ಬೆಂಗಳೂರು: ರಾಜ್ಯದ ಸಂಚಾರ ಮತ್ತು ರಸ್ತೆ ಸುರಕ್ಷೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ (ADGP Alok Kumar) ಅವರ ವಿರುದ್ಧ ಫೈಟರ್ ರವಿ (Fighter Ravi) ಎಂಬಾತ ದಾಖಲಿಸಿದ್ದ ಒಂದು ಕೋಟಿ ರೂ. ಲಂಚ (1 Crore Graft Charge) ಬೇಡಿಕೆ ಪ್ರಕರಣವನ್ನು ರಾಜ್ಯ ಹೈಕೋರ್ಟ್ (Karnataka High Court) ರದ್ದುಪಡಿಸಿದೆ.
ಬೆಂಗಳೂರಿನ ವಯ್ಯಾಲಿಕಾವಲ್‌ನ ಬಾರ್ ಮತ್ತು ರೆಸ್ಟೊರೆಂಟ್‌ನಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಸಂಚಾರ ಮತ್ತು ರಸ್ತೆ ಸುರಕ್ಷೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಅಲೋಕ್ ಕುಮಾರ್ ಅವರ ಮೇಲೆ ಈ ಗಂಭೀರ ಆರೋಪ ಕೇಳಿಬಂದಿತ್ತು.
ತಮ್ಮ ವಿರುದ್ಧದ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದು ಕೋರಿ ಅಲೋಕ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.
“ಅರ್ಜಿದಾರ ಐಪಿಎಸ್ ಅಧಿಕಾರಿಯ ವಿರುದ್ಧ ವಿಚಾರಣೆಗೆ ಪರಿಗಣಿಸುವುದಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಲೋಕಾಯುಕ್ತ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇಯ ಪರಿಗಣಿಸಿದೆ” ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದ್ದು, “ಅರ್ಜಿದಾರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ಬಳಿಕ ವಿಚಾರಣೆಗೆ ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯ ಸ್ವತಂತ್ರವಾಗಿದೆ” ಎಂದಿದೆ.
“ಆರೋಪ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಅರ್ಜಿದಾರ ಅಲೋಕ್ ಕುಮಾರ್ ಹೆಸರು ಉಲ್ಲೇಖವಾಗಿಲ್ಲ. ಅಲ್ಲದೇ, ಬಾರ್‌ನಲ್ಲಿ ನಡೆದ ಗಲಾಟೆ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ʼಬಿʼ ವರದಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಪ್ರಕರಣ ರದ್ದುಪಡಿಸಲಾಗಿದೆ” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಎಂಟು ವರ್ಷದ ಹಿಂದಿನ ಪ್ರಕರಣ
ಒಂದು ಕೋಟಿ ರೂಪಾಯಿ ಲಂಚಕ್ಕೆ ಅಲೋಕ್ ಕುಮಾರ್ ಬೇಡಿಕೆ ಇಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಮುಖ್ರಮ್ ಅವರು 2015ರ ಜೂನ್ 15ರಂದು ವಯ್ಯಾಲಿಕಾವಲ್ ಠಾಣೆಯ ಕಾನ್‌ಸ್ಟೆಬಲ್ ಚಂದ್ರು ಅಲಿಯಾಸ್ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 7, 13 (1) (ಡಿ) ಜೊತೆಗೆ 13 (2)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಫೈಟರ್ ರವಿ ಅಲಿಯಾಸ್ ಮಲ್ಲಿಕಾರ್ಜುನ್ ಅವರು 2022ರ ಜೂನ್ 10ರಂದು ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು.
ಇದನ್ನು ನ್ಯಾಯಾಲಯ ಮಾನ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ADGP Alok kumar : ಫೈಟರ್ ರವಿ Vs ಎಡಿಜಿಪಿ ಅಲೋಕ್ ಕುಮಾರ್ ಲಂಚ ಬೇಡಿಕೆ ಪ್ರಕರಣ, ರವಿಗೆ ನೋಟಿಸ್
ಫೈಟರ್ ರವಿ ಅವರು ಕಳೆದ ವರ್ಷ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿ ಅಸೆಂಬ್ಲಿ ಟಿಕೆಟ್ ಪಡೆಯಲು ಯತ್ನಿಸಿದ ಹೊತ್ತಿನಲ್ಲಿ ಈ ಪ್ರಕರಣ ಚರ್ಚೆಗೆ ಕಾರಣವಾಗಿತ್ತು.