Site icon Vistara News

Actor Darshan: ಪ್ರಾಯಶ್ಚಿತದ ಬೇಗೆಯಲ್ಲಿ ದರ್ಶನ್‌; ದುಃಖ ತೋಡಿಕೊಂಡ ಚಾಲೆಂಜಿಂಗ್‌ ಸ್ಟಾರ್‌ ಹೇಳಿದ್ದೇನು?

Actor Darshan

Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಎನ್ನುವ ವ್ಯಕ್ತಿಯ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್‌ (Actor Darshan) ಇದೀಗ ಕೃತ್ಯದ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ. ಪರಿಚಯಸ್ಥ ಅಧಿಕಾರಿಗಳ ಬಳಿ ದುಃಖದಿಂದ ಮಾತನಾಡಿರುವ ಅವರು, ತನ್ನಿಂದ ತಪ್ಪಾಯ್ತು ಎಂದಿದ್ದಾರೆ ಎನ್ನಲಾಗಿದೆ. ಮಹಜರು ಪ್ರಕ್ರಿಯೆ ಮುಗಿದ ಬಳಿಕ ದರ್ಶನ್ ಮನಸ್ಥಿತಿಯಲ್ಲಿ‌ ಬದಲಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ತೀವ್ರ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿರುವ ದರ್ಶನ್, ಪರಿಚಯಸ್ಥ ಅಧಿಕಾರಿಗಳ ಬಳಿ‌ ತಪ್ಪಾಯ್ತು ಎಂದು ಹೇಳುತ್ತಿದ್ದಾರೆ. ಉಗರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು ಎನ್ನುವಂತಾಗಿದೆ ದರ್ಶನ್ ಪರಿಸ್ಥಿತಿ. ಹೀಗಾಗಿ ಅವರು ಪಶ್ಚಾತ್ತಾಪದಿಂದ ನರಳುತ್ತಿದ್ದಾರೆ. ಅಲ್ಲದೆ, ತನ್ನಿಂದಲೇ ಸಹಚರರ ಜೀವನವೂ ಹಾಳಾಯ್ತು ಎಂದಿರುವ ಅವರು ಈ ಬಗ್ಗೆ ಕೊರಗುತ್ತಿದ್ದಾರೆ. ಜತೆಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರನ್ನು ಮುಂದೆ ಎದುರಿಸುವುದು ಹೇಗೆ ಎನ್ನುವ ಚಿಂತೆಯೂ ಅವರನ್ನು ಕಾಡುತ್ತಿದೆ.

ಇತ್ತ ಪ್ರಕರಣದ ಎ 1 ಆರೋಪಿಯಾಗಿರುವ ಪವಿತ್ರಾ ಗೌಡ ಅವರೂ ತೀವ್ರ ನೋವಿನಲ್ಲಿದ್ದಾರೆ. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಮಾಡಿದ್ದ ವಿಚಾರವನ್ನು ದರ್ಶನ್‌ ತನಕ ಕೊಂಡೊಯ್ಯಬಾರದಿತ್ತು. ಸೈಬರ್‌ ಕ್ರೈಂಗೆ ದೂರು ನೀಡಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ ಎಂದು ಅವರು ಆಪ್ತರ ಬಳಿ ದುಃಖ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಇಂದು ನ್ಯಾಯಾಲಯದ ಮುಂದೆ ಆರೋಪಿಗಳು

ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಸಹಚರರ ಭವಿಷ್ಯ ಇಂದು (ಜೂನ್‌ 15) ನಿರ್ಧಾರವಾಗಲಿದೆ. ಪೊಲೀಸರು ಕೋರಮಂಗಲದ ಜಡ್ಜ್​​​​ ನಿವಾಸದಲ್ಲಿ ಆರೋಪಿಗಳನ್ನು ಹಾಜರುಪಡಿಸಲಿದ್ದು, ಬಹುತೇಕ ಜೈಲು ಶಿಕ್ಷೆ ಖಚಿತ ಎನ್ನಲಾಗಿದೆ. ಮಧ್ಯಾಹ್ನದ ವೇಳೆಗೆ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಈಗಾಗಲೇ ಮಹಿಳಾ ಸಾಂತ್ವನ ಕೇಂದ್ರದಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ಇವರನ್ನೂ ಇಂದೇ ಪರಪ್ಪನ ಅಗ್ರಹಾರಕ್ಕೆ ಇಂದೇ ಶಿಫ್ಟ್ ಸಾಧ್ಯತೆ ಇದ್ದು, ಬಟ್ಟೆ, ಬ್ಯಾಗ್ ಸಮೇತ ಠಾಣೆಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?

ದರ್ಶನ್‌ ಅವರ ಗೆಳತಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ದರ್ಶನ್‌ ಸೂಚನೆ ಕೊಟ್ಟಿದ್ದರಿಂದಲೇ ಈ ಕೃತ್ಯ ಎಸಗಿರುವುದಾಗಿ ಆರಂಭದಲ್ಲಿ ಬಂಧಿತರು ಬಾಯ್ಬಿಟ್ಟಿದ್ದರು. ಹೀಗಾಗಿ ಜೂನ್‌ 11ರಂದು ದರ್ಶನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: Actor Darshan: ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು; ದರ್ಶನ್ ವಿರುದ್ಧ ನಟಿ ರಮ್ಯಾ ಮತ್ತೊಂದು ಟ್ವೀಟ್‌!

ರೇಣುಕಾಸ್ವಾಮಿ ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಅವರಿಗೆ ತನ್ನ ಮರ್ಮಾಂಗದ ಫೋಟೊ ಕಳುಹಿಸಿದ್ದ ಎನ್ನಲಾಗಿದೆ. ಅಕೌಂಟ್‌ ವ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ ಕ್ರಿಯೇಟ್‌ ಮಾಡಿ ಮತ್ತೆ ಮತ್ತೆ ಅಶ್ಲೀಲ ಸಂದೇಶ ಕಳುಹಿಸುತ್ತಿರುವ ಬಗ್ಗೆ ಆರಂಭದಲ್ಲಿ ಪವಿತ್ರಾ ಗೌಡ ಮನೆಗೆಲಸದ ಪವನ್‌ ಬಳಿ ಹೇಳಿಕೊಂಡಿದ್ದರು. ಅದನ್ನು ಆತ ದರ್ಶನ್‌ಗೆ ತಿಳಿಸಿದ್ದ. ಬಳಿಕ ರೇಣುಕಾಸ್ವಾಮಿಯನ್ನು ಅಪಹರಿಸಿ ಹಲ್ಲೆ ನಡೆಸಲಾಗಿತ್ತು. ಏಟಿನ ರಭಸಕ್ಕೆ ಮೃತಪಟ್ಟ ರೇಣುಕಾಸ್ವಾಮಿಯ ಶವವನ್ನು ಮೋರಿ ಬಳಿ ಎಸೆಯಲಾಗಿತ್ತು. ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

Exit mobile version