ದಿಸ್ಪುರ: ಆಧುನಿಕ ಜಗತ್ತಿನಲ್ಲೂ ಜನ ವಾಮಾಚಾರವನ್ನು (Practising Witchcraft) ನಂಬುವವರಿದ್ದಾರೆ. ಇದೇ ವಾಮಾಚಾರದ ಮೂಲಕ ಅಂದುಕೊಂಡಿದ್ದನ್ನು ಸಾಧಿಸಲು ಮನುಷ್ಯರನ್ನು, ಮಕ್ಕಳನ್ನು ಬಲಿ ಕೊಡುವ ದುಷ್ಟರು ಕೂಡ ಇದ್ದಾರೆ. ಇದೇ ವಾಮಾಚಾರಕ್ಕೆ ಅಸ್ಸಾಂನಲ್ಲಿ (Assam) ಆದಿವಾಸಿ ಮಹಿಳೆಯೊಬ್ಬರು (Adivasi Woman) ಬಲಿಯಾಗಿದ್ದಾರೆ. ವಾಮಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಸ್ಸಾಂನಲ್ಲಿ ದುಷ್ಕರ್ಮಿಗಳು ಆದಿವಾಸಿ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಮಹಿಳೆಯು ಮೂರು ಮಕ್ಕಳ ತಾಯಿ ಎಂದು ತಿಳಿದುಬಂದಿದೆ.
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನಿಜ್ ಬಾಹ್‌ಬರಿ ಗ್ರಾಮದ ಹೊರವಲಯದಲ್ಲಿ 30 ವರ್ಷದ ಸಂಗೀತಾ ಕಾಟಿ ಎಂಬ ಆದಿವಾಸಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯು ವಾಮಾಚಾರದಲ್ಲಿ ತೊಡಗಿದ್ದಾರೆ, ಇದರಿಂದ ನಮಗೆ ಕೆಡಕಾಗುತ್ತದೆ ಎಂದು ಭಾವಿಸಿದ ದುಷ್ಕರ್ಮಿಗಳು ಮಹಿಳೆಯ ಮೇಲೆ ಮೊದಲು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯ ಪತಿಯನ್ನು ಕಟ್ಟಿಹಾಕಿ, ಆತನ ಎದುರೇ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪಕ್ಕದ ಮನೆಯವರೇ ಕುಡಿದ ಮತ್ತಿನಲ್ಲಿ ಆದಿವಾಸಿ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ತಲೆಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ. “ಮಹಿಳೆಯು ವಾಮಾಚಾರದಲ್ಲಿ ತೊಡಗಿದ್ದಾಳೆ ಎಂದು ಹಲವು ದುಷ್ಕರ್ಮಿಗಳು ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಆಕೆಯನ್ನು ಜೀವಂತವಾಗಿ ಸುಟ್ಟಿದ್ದಾರೆ” ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಧುರಿಮಾ ದಾಸ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Physical Abuse: ಮನೆಗೆಲಸಕ್ಕೆ ಬಂದ ದಲಿತ ಮಹಿಳೆ ಮೇಲೆ ಅತ್ಯಾಚಾರ; ದೇಹ ತುಂಡರಿಸಿದ ಕಟುಕರು
ಹತ್ಯೆ ಮಾಡಿದವರು ಪಕ್ಕದ ಮನೆಯವರು ಎಂದು ತಿಳಿದುಬಂದಿದೆ. ಕೆಲ ತಿಂಗಳಿಂದ ಮಹಿಳೆಯ ಕುಟುಂಬಸ್ಥರು ಹಾಗೂ ಪಕ್ಕದ ಮನೆಯವರ ಮಧ್ಯೆ ಗಲಾಟೆ ನಡೆದಿತ್ತು. ಎರಡೂ ಕುಟುಂಬಗಳು ದ್ವೇಷ ಕಾರುತ್ತಿದ್ದವು. ಇದೇ ಕಾರಣದಿಂದಾಗಿ ಮಹಿಳೆಯು ವಾಮಾಚಾರ ಮಾಡಿಸುತ್ತಿದ್ದಾಳೆ. ನಮ್ಮ ಕುಟುಂಬವನ್ನು ಹಣಿಯುತ್ತಾಳೆ ಎಂದು ಭಾವಿಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್‌ನಲ್ಲಿಯೇ ನಾಗ್ಪುರದಲ್ಲಿ ವಾಮಾಚಾರದ ಭಾಗವಾಗಿ ವೃದ್ಧ ದಂಪತಿ ಹಾಗೂ ಅವರ ಮೊಮ್ಮಗಳನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಆರೋಪಿಗಳನ್ನು ಬಂಧಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ