Site icon Vistara News

ತಮಿಳುನಾಡಿನಲ್ಲಿ ಮುಂದುವರಿದ ಪಿಯು ವಿದ್ಯಾರ್ಥಿನಿಯರ ಆತ್ಮಹತ್ಯೆ, ಸರಣಿ 14 ದಿನದಲ್ಲಿ 4ನೇ ದುರಂತ

Tamilnadu student

ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಬ್ಬ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದರೆ ರಾಜ್ಯದಲ್ಲಿ ಕೇವಲ ೧೪ ದಿನಗಳ ಅವಧಿಯಲ್ಲಿ ನಾಲ್ಕನೇ ಪಿಯ ವಿದ್ಯಾರ್ಥಿನಿ ಸಾವಿಗೆ ಶರಣಾದಂತಾಗಿದೆ. ಇದು ರಾಜ್ಯದಲ್ಲಿ ಆಘಾತದ ಅಲೆಗಳನ್ನು ಸೃಷ್ಟಿ ಮಾಡಿದೆ.

ಶಿವಕಾಶಿ ಸಮೀಪದ ಅಯ್ಯಂಬಟ್ಟಿ ನಿವಾಸಿಗಳಾದ ಕಣ್ಣನ್‌ ಮತ್ತು ಮೀನಾ ದಂಪತಿಯ ಮಗಳಾದ, ಪ್ರಥಮ ಪಿಯುಸಿಯನ್ನು ಓದುತ್ತಿದ್ದ ೧೭ ವರ್ಷದ ಹುಡುಗಿಯೇ ಆತ್ಮಹತ್ಯೆ ಮಾಡಿಕೊಂಡವಳು. ಆಕೆ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾಳೆ. ಕಣ್ಣನ್‌ ಮತ್ತು ಮೀನಾ ಒಂದು ಪಟಾಕಿ ಫ್ಯಾಕ್ಟರಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅವರು ಕೆಲಸಕ್ಕೆ ಹೋಗಿದ್ದ ವೇಳೆ ಈ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾಳೆ.

ಮಂಗಳವಾರ ಸಂಜೆ ಆಕೆ ಶಾಲೆ ಬಿಟ್ಟು ಮನೆಗೆ ಬಂದಿದ್ದಳು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಆಕೆಯ ಅಜ್ಜಿ ಮನೆಯಿಂದ ಹೊರಗೆ ಹೋಗಿದ್ದರು. ಅವರು ಹತ್ತಿರದ ಮನೆಗೆ ಹೋಗಿ ಮರಳಿ ಬರುವಷ್ಟರಲ್ಲಿ ಮೊಮ್ಮಗಳು ನೇಣು ಬಿಗಿದುಕೊಂಡಿರುವುದು ಪತ್ತೆಯಾಯಿತು. ಕೂಡಲೇ ಅವರು ಅಕ್ಕಪಕ್ಕದ ಮನೆಯವರನ್ನು ಕರೆದರಾದರೂ ನೇಣಿನಿಂದ ಕೆಳಗಿಳಿಸುವ ಹೊತ್ತಿಗೆ ಪ್ರಾಣ ಕಳೆದುಕೊಂಡಿದ್ದಳು. ಕೂಡಲೇ ಆಕೆಯ ಶವವನ್ನು ಶಿವಕಾಶಿ ಸರಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ, ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ತಮಿಳುನಾಡಿನಲ್ಲಿ ಕಳೆದ ೧೪ ದಿನಗಳಲ್ಲಿ ಸಂಭವಿಸಿದ ನಾಲ್ಕನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಸೋಮವಾರವಷ್ಟೇ ಕುಡಲೂರು ಜಿಲ್ಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಾಯಿ ತನಗೆ ಬೈದರು ಎಂಬ ಒಂದೇ ಕಾರಣ ಮುಂದಿಟ್ಟುಕೊಂಡು ಆಕೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಸಾವಿಗೆ ಶರಣಾಗಿದ್ದಳು. ಸೋಮವಾರ ಮುಂಜಾನೆ ತಿರುವಳ್ಳುವರ್‌ ಜಿಲ್ಲೆಯಲ್ಲಿರುವ ಸರ್ಕಾರಿ ಅನುದಾನಿತ ಹಾಸ್ಟೆಲ್‌ ಒಂದರಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಳು. ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ದೇಶದಲ್ಲೇ ಸಾಕಷ್ಟು ಸುದ್ದಿ ಮಾಡಿದ ಆಘಾತಕಾರಿ ಆತ್ಮಹತ್ಯೆ ಸರಣಿ ಆರಂಭವಾಗಿದ್ದು ಜುಲೈ ೧೩ರಂದು. ಅಂದು ಕಲ್ಲಕುರಿಚಿ ಜಿಲ್ಲೆಯ ಖಾಸಗಿ ವಸತಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಾವು ತಮಿಳುನಾಡಿನಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ವಿದ್ಯಾರ್ಥಿನಿಯ ಸಾವಿನ ಹಿಂದೆ ಹಾಸ್ಟೆಲ್‌ನ ವಾರ್ಡನ್‌ಗಳು, ಕೆಲಸಗಾರರು, ಆಡಳಿತ ಮಂಡಳಿಯ ಕೈವಾಡವಿದೆ ಎಂದು ಹೆತ್ತವರು, ಪೋಷಕರು ಆರೋಪಿಸಿದ್ದಲ್ಲದೆ, ತೀವ್ರತರ ಪ್ರತಿಭಟನೆ ನಡೆಸಿದರು. ವಾಹನಗಳನ್ನೆಲ್ಲ ಸುಟ್ಟು ಹಾಕಿದ್ದರು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ. ಸಿಐಡಿಯ ಕ್ರೈಂ ಬ್ರ್ಯಾಂಚ್‌ನಿಂದ ತನಿಖೆಯೂ ನಡೆಯುತ್ತಿದೆ. ಈಗಾಗಲೇ ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರು ಸೇರಿ ಒಟ್ಟು ಐವರನ್ನು ಬಂಧಿಸಿದೆ.
ಇದನ್ನೂ ಓದಿ| ತಮಿಳುನಾಡಲ್ಲಿ ಇನ್ನೊಬ್ಬಳು 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; 2 ವಾರದಲ್ಲಿ 3ನೇ ಕೇಸ್‌

Exit mobile version