ಮುಂಬೈ: ಪತಿಯ ಮೇಲೆ ನಿಯಂತ್ರಣ ಸಾಧಿಸಬೇಕು ಎಂಬುದು ಬಹುತೇಕ ಮಹಿಳೆಯರ ಉದ್ದೇಶ ಆಗಿರುತ್ತದೆ. ಆದರೆ, ಅಂಧೇರಿಯಲ್ಲಿ ಮಹಿಳೆಯೊಬ್ಬರು ಇದೇ ಉದ್ದೇಶ ಈಡೇರಿಸಿಕೊಳ್ಳಲು ಹೋಗಿ ಜ್ಯೋತಿಷಿಯೊಬ್ಬರಿಗೆ 59 ಲಕ್ಷ ರೂ. ಕೊಟ್ಟು ಮೋಸ ಹೋಗಿದ್ದಾರೆ. ಬ್ಲ್ಯಾಕ್ ಮ್ಯಾಜಿಕ್ (Black Magic) ತಂತ್ರದ ಮೂಲಕ ಪತಿಯ ಮೇಲೆ ನಿಯಂತ್ರಣ ಸಾಧಿಸುವಂತೆ ಮಾಡುತ್ತೇನೆ ಎಂದ ಜ್ಯೋತಿಷಿ, 59 ಲಕ್ಷ ಪಡೆದ ಪ್ರಕರಣ ಬಯಲಾಗಿದೆ. ಮಹಿಳೆ ಮಾತ್ರವಲ್ಲ, ಲಕ್ಷಾಂತರ ರೂ. ಕಳೆದುಕೊಂಡ ಪತಿಯೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂಧೇರಿ ಎಂಐಡಿಸಿಯಲ್ಲಿ ಕೈಗಾರಿಕಾ ಘಟಕವನ್ನು ಹೊಂದಿರುವ 39 ವರ್ಷದ ಉದ್ಯಮಿಯು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಂಧೇರಿ ಈಸ್ಟ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ, ಪತಿ-ಪತ್ನಿ ಮಧ್ಯೆ ನಿತ್ಯ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಮಹಿಳೆಯು ಪತಿಯ ಜತೆಗಿನ ಜಗಳ ನಿಲ್ಲುವಂತೆ, ಆತನ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದ್ದಾರೆ. ಇದಕ್ಕಾಗಿ, ಇನ್‌ಸ್ಟಾಗ್ರಾಂ ಮೂಲಕ ಬಾದಲ್ ಶರ್ಮಾ ಎಂಬ ಜ್ಯೋತಿಷಿಯನ್ನು ಪರಿಚಯ ಮಾಡಿಕೊಂಡಿದ್ದಾರೆ. ಜ್ಯೋತಿಷಿಯು ಬ್ಲ್ಯಾಕ್ ಮ್ಯಾಜಿಕ್ ಮೂಲಕ ನಿಮ್ಮ ಪತಿಯ ಮೇಲೆ ನಿಯಂತ್ರಣ ಸಾಧಿಸುವಂತೆ ಮಾಡುತ್ತೇನೆ ಎಂದಿದ್ದಾರೆ.
ಜ್ಯೋತಿಷಿಯ ಮಾತನ್ನು ನಂಬಿದ ಮಹಿಳೆಯು ತನ್ನ ಮಾಜಿ ಪ್ರಿಯಕರನನ್ನು ಸಂಪರ್ಕಿಸಿ, ಆತನ ಜತೆಗೂಡಿ ಪತಿಯ ಮೇಲೆ ನಿಯಂತ್ರಣ ಸಾಧಿಸಲು ಜ್ಯೋತಿಷಿಯೊಂದಿಗೆ ಮಾತುಕತೆ ನಡೆಸಿ 59 ಲಕ್ಷ ರೂ.ಗೆ ವ್ಯವಹಾರ ಕುದುರಿಸಿದ್ದಾರೆ. ಇದಕ್ಕಾಗಿ ಮಹಿಳೆಯು ಪತಿಯ 35 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ನೀಡಿದ್ದಾರೆ. ಇಷ್ಟೊಂದು ಹಣ, ಚಿನ್ನಾಭರಣ ನಾಪತ್ತೆಯಾದ ಕುರಿತು ಪತಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊನೆಗೆ ಮಹಿಳೆಯು ಜ್ಯೋತಿಷಿ ಹಾಗೂ ಮತ್ತೊಬ್ಬ ವ್ಯಕ್ತಿ ವಿರುದ್ಧ ಪೊವೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | ಮ್ಯಾಟ್ರಿಮೋನಿ ವಂಚಕ | ಶ್ರೀಮಂತ ಯುವತಿಯರಿಗೆ ಸಾಲು ಸಾಲು ವಂಚನೆ