Site icon Vistara News

Amravati murder: ಕೆಮಿಸ್ಟ್‌ ಕೊಲ್ಹೆ ಕೊಲೆಯ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ

Irfan khan-umesh kolhe

ಮುಂಬಯಿ: ಉದಯಪುರದ ಕನ್ಹಯ್ಯ ಲಾಲ್‌ ಅವರ ಹತ್ಯೆಯ ಮಾದರಿಯಲ್ಲೇ ನಡೆದಿದೆ ಎನ್ನಲಾದ ಮಹಾರಾಷ್ಟ್ರದ ಅಮರಾವತಿಯ ಕೆಮಿಸ್ಟ್‌ ಉಮೇಶ್‌ ಕೊಲ್ಹೆ ಅವರ ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ ಎಲ್ಲ ಏಳು ಆರೋಪಿಗಳನ್ನು ತನ್ನ ವಶಕ್ಕೆ ಪಡೆದಿದೆ.

ಜೂನ್‌ ೨೧ರಂದು ನಡೆದ ಈ ಕೊಲೆ ಪ್ರಕರಣದ ಆರೋಪಿಗಳಾದ ಮುದಸ್ಸರ್‌ ಅಹ್ಮದ್‌ (೨೨), ಶಾರುಖ್‌ ಪಠಾಣ್‌ (೨೫), ಅಬ್ದುಲ್‌ ತೌಫೀಕ್‌ (೨೪), ಶೋಯಿಬ್‌ ಖಾನ್‌ (೨೨), ಆತಿಬ್‌ ರಶೀದ್‌ (೨೨), ಯೂಸುಫ್‌ ಖಾನ್‌ ಮತ್ತು ಈ ಕೊಲೆಯ ಮಾಸ್ಟರ್‌ ಮೈಂಡ್‌ ಎಂದೇ ಹೇಳಲಾದ ಶೇಖ್‌ ಇರ್ಫಾನ್‌ ಶೇಖ್‌ ರಹೀಮ್‌ ಅವರನ್ನು ಎನ್‌ಐಎ ತೀವ್ರ ವಿಚಾರಣೆಗೆ ಒಳಪಡಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ಆರೋಪಿ ಶಮೀಮ್‌ ಅಹಮದ್‌ಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ.

ಕಳೆದ ಸೋಮವಾರ ಆರೋಪಿಗಳನ್ನು ಅಮರಾವತಿ ಕೋರ್ಟ್‌ಗೆ ಹಾಜರುಪಡಿಸಿದ ಸಂದರ್ಭದಲ್ಲಿ ನಾಲ್ಕು ದಿನಗಳ ಟ್ರಾನ್ಸಿಟ್‌ ರಿಮಾಂಡ್‌ ಅನುಮತಿಯನ್ನು ಪಡೆಯಲಾಗಿದೆ.

ಆರೋಪಿಗಳನ್ನು ಕಸ್ಟಡಿಗೆ ಪಡೆದಿರುವ ಎನ್‌ಐಎ ಜುಲೈ ಎಂಟರಂದು ಮುಂಬಯಿಯ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಅದಕ್ಕೆ ಮೊದಲು ಈ ಕೊಲೆಯ ಎಲ್ಲ ಹಿನ್ನೆಲೆಗಳನ್ನು ಬೇಧಿಸಲು ಬೇಕಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲಿದೆ.

ಈ ಕೊಲೆಗೂ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್‌ ಕೊಲೆಗೂ ಭಾರಿ ಹತ್ತಿರದ ಸಂಬಂಧವಿರುವುದು ಮೊದಲ ಹಂತದಲ್ಲೇ ಬಯಲಾಗಿದೆ. ಕೊಲ್ಹೆ ಅವರು ಕೂಡಾ ನೂಪುರ್‌ ಶರ್ಮಾ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲ ತಾಣದಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ಅದು ಮುಸ್ಲಿಂ ಗುಂಪುಗಳಲ್ಲಿ ಹರಿದಾಡಿ ದ್ವೇಷದ ವಾತಾವರಣ ಸೃಷ್ಟಿಯಾಗಿತ್ತು ಎನ್ನಲಾಗಿದೆ.

ಕೊಲೆ ನಡೆದಿದ್ದು ಹೇಗೆ?
ಉಮೇಶ್‌ ಕೊಹ್ಲೆ ಅವರು ಅಮರಾವತಿ ನಗರದಲ್ಲಿ ಒಂದು ಮೆಡಿಕಲ್‌ ಸ್ಟೋರ್‌ ನಡೆಸುತ್ತಿದ್ದರು. ಆವತ್ತು ಜೂನ್‌ ೨೧. ರಾತ್ರಿ ೧೦ ಗಂಟೆಯ ಹೊತ್ತು. ಕೊಲ್ಹೆ ಅವರು ಶಾಪ್‌ ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟಿದ್ದರು. ಇನ್ನೊಂದು ದ್ವಿಚಕ್ರ ವಾಹನದಲ್ಲಿ ಅವರ ಪತ್ನಿ ಮತ್ತು ಮಗ ಸಂಕೇತ್‌ (೨೭) ಹೋಗುತ್ತಿದ್ದರು. ಅವರು ಅಮರಾವತಿ ಮಹಿಳಾ ಕಾಲೇಜಿನ ಗೇಟ್‌ ಬಳಿ ತಲುಪುತ್ತಿದ್ದಂತೆಯೇ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಕೊಲ್ಹೆ ಅವರನ್ನು ತಡೆದರು. ಒಬ್ಬ ಯುವಕ ಬೈಕ್‌ನಿಂದ ಇಳಿದುಬಂದು ಅತ್ಯಂತ ಹರಿತವಾದ ಆಯುಧದಿಂದ ಕೊರಳನ್ನೇ ಕತ್ತರಿಸಿದ್ದಾನೆ. ಮತ್ತು ಅವರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ. ನೆತ್ತರ ಮಡುವಿನಲ್ಲಿ ಬಿದ್ದಿದ್ದ ಕೊಲ್ಹೆ ಅವರನ್ನು ಅವರ ಪತ್ನಿ ಮತ್ತು ಮಗ ಆಸ್ಪತ್ರೆಗೆ ಸೇರಿಸಿದರು. ಆದರೆ, ಅವರು ಬದುಕುಳಿಯಲಿಲ್ಲ. ನಿಜವೆಂದರೆ, ಉಮೇಶ್‌ ಕೊಲ್ಹೆ ಅವರಿಗೆ ಆತ್ಮೀಯನಾಗಿದ್ದ ಒಬ್ಬ ಆರೋಪಿಯೇ ಬಾಡಿಗೆ ಹಂತಕರನ್ನು ಗೊತ್ತು ಮಾಡಿ ಈ ಕೊಲೆ ಮಾಡಿಸಿದ್ದ!

ಇದನ್ನೂ ಓದಿ| ಅಮರಾವತಿಯ ಕೆಮಿಸ್ಟ್‌ ಮರ್ಡರ್‌ ಹಿಂದೆಯೂ ನೂಪುರ್‌ ಹೇಳಿಕೆ ದ್ವೇಷ? ಎನ್‌ಐಎ ತನಿಖೆಗೆ ಗ್ರೀನ್‌ ಸಿಗ್ನಲ್

Exit mobile version