Site icon Vistara News

Sukesh Case | ‘ರಕ್ಕಮ್ಮ’ ಜಾಕ್ವೆಲಿನ್, ನೋರಾ ಬಳಿಕ ಇನ್ನೂ 4 ನಟಿಯರ ವಿಚಾರಣೆ ಸಾಧ್ಯತೆ

Sukesh Case

ನವ ದೆಹಲಿ: ಸುಕೇಶ್ ಚಂದ್ರಶೇಖರ್ 200 ಕೋಟಿ ರೂ. ಸುಲಿಗೆ (Sukesh Case) ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮೂಲದ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದಿಲ್ಲಿ ಪೊಲೀಸ್‌ ಆರ್ಥಿಕ ಅಪರಾಧ ವಿಂಗ್ 8 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿದೆ. ಈ ವಿಚಾರಣೆ ಬೆನ್ನಲ್ಲೇ ಬಾಲಿವುಡ್‌ನ ಕೆಲವು ನಟ- ನಟಿಯರು ವಿಚಾರಣೆಯ ಭಯವನ್ನು ಎದುರಿಸುತ್ತಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್‌ಗೆ ಒಟ್ಟು ಮೂರು ಸಮನ್ಸ್ ನೀಡಲಾಗಿತ್ತು. ಆಗಸ್ಟ್ 29 ಮತ್ತು ಸೆಪ್ಟೆಂಬರ್ 12ರ ಸಮನ್ಸ್‌ಗೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅಂತಿಮವಾಗಿ ಅವರು ಗುರುವಾರ ವಿಚಾರಣೆಗೆ ಹಾಜರಾಗಿದ್ದರು. ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ಜಾಕ್ವೆಲಿನ್ ನಟಿಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಮಾತ್ರವಲ್ಲದೇ ಬಾಲಿವುಡ್‌ನ ನೋರಾ ಫತೇಹಿ ಅವರನ್ನು ವಿಚಾರಣೆ ಮಾಡಲಾಗಿದೆ. ಈಗ ನಟಿಯರಾದ ನಿಖಿತಾ ತಾಂಬೋಳಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್, ಅರುಶಾ ಪಾಟೀಲ್ ಅವರನ್ನು ದಿಲ್ಲಿ ಪೊಲೀಸ್‌ನ ಅಪರಾಧ ವಿಂಗ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಮೊದಲು ಜಾರಿ ನಿರ್ದೇಶನಾಲಯವು ಇವರೆಲ್ಲರನ್ನೂ ವಿಚಾರಣೆ ನಡೆಸಿದೆ. ದಿಲ್ಲಿ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್‌ನನ್ನು ಈ ನಾಲ್ವರು ಪಿಂಕಿ ಇರಾನಿ ಮೂಲಕ ಭೇಟಿಯಾಗಿದ್ದರು.

ಈ ಪೈಕಿ ನಿಖಿತಾ ತಾಂಬೋಳಿ ಅವರು ಸುಕೇಶ್‌ನನ್ನು ತಿಹಾರ್ ಜೈಲಿನಲ್ಲಿ ಎರಡು ಸಲ ಭೇಟಿ ಮಾಡಿದ್ದಾರೆ. ಪಿಂಕಿ ಇರಾನಿ ಈ ಕಾರ್ಯಕ್ಕೆ ನೆರವು ನೀಡಿದ್ದಾರೆ. ನಿಖಿತಾ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡ ಬಳಿಕ ಹೆಚ್ಚು ಪ್ರಸಿದ್ಧಿಗೆ ಬಂದಿದ್ದರು.

ಕಿರುತೆರೆಯಲ್ಲಿ ಪ್ರಖ್ಯಾತರಾಗಿರುವ ಚಾಹತ್ ಖನ್ನಾ ಅವರನ್ನು ವಿಚಾರಣೆೊಳಪಡಿಸುವ ಸಾಧ್ಯತೆ ಇದೆ. ಇ.ಡಿ ವಿಚಾರಣೆ ವೇಳೆ, ಪಿಂಕಿ ಇರಾನಿಯೇ ಸುಕೇಶ್‌ನನ್ನು ಪರಿಚಯಿಸಿದ್ದು ಎಂದು ಹೇಳಿದ್ದರು. ದಕ್ಷಿಣ ಭಾರತದ ನಿರ್ಮಾಪಕನ ಸೋಗಿನಲ್ಲಿ ಸುಕೇಶ್ ಮೀಟ್ ಆಗಿದ್ದ. ಕಿರುತೆರೆ ನಟಿ ಸೋಫಿಯಾ ಸಿಂಗ್ ಕೂಡ ವಿಚಾರಣೆಗೊಳಪಡುವ ಸಾಧ್ಯತೆ ಇದೆ. ಆರೋಪಿ ಸುಕೇಶ್, ತಾನು ಚಿತ್ರ ನಿರ್ಮಾಪಕ ಎಂದೇ ಪರಿಚಯಿಸಿಕೊಂಡಿದ್ದ.

ಹಾಗೆ ನೋಡಿದರೆ, ಅರುಶಾ ಪಾಟೀಲ್, ಆರೋಪಿ ಸುಕೇಶ್‌ನನ್ನು ಎಂದಿಗೂ ಭೇಟಿಯಾಗಿಲ್ಲ. ಆದರೆ, ಆತನೊಂದಿಗೆ ವಾಟ್ಸಾಪ್ ಮೂಲಕ ಮಾತನಾಡಿದ್ದಾರೆ. ಅದಕ್ಕಾಗಿ ಆಕೆಗೆ 5.2 ಲಕ್ಷ ರೂ. ಪೇ ಮಾಡಲಾಗಿದ್ದು, ಈ ಪೈಕಿ 1 ಲಕ್ಷ ರೂಪಾಯಿಯನ್ನು ಅವರು ಪಿಂಕಿ ಇರಾನಿಗೆ ನೀಡಿದ್ದಾರೆ. ಹಾಗಾಗಿ, ಅರುಶಾ ಪಾಟೀಲ್ ಅವರನ್ನು ಇದೀಗ ದಿಲ್ಲಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಜೈಲಿನಿಂದಲೇ ಸುಕೇಶ್ 200 ಕೋಟಿ ರೂ. ಸುಲಿಗೆ ವ್ಯವಹಾರವನ್ನು ನಡೆಸುತ್ತಿದ್ದಾನೆ ಎಂದು ರಾನ್‌ಬಾಕ್ಸಿ ಮಾಜಿ ಮಾಲೀಕ ಹಾಗೂ ಜೈಲಿನಲ್ಲಿರುವ ಶಿವಿಂದೇರ್ ಸಿಂಗ್ ಅವರ ಪತ್ನಿ ಆದಿತಿ ಸಿಂಗ್ ಅವರು ಆರೋಪಿಸಿದ್ದರು. ಬೆಂಗಳೂರು ಮೂಲದ ಸುಕೇಶ್ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್‌ ವಂಚಕ ಸುಕೇಶ್‌ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?

Exit mobile version