ನವ ದೆಹಲಿ: ಏರ್ ಇಂಡಿಯಾ ( Air India) ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಕುಡುಕ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ. ಇದಾದ ಬಳಿಕವೂ ಪೈಲಟ್, ಬೇರೆ ಸೀಟು ಕೊಡಲು ನಿರಾಕರಿಸಿದ್ದರು ಎಂದು ಹಿರಿಯ ಮಹಿಳೆ ದೂರಿದ್ದಾರೆ.
ಕಳೆದ ನವೆಂಬರ್ 26ರಂದು ನ್ಯೂಯಾರ್ಕ್-ದೆಹಲಿ ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿತ್ತು. ಆದರೆ ಬಹಿರಂಗವಾಗಿರಲಿಲ್ಲ. ಇತ್ತೀಚೆಗೆ ಮಹಿಳೆ ತನಗಾದ ಕಳವಳಕಾರಿ ಅನುಭವದ ಬಗ್ಗೆ ಏರ್ ಇಂಡಿಯಾ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಮಾಧ್ಯಮಗಳಲ್ಲೂ ಸುದ್ದಿಯಾಗಿ ಬಹಿರಂಗವಾಗಿದೆ.
ಏರ್ ಇಂಡಿಯಾ ವಿಮಾನದಲ್ಲಿ ಆಗಿದ್ದೇನು?
ಅಮೆರಿಕದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಕೆಲ ತಾಸುಗಳ ಬಳಿಕ ಪ್ರಯಾಣಿಕರಿಗೆ ಊಟವನ್ನು ನೀಡಲಾಯಿತು. ಎಲ್ಲರೂ ಊಟ ಮಾಡಿದ ಬಳಿಕ ಸ್ವಿಚ್ಗಳನ್ನೆಲ್ಲ ಆಫ್ ಮಾಡಲಾಯಿತು. ಅದಾಗಿ ಕೆಲ ಹೊತ್ತಲ್ಲಿ ಪ್ರಯಾಣಿಕನೊಬ್ಬ ಎದ್ದು ಪಕ್ಕದ ಸೀಟ್ನಲ್ಲಿ ಕುಳಿತಿದ್ದ ಮಹಿಳೆ ಬಳಿಗೆ ಬಂದ. ಪ್ಯಾಂಟ್ ಜಿಪ್ ತೆರೆದು ಆಕೆಯ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ. ಹಲವು ನಿಮಿಷಗಳ ಕಾಲ ತನ್ನ ಖಾಸಗಿ ಅಂಗವನ್ನು ಹಾಗೇ ಪ್ರದರ್ಶಿಸುತ್ತ ನಿಂತಿದ್ದ, ಅವನು ಕುಡಿದಿದ್ದ ಎಂದು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾಳೆ.
ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆದ ಮೇಲೆ ಆ ಪ್ರಯಾಣಿಕ ಇಳಿದು ಹೋಗಿದ್ದ. ಆತನ ವಿರುದ್ಧ ಯಾವುದೇ ಕ್ರಮವೂ ಜರುಗಲಿಲ್ಲ. ನಾನು ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿದ್ದರೂ, ಆತನನ್ನು ಹೋಗಲು ಬಿಟ್ಟರು. ತುಂಬ ಸೂಕ್ಷ್ಮವಾದ ಮತ್ತು ಆಘಾತಕಾರಿ ಸನ್ನಿವೇಶದಲ್ಲಿ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವು ಸಿಬ್ಬಂದಿಗೆ ಇರಲಿಲ್ಲ ಎಂದು ಮಹಿಳೆ ಹೇಳಿದ್ದರು.
ಬೇರೆ ಸೀಟು ಕೊಡದ ಸಿಬ್ಬಂದಿ: ಮಹಿಳೆ ಅಳಲು
ಕುಡುಕ ಮೂತ್ರ ವಿಸರ್ಜಿಸಿದ್ದರಿಂದ ನನ್ನ ಬಟ್ಟೆ, ಶೂಗಳು ಮತ್ತು ಬ್ಯಾಗ್ ತೊಯ್ದು ಹೋಗಿತ್ತು. ಬ್ಯಾಗ್‌ನಲ್ಲಿ ನನ್ನ ಪಾಸ್‌ಪೋರ್ಟ್, ಟ್ರಾವೆಲ್ ಕುರಿತ ದಾಖಲಾತಿಗಳು ಮತ್ತು ಕರೆನ್ಸಿ ಇತ್ತು. ಅದನ್ನು ಮುಟ್ಟಲು ಸಿಬ್ಬಂದಿ ನಿರಾಕರಿಸಿದರು. ಅವುಗಳಿಗೆ ಡಿಸ್‌ಇನ್‌ಫೆಕ್ಟೆಂಟ್ ದ್ರಾವಣವನ್ನು ಸಿಂಪಡಿಸಿದರು. ಹಾಗೂ ನನ್ನನ್ನು ಬಾತ್ ರೂಮ್‌ಗೆ ಕರೆದುಕೊಂಡು ಹೋದರು. ಏರ್‌ಲೈನ್ ಪೈಜಾಮ್ ಮತ್ತು ಸಾಕ್ಸ್‌ನ ಒಂದು ಪ್ರತಿಯನ್ನು ಕೊಟ್ಟರು. ನಾನು ಬೇರೆ ಸೀಟು ನೀಡುವಂತೆ ಕೋರಿದೆ. ಲಭ್ಯವಿಲ್ಲ ಎಂದರು. ಆದರೆ ಫಸ್ಟ್ ಕ್ಲಾಸ್ ದರ್ಜೆಯಲ್ಲಿ ಖಾಲಿ ಸೀಟುಗಳು ಇತ್ತು ಎಂದು ಸಹ ಪ್ರಯಾಣಿಕರೊಬ್ಬರು ನನಗೆ ತಿಳಿಸಿದರು.
ಕುಡುಕ ಮೂತ್ರ ವಿಸರ್ಜಿಸಿದ ಬಳಿಕ ಸೀಟನ್ನು ಒರೆಸಿ ಬಟ್ಟೆಯೊಂದನ್ನು ಹೊದಿಸಿದ್ದರೂ, ಅದರಿಂದ ವಾಸನೆ ಬರುತ್ತಿತ್ತು. ಹೀಗಾಗಿ ನಾನು ಆ ಸೀಟಿನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದೆ. 20 ನಿಮಿಷಗಳ ಕಾಲ ನಿಂತುಕೊಂಡೇ ಕಾದ ಬಳಿಕ ವಿಮಾನದ ಹಿರಿಯ ಸಿಬ್ಬಂದಿಯೊಬ್ಬರು ಏರ್‌ಲೈನ್ ಉದ್ಯೋಗಿಗಳು ಬಳಸುವ ಸಣ್ಣ ಸೀಟೊಂದನ್ನು ಒದಗಿಸಿದರು. ಆ ಸೀಟಿನಲ್ಲಿಯೇ ಎರಡು ಗಂಟೆ ಕಾಲ ಕಳೆದೆ. ಫಸ್ಟ್ ಕ್ಲಾಸ್ ದರ್ಜೆಯಲ್ಲಿ ಸೀಟು ಕೊಡಲು ಪೈಲಟ್ ನಿರಾಕರಿಸಿದ್ದ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು ಎಂದು ಸಂತ್ರಸ್ತ ಮಹಿಳೆ ವಿವರಿಸಿದ್ದಾರೆ.
ಕುಡುಕನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದ ಮಹಿಳೆ: ನನ್ನ ಮೇಲೆ ಮೂತ್ರಿಸಿದ್ದ ಕುಡುಕನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಬೇಕು ಎಂದು ಬಯಸಿದ್ದೆ. ಈ ಬಗ್ಗೆ ವಿಮಾನದ ಸಿಬ್ಬಂದಿ ಭರವಸೆ ನೀಡಿದ್ದರು. ಆದರೆ ಬಳಿಕ ಆತ ಕ್ಷಮೆ ಯಾಚನೆಗೆ ಬಯಸಿದ್ದಾನೆ ಎಂದರು. ಆದರೆ ನಾನು ಖಡಾಖಂಡಿತವಾಗಿ ನಿರಾಕರಿಸಿದೆ. ಆತನ ಮುಖ ಕೂಡ ನೋಡಲಾರೆ ಎಂದಿದ್ದೆ. ಹೀಗಿದ್ದರೂ ನನ್ನ ಇಚ್ಛೆಗೆ ವಿರುದ್ಧವಾಗಿ ಆತನನ್ನು ಎದುರಿಗೆ ಕರೆತರಲಾಯಿತು. ಮನೆಯಲ್ಲಿ ಹೆಂಡತಿ, ಮಕ್ಕಳು ಇದ್ದಾರೆ, ಇದೊಂದು ಸಲ ಕ್ಷಮಿಸಿ ಎಂದು ಗೋಗರೆದು ಅತ್ತು ಬಿಟ್ಟ. ಆ ಕ್ಷಣ ನನಗೂ ನಿರ್ಧಾರ ಕೈಗೊಳ್ಳುವುದು ಕಷ್ಟವಾಗಿತ್ತು. ಅಷ್ಟರಮಟ್ಟಿಗೆ ಮನಸ್ಸಿಗೆ ಆಘಾತವಾಗಿತ್ತು. ಹೀಗಾಗಿ ಆತನನ್ನು ಬಂಧಿಸುವಂತೆ ಮತ್ತೆ ಸೂಚಿಸಲು ಕಷ್ಟಕರವಾಯಿತು.
ಟಿಕೆಟ್ ದರ ರಿಫಂಡ್ ಆಗಿಲ್ಲ: ಏರ್ ಇಂಡಿಯಾ ಟಿಕೆಟ್ ದರವನ್ನು ರಿಫಂಡ್ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಭಾಗಶಃ ಮೊತ್ತ ಮಾತ್ರ ರಿಫಂಡ್ ಆಗಿದೆ. ನನಗೆ ಆಗಿರುವ ಆಘಾತಕ್ಕೆ ಹೋಲಿಸಿದರೆ ಇದು ಯಾವುದೇ ಪರಿಹಾರವಲ್ಲ. ನನ್ನಂಥ ಹಿರಿಯ ನಾಗರಿಕಳಿಗೆ ಸುರಕ್ಷಿತ ಪ್ರಯಾಣ ಕಲ್ಪಿಸದ ಏರ್‌ಲೈನ್‌ಗೆ ಶೇಮ್ ಆಗಬೇಕು ಎಂದು ಮಹಿಳೆ ವಿವರಿಸಿದ್ದಾರೆ.
ಕುಡುಕ ಪ್ರಯಾಣಿಕನ ಗುರುತು ಪತ್ತೆ
ಈ ನಡುವೆ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ ವ್ಯಕ್ತಿಯನ್ನು ಶಂಕರ್ ಮಿಶ್ರಾ ಎಂದು ಗುರುತಿಸಲಾಗಿದೆ. ಈತ ಅಮೆರಿಕದ ಮೂಲದ ಹಣಕಾಸು ಸೇವಾ ಕಂಪನಿ ವೆಲ್ಸ್ ಫಾರ್ಗೊದ ಭಾರತೀಯ ಘಟಕದ ಉಪಾಧ್ಯಕ್ಷ. ಕ್ಯಾಲಿಫೋರ್ನಿಯಾದಲ್ಲಿ ಕಂಪನಿಯ ಪ್ರಧಾನ ಕಚೇರಿ ಇದೆ. ಮೂಲಗಳ ಪ್ರಕಾರ ದಿಲ್ಲಿ ಪೊಲೀಸರು ಈತನ ಪತ್ತೆಗೆ ಲುಕ್ ಔಟ್ ಸುತ್ತೋಲೆಯನ್ನು ಹೊರಡಿಸಿದ್ದಾರೆ. ತಲೆಮರೆಸಿಕೊಂಡಿರುವ ಶಂಕರ್ ಮಿಶ್ರಾ ಮುಂಬಯಿ ನಿವಾಸಿಯಾಗಿದ್ದು, ಈತನನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿ ಏರ್ ಇಂಡಿಯಾಗೆ ಡಿಜಿಸಿಎ ನೋಟಿಸ್ ನೀಡಿದೆ.