ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನಲ್ಲಿ ಇತ್ತೀಚೆಗೆ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಬಳಿಕ ಮತ್ತೊಂದು ದಾಳಿ ಶಿಕಾಗೋದಲ್ಲಿ ನಡೆದಿದೆ. ಪ್ಲೇಯೋಸ್ ನೈಟ್ ಕ್ಲಬ್ ಆವರಣದಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಹತರಾಗಿದ್ದಾರೆ.
ನೈಟ್ ಕ್ಲಬ್‌ನ ಪ್ರವೇಶ ದ್ವಾರದಲ್ಲಿದ್ದ 34 ವರ್ಷ ವಯಸ್ಸಿನ ವ್ಯಕ್ತಿ ಹಾಗೂ ಕ್ಲಬ್‌ನ ಒಳಗಿದ್ದ 26 ವರ್ಷ ವಯಸ್ಸಿನ ಮಹಿಳೆ ಸಾವಿಗೀಡಾಗಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಇತರ ನಾಲ್ವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಂತಕನ ಹೆಸರು ಮತ್ತು ವಿವರ ಪತ್ತೆಯಾಗಿಲ್ಲ. ಅಮೆರಿಕದಲ್ಲಿ ಅನೇಕ ಗುಂಡಿನ ದಾಳಿ ಪ್ರಕರಣಗಳು ನಡೆದಿದ್ದು, ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಬಂದೂಕಿನ ಲಾಬಿ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಕಳೆದ ಶನಿವಾರ ಸಾವಿರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಪ್ರಪಂಚದ ಬೇರೆಲ್ಲೂ ನಡೆಯದಷ್ಟು ಗುಂಡಿನ ದಾಳಿ ಪ್ರಕರಣಗಳು ಅಮೆರಿಕದಲ್ಲೇಕೆ ನಡೆಯುತ್ತವೆ, ಇದನ್ನು ತಡೆಯಲೇಬೇಕು ಎಂದು ಅಧ್ಯಕ್ಷ ಜೋ ಬೈಡೆನ್ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ:ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ 19 ಮಕ್ಕಳನ್ನು ಗುಂಡಿಕ್ಕಿ ಕೊಂದ ಯುವಕ