Site icon Vistara News

Alt News ಸಹಸಂಸ್ಥಾಪಕ ಜುಬೇರ್‌ ವಿರುದ್ಧ ಸಾಕ್ಷ್ಯ ನಾಶ, ವಿದೇಶಿ ಫಂಡ್‌ ಸ್ವೀಕಾರದ ಹೊಸ ಆರೋಪ

Zuber Alt news

ನವ ದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಟ್ವೀಟ್‌ ಮಾಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಆಲ್ಟ್‌ ನ್ಯೂಟ್‌ (Alt news) ಎಂಬ ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ನ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾನೆ.

ಜೂನ್‌ ೨೭ರಂದು ದಿಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದು, ಕಳೆದ ಐದು ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿದ್ದಾನೆ. ಶನಿವಾರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಲ್ಲದೆ, ಸಮಗ್ರ ತನಿಖೆಗಾಗಿ ಇನ್ನೂ ೧೪ ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕು ಎಂದು ಕೋರಲಾಗಿದೆ. ಈ ನಡುವೆ, ಜುಬೇರ್‌ ಮೇಲೆ ಇನ್ನಷ್ಟು ಆರೋಪಗಳನ್ನು ಹೊರಿಸಲಾಗಿದೆ. ಜುಬೇರ್‌ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ ಮತ್ತು ವಿದೇಶಿ ಫಂಡ್‌ ಸ್ವೀಕರಿಸಿದ್ದಾನೆ ಎನ್ನುವದು ಹೊಸದಾಗಿ ಮಾಡಲಾಗಿರುವ ಆರೋಪ.

೨೦೧೮ರಲ್ಲಿ ಪೋಸ್ಟ್‌ ಮಾಡಿದ್ದ ಒಂದು ಆಕ್ಷೇಪಾರ್ಹ ಟ್ವೀಟ್‌ಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಇನ್ನಷ್ಟು ಆರೋಪಗಳನ್ನು ಹೊರಿಸಿದ್ದಾರೆ. ಬಂಧನದ ಬಳಿಕ ಆತನ ಮೊಬೈಲ್‌ ಫೋನ್‌ ಮತ್ತು ಹಾರ್ಡ್‌ ಡಿಸ್ಕನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಆತ ಎರಡನ್ನೂ ಫಾರ್ಮಟ್‌ ಮಾಡುವ ಮೂಲಕ ದಾಖಲೆಗಳನ್ನು ನಾಶ ಮಾಡಿದ್ದಾನೆ ಮತ್ತು ಕೆಲವೊಂದು ಟ್ವೀಟ್‌ಗಳನ್ನೂ ಅಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಮೇಲೆ ಸಾಕ್ಷ್ಯ ನಾಶ (ಐಪಿಸಿ ಸೆಕ್ಷನ್‌ ೨೦೧), ಕ್ರಿಮಿನಲ್‌ ಸಂಚು (೧೨೦ಬಿ), ವಿದೇಶಿ ಸಹಾಯಧನ ನಿಯಂತ್ರ ಕಾಯಿದೆ (ಎಫ್‌ಆರ್‌ಸಿಎ) ಯ ಸೆಕ್ಷನ್‌ ೩೫ರ ಅಡಿಯಲ್ಲಿ ಹೊಸ ಆರೋಪಗಳನ್ನು ಮಾಡಲಾಗಿದೆ.

ಜುಬೇರ್‌ ಮೇಲೆ ಈ ಹಿಂದೆ ದೊಂಬಿ ಎಬ್ಬಿಸುವ ಉದ್ದೇಶದಿಂದ ಪ್ರಚೋದನೆ ನೀಡುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರ್ವಕ ಕೃತ್ಯ (೨೯೫ಎ)ಕ್ಕೆ ಸಂಬಂಧಿಸಿ ದೋಷಾರೋಪ ಮಾಡಲಾಗಿತ್ತು.

ಏನಿದು ಪ್ರಕರಣ?‌

ಜುಬೇರ್‌ 2018ರಲ್ಲಿ ಹಾಗೂ 2020ರಲ್ಲಿ ಮಾಡಿದ ಎರಡು ಟ್ವೀಟ್‌ಗಳು ವಿವಾದ ಸೃಷ್ಟಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ 2020ರಲ್ಲಿ ಈತನನ್ನು ಬಂಧಿಸಲಾಗಿತ್ತು. ಮಾರ್ಚ್‌ 24, 2018ರಂದು ಜುಬೇರ್‌, ಮೊದಲು: ಹನಿಮೂನ್‌ ಹೋಟೆಲ್‌, 2014ರ ನಂತರ: ಹನುಮಾನ್‌ ಹೋಟೆಲ್‌ ಎಂದು ಮಾರ್ಪಾಟು ಮಾಡಿದ ಚಿತ್ರ ಪೋಸ್ಟ್‌ ಮಾಡಿದ್ದ. ಇದಕ್ಕೆ ಪರ-ವಿರೋಧವಾಗಿ ಅನೇಕ ಮಂದಿ ಪ್ರತಿಕ್ರಿಯಿಸಿದ್ದರು. ಇದು ಪ್ರಚೋದನಾಕಾರಿ ಟ್ವೀಟ್‌ ಎಂದು ಪೊಲೀಸರು ಪರಿಗಣಿಸಿದ್ದರು. ಈ ರೀತಿಯ ಅನೇಕ ವಿವಾದಾತ್ಮಕ ಟ್ವೀಟ್‌ಗಳನ್ನು ಜುಬೇರ್‌ ಮಾಡಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬೇರ್‌ನನ್ನು ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಲು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು ಒಂದು ದಿನ ಪೊಲೀಸ್‌ ಕಸ್ಟಡಿಗೆ ಒಳಪಡಿಸಲು ಅನುಮತಿ ನೀಡಿತ್ತು. 2020ರಲ್ಲಿ ಜುಬೇರ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ವೇಳೆ ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ರಕ್ಷಣೆಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆ ತನಿಖೆಯಲ್ಲಿ ಜುಬೇರ್‌ ವಿರುದ್ಧ ಯಾವುದೇ ಆಕ್ಷೇಪಾರ್ಹ ಸಂಗತಿ ಕಂಡಿಲ್ಲ ಎಂದು ಬಿಡುಗಡೆ ಮಾಡಲಾಗಿತ್ತು. ಆದರೆ ಆ ಟ್ವೀಟ್‌ ಇನ್ನಷ್ಟು ಹೊಸ ಟ್ವೀಟ್‌ಗಳಿಗೆ ಕಾರಣವಾಗಿದ್ದು, ಕೋಮು ಪ್ರಚೋದನಕಾರಿಯಾಗಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಜುಬೇರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version