ನವ ದೆಹಲಿ: ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಜುಬೇರ್ ಮೇಲೆ ಒಂದಾದ ಮೇಲೊಂದರಂತೆ ಕೇಸುಗಳು ಬೀಳುತ್ತಿದೆ. ಉತ್ತರ ಪ್ರದೇಶವೊಂದರಲ್ಲೇ ಒಟ್ಟು ಏಳು ಕೇಸುಗಳು ದಾಖಲಾಗಿವೆ. ಈ ಪೈಕಿ ಹತ್ರಾಸ್‌ನಲ್ಲಿ ದಾಖಲಾದ ಎರಡು ಪ್ರಕರಣಗಳ ವಿಚಾರಣೆ ಗುರುವಾರ ನಡೆದು ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹತ್ರಾಸ್ ನ್ಯಾಯಾಲಯ ಜುಲೈ ೨೭ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಹಿಂದೂಗಳ ಭಾವನೆಗಳಿಗೆ ಘಾಸಿ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ನನ್ನು ಜೂನ್ ೨೭ರಂದು ದಿಲ್ಲಿ ಪೊಲೀಸರು ಬಂಧಿಸಿದ್ದರು. ಅಲ್ಲಿನ ಪ್ರಧಾನ ಪ್ರಕರಣ ಒಂದು ಕಡೆ ನಡೆಯುತ್ತಿದ್ದರೆ ಇತ್ತ ದೇಶದ ನಾನಾ ಭಾಗಗಳಲ್ಲಿ ದಾಖಲಾಗಿದ್ದ ಕೇಸುಗಳಿಗೆ ಸಂಬಂಧಿಸಿ ಆತನ ವಿಚಾರಣೆಗಳು ನಡೆಯುತ್ತಿವೆ.
ಉತ್ತರ ಪ್ರದೇಶವೊಂದರಲ್ಲೇ ಲಖೀಂಪುರ, ಸೀತಾಪುರ, ಗಾಜಿಯಾಬಾದ್, ಮುಜಫ್ಫರ್‌ನಗರ್, ಚಂದೌಲಿ ಮತ್ತು ಹತ್ರಾಸ್‌ಗಳಲ್ಲಿ ಏಳು ಕೇಸುಗಳು ದಾಖಲಾಗಿದ್ದವು. ನಿಜವೆಂದರೆ ಸೀತಾಪುರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆತನಿಗೆ ಜಾಮೀನು ನೀಡಿತ್ತು. ಆದರೆ, ಪ್ರಧಾನ ಪ್ರಕರಣದಲ್ಲಿ ಜಾಮೀನು ಸಿಕ್ಕಿರಲಿಲ್ಲ. ಬಳಿಕ ಲಖೀಂಪುರದ ಪ್ರಕರಣದಲ್ಲಿ ವಿಧಿಸಲಾದ ನ್ಯಾಯಾಂಗ ಬಂಧನದ ಅವಧಿ ಜುಲೈ ೨೭ರವರೆಗೂ ಇದೆ. ಈ ನಡುವೆ, ಹತ್ರಾಸ್‌ನ ಪ್ರಕರಣ ಎದ್ದು ಬಂದಿದ್ದು, ಜುಲೈ ೨೭ರವರೆಗೂ ಹೊರಗೆ ಬರುವಂತಿಲ್ಲ.
ಜುಬೇರ್ ವಿರುದ್ಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಜುಲೈ ೪ರಂದು ಕೇಸು ದಾಖಲಾಗಿತ್ತು. ಈ ವೇಳೆ ಸೀತಾಪುರ್ ಜೈಲಿನಲ್ಲಿದ್ದ ಆತನಿಗೆ ವಾರಂಟ್ ನೀಡಲಾಗಿತ್ತು. ಅಲ್ಲಿಂದ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.
ಜುಬೇರ್ ಮೇಲಿರುವ ಆರೋಪ ಏನು?
ಆಲ್ಟ್ ನ್ಯೂಸ್ (alt news) ಮಾಧ್ಯಮದಲ್ಲಿ ಫ್ಯಾಕ್ಟ್ ಚೆಕ್ ನೆಪದಲ್ಲಿ ಅನೇಕ ವಿವಾದ ಸೃಷ್ಟಿಸಿದ ಆರೋಪ ಜುಬೇರ್ ಮೇಲಿದೆ. ಈ ಮಾಧ್ಯಮದಲ್ಲಿ ಸಾಮಾನ್ಯವಾಗಿ ಹಿಂದುತ್ವ ವಿರೋಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನೇಕ ಸುದ್ದಿಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು. ಇದು ವಿವಾದದ ಕಿಡಿ ಎಬ್ಬಿಸುತ್ತಿತ್ತು. ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಭಾಗ 153 (ಉದ್ದೇಶಪೂರ್ವಕ ಕೋಮು ಗಲಭೆಗೆ ಪ್ರಚೋದನೆ ನೀಡುವುದು) ಹಾಗೂ ವಿಭಾಗ 295A (ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಪೊಲೀಸ್ ಇಲಾಖೆಯ ಇಂಟಲಿಜೆನ್ಸ್ ಫ್ಯೂಷನ್ ಹಾಗೂ ಸ್ಟ್ರಾಟಜಿಕ್ ಆಪರೇಷನ್ ವಿಭಾಗ ಜುಬೇರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಈತ ದೇಶದಲ್ಲಿ ಸಮುದಾಯಗಳ ನಡುವಿನ ಸೌಹಾರ್ದತೆ ಹಾಳು ಮಾಡುವಂತಹ ಟ್ವೀಟ್ ಮಾಡಿದ್ದಾನೆ ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2020ರಲ್ಲೂ ಕೋಮು ಪ್ರಚೋದನಕಾರಿ ಟ್ವೀಟ್ ಮಾಡಿದ ಆರೋಪದಲ್ಲಿ ಜುಬೇರ್‌ನನ್ನು ಬಂಧಿಸಲಾಗತ್ತು. ಆ ಪ್ರಕರಣದಲ್ಲಿ ಜುಬೇರ್ ವಿರುದ್ಧ ಆಕ್ಷೇಪಾರ್ಹ ಸಂಗತಿ ಕಂಡುಬಂದಿಲ್ಲ ಎಂದು ಹೇಳಲಾಗಿತ್ತು. ಈಗ ಮತ್ತೊಮ್ಮೆ ಅದೇ ಪ್ರಕರಣದಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ| Alt News ಸಹಸಂಸ್ಥಾಪಕ ಜುಬೇರ್ ವಿರುದ್ಧ ಸಾಕ್ಷ್ಯ ನಾಶ, ವಿದೇಶಿ ಫಂಡ್ ಸ್ವೀಕಾರದ ಹೊಸ ಆರೋಪ