ್ದಾರೆ ಎಂಬುದರ ಕುರಿತು ತನಿಖೆ ನಡೆಯಲಿದೆ.
ರೌಡಿಶೀಟರ್‌ಗಳ ರೀತಿ ದರ್ಶನ್‌ಗೂ ಬಂತಾ ಅಲಿಯಾಸ್
ಪೊಲೀಸ್ ರೆಕಾರ್ಡ್ಸ್ ಅಲ್ಲಿ ರೌಡಿಶೀಟರ್‌ಗಳ ರೀತಿ ನಟ ದರ್ಶನ್‌ಗೂ ಅಲಿಯಾಸ್ ಬಂತಾ? ಪರಪ್ಪನ ಅಗ್ರಹಾರ ಎಫ್‌ಐಆರ್‌ನಲ್ಲೂ ದರ್ಶನ್ ಅಲಿಯಾಸ್ ಡಿ ಬಾಸ್ ಎಂದು ನಮೂದಾಗಿದೆ. ದರ್ಶನ್ ತೂಗುದೀಪ್ ಈಗ ದರ್ಶನ್ ಅಲಿಯಾಸ್ ಡಿ ಬಾಸ್ ಎಂದು ಎಪ್‌ಐಆರ್‌ನಲ್ಲಿ ಸೇರಿಸಿದ್ದಾರೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಲಿಯಾಸ್ ಸೇರಿಸಿದ್ದರು. ಇದೀಗ ಪರಪ್ಪನ ಅಗ್ರಹಾರ ಪೊಲೀಸರು ಇದನ್ನು ಮುಂದುವರೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ