ನವದೆಹಲಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಜೂನ್ ೨೧ರಂದು ನಡೆದ ಕೆಮಿಸ್ಟ್ ಉಮೇಶ್ ಪ್ರಹ್ಲಾದ ರಾವ್ ಕೊಹ್ಲೆ ಅವರ ಹತ್ಯೆಯ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲು ನಿರ್ಧರಿಸಲಾಗಿದೆ. ಈ ಹತ್ಯೆಯೂ ರಾಜಸ್ಥಾನದ ಉದಯಪುರದಲ್ಲಿ ನಡೆದ ಟೇಲರ್ ಕನ್ಹಯ್ಯ ಲಾಲ್ ಅವರ ಹತ್ಯೆಯಂತೆಯೇ ದ್ವೇಷ ಹತ್ಯೆಯಾಗಿರಬಹುದು ಎಂಬ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಕ್ಕಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರಕಾರ ಈ ಆದೇಶ ನೀಡಿದೆ.
ಮುಂಬಯಿ ಪೊಲೀಸರು ಪ್ರಕರಣದ ಐದು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ. ಆರನೇ ಆರೋಪಿ ಮತ್ತು ಹತ್ಯೆಯ ಮಾಸ್ಟರ್ ಮೈಂಡ್ ಆಗಿರುವ ವ್ಯಕ್ತಿ ಇನ್ನೂ ತಲೆಮರೆಸಿಕೊಂಡು ಅವನಿಗಾಗಿ ತೀವ್ರ ಹುಡುಕಾಟ ನಡೆದಿದೆ. ಮುದಸ್ಸರ್ ಅಹಮದ್, ಶಾರುಖ್ ಪಠಾಣ್, ಅಬ್ದುಲ್ ತೌಫೀಕ್, ಶೋಯಿಬ್ ಖಾನ್, ಆತಿಬ್ ರಶೀದ್ ಈಗ ಬಂಧಿತರಾಗಿರುವ ಆರೋಪಿಗಳು ಡಾ. ಯೂಸೂಫ್ ಖಾನ್‌ಗಾಗಿ ಪೊಲೀಸರು ಈಗ ತೀವ್ರ ಹುಡುಕಾಟದಲ್ಲಿದ್ದಾರೆ. ಯಾಕೆಂದರೆ, ಅವನೇ ಈ ಪ್ರಕರಣದ ಮಾಸ್ಟರ್ ಮೈಂಡ್. ಕೊಲೆಯಾದ ಉಮೇಶ್ ಪ್ರಹ್ಲಾದ ರಾವ್‌ಗೆ ಈತ ಪರಿಚಿತನಾಗಿದ್ದಾನೆ ಎಂಬ ಕಾರಣಕ್ಕಾಗಿ ಈ ಪ್ರಕರಣ ಹೆಚ್ಚು ಮಹತ್ವ ಪಡೆದಿದೆ.
ಆವತ್ತು ಏನಾಗಿತ್ತು?
ಉಮೇಶ್ ಕೊಹ್ಲೆ ಅವರು ಅಮರಾವತಿ ನಗರದಲ್ಲಿ ಒಂದು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಆವತ್ತು ಜೂನ್ ೨೧. ರಾತ್ರಿ ೧೦ ಗಂಟೆಯ ಹೊತ್ತು. ಕೊಲ್ಹೆ ಅವರು ಶಾಪ್ ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟಿದ್ದರು. ಇನ್ನೊಂದು ದ್ವಿಚಕ್ರ ವಾಹನದಲ್ಲಿ ಅವರ ಪತ್ನಿ ಮತ್ತು ಮಗ ಸಂಕೇತ್ (೨೭) ಹೋಗುತ್ತಿದ್ದರು.
ಅವರು ಅಮರಾವತಿ ಮಹಿಳಾ ಕಾಲೇಜಿನ ಗೇಟ್ ಬಳಿ ತಲುಪುತ್ತಿದ್ದಂತೆಯೇ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಕೊಲ್ಹೆ ಅವರನ್ನು ತಡೆದರು. ಒಬ್ಬ ಯುವಕ ಬೈಕ್‌ನಿಂದ ಇಳಿದುಬಂದು ಅತ್ಯಂತ ಹರಿತವಾದ ಆಯುಧದಿಂದ ಕೊರಳನ್ನೇ ಕತ್ತರಿಸಿದ್ದಾನೆ. ಮತ್ತು ಅವರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ. ನೆತ್ತರ ಮಡುವಿನಲ್ಲಿ ಬಿದ್ದಿದ್ದ ಕೊಲ್ಹೆ ಅವರನ್ನು ಅವರ ಪತ್ನಿ ಮತ್ತು ಮಗ ಆಸ್ಪತ್ರೆಗೆ ಸೇರಿಸಿದರು. ಆದರೆ, ಅವರು ಬದುಕುಳಿಯಲಿಲ್ಲ.
ಈ ಕೊಲೆಯನ್ನು ಯಾರು ಮಾಡಿದ್ದು ಎಂಬ ಬಗ್ಗೆ ಆರಂಭದಲ್ಲಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಕೊನೆಗೆ ಇದು ಆರು ಮಂದಿ ಮುಸ್ಲಿಮರ ತಂಡದ ಕೃತ್ಯ ಎಂದು ತಿಳಿದುಬಂತು. ಆದರೆ, ಕಾರಣ ನಿಗೂಢವಾಗಿತ್ತು. ಈ ನಡುವೆ ಕೊಲೆ ಮಾಡಿದ್ದು ಇಬ್ಬರಾದರೆ ಒಟ್ಟು ಆರು ಮಂದಿ ಇದರ ಹಿಂದಿದ್ದಾರೆ ಎನ್ನುವುದು ಪೊಲೀಸರಿಗೆ ತಿಳಿಯಿತು. ಅದರಲ್ಲಿ ಉಮೇಶ್ ಕೊಹ್ಲೆ ಅವರಿಗೆ ಪರಿಚಿತರೂ ಆಗಿದ್ದ ಡಾ. ಯೂಸುಫ್ ಖಾನ್ ಕೂಡಾ ಇದ್ದ ಎನ್ನಲಾಗಿದೆ. ಹತ್ಯೆ ಹಿಂದೆ ವೈಯಕ್ತಿಕ ಕಾರಣಗಳಿರಬಹುದು ಎಂಬ ಸಂಶಯ ಜೋರಾಗಿತ್ತು.
ಆದರೆ, ಯಾವಾಗ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್ ಎಂಬ ಟೇಲರ್ ಕೊಲೆ ನಡೆಯಿತೋ ಆ ಕೊಲೆಗೂ ಅಮರಾವತಿ ಮರ್ಡರ್‌ಗೂ ಸಾಮ್ಯತೆ ಇದೆ ಎಂದು ಕಂಡುಬಂತು. ಇದೀಗ ಅಮರಾವತಿ ಕೊಲೆ ತನಿಖೆಯನ್ನು ಕೂಡಾ ಎನ್‌ಐಎಗೆ ವಹಿಸಲಾಗಿದೆ.
ಕೊಹ್ಲೆ ಅವರಿಂದ ಒಂದು ಪೋಸ್ಟ್
ಉಮೇಶ್ ಕೊಲ್ಹೆ ಅವರ ಕೊಲೆಯ ಹಿಂದೆ ಧಾರ್ಮಿಕ ದ್ವೇಷದ ಹಿನ್ನೆಲೆ ಇದೆ ಎನ್ನುವುದು ಈಗ ನಿಧಾನಕ್ಕೆ ಅನಾವರಣಗೊಳ್ಳುತ್ತಿದೆ. ಉಮೇಶ್ ಕೊಲ್ಹೆ ಅವರು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೀಡಿದ ಆಕ್ಷೇಪಾರ್ಹ ಹೇಳಿಕೆಯನ್ನು ಸಮರ್ಥಿಸಿ ವಾಟ್ಸ್ ಆ್ಯಪ್ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದರು. ಅದು ಹಲವು ಗುಂಪುಗಳಿಗೆ ಹರಿದಾಡಿತ್ತು. ಅವರು ತಪ್ಪಾಗಿ ಮುಸ್ಲಿಂ ಸ್ನೇಹಿತರು ಇರುವ ಒಂದು ವಾಟ್ಸ್ ಆ್ಯಪ್ ಗ್ರೂಪ್‌ಗೂ ಶೇರ್ ಮಾಡಿದ್ದರು. ಅವರಲ್ಲಿ ಕೆಲವರು ಮೆಡಿಕಲ್ ಸ್ಟೋರ್‌ನ ಗ್ರಾಹಕರೂ ಆಗಿದ್ದರು.
ಉಮೇಶ್ ಕೊಲ್ಹೆ ಅವರಿಗೆ ಪರಿಚಿತನೇ ಆಗಿದ್ದ ಡಾ. ಯೂಸುಫ್ ಸಿಟ್ಟಿಗೆದ್ದಿದ್ದ. ಅವನು ಐವರು ಯುವಕರನ್ನು ಸೇರಿಸಿ ಅವರಿಗೆ ೧೦, ೦೦೦ ರೂ. ಕೊಡುವ ಭರವಸೆ ನೀಡಿ ಕೊಲೆ ಮಾಡಿಸಿದ್ದ ಮತ್ತು ಕಾರೊಂದರಲ್ಲಿ ಅವರು ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದ. ಈ ಎಲ್ಲ ಅಂಶಗಳು ಸಿಸಿ ಟಿವಿಯಲ್ಲೂ ದಾಖಲಾಗಿತ್ತು.
ಇದನ್ನೂ ಓದಿ| Rajasthan murder: ಮಹಾರಾಷ್ಟ್ರ, ಗುಜರಾತ್‌ನಲ್ಲೂ ಕನ್ಹಯ್ಯ ಲಾಲ್ ಮಾದರಿ ಹತ್ಯೆ? ಎನ್‌ಐಎ ಸಂಶಯ