ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ (Anekal) ಪಟ್ಟಣದಲ್ಲಿ ರೌಡಿಶೀಟರ್‌ಗಳ ದಾಂಧಲೆ (Crime News) ಮುಂದುವರಿದಿದೆ. ನಿನ್ನೆ ರಾತ್ರಿ ನಡುರಸ್ತೆಯಲ್ಲಿ ಕಾರಿನಲ್ಲಿ ಬಂದ ರೌಡಿಶೀಟರ್ (Rowdysheeter) ಒಬ್ಬಾತ ತನ್ನ ಗುಂಪುಸಹಿತ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದಾನೆ.
ಆನೇಕಲ್ ಪಟ್ಟಣದ ಮಂಜುನಾಥ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ರೌಡಿ ಶೀಟರ್ ಶ್ರೀರಾಮ್ ಎಂಬಾತ ಹಾಗೂ ಆತನ ಗ್ಯಾಂಗ್‌ನಿಂದ ಹಲ್ಲೆ ನಡೆದಿದೆ. ರೌಡಿಶೀಟರ್ ಶ್ರೀರಾಮ್, ಪುರಸಭೆ ಸದಸ್ಯೆಯೊಬ್ಬರ ಪತಿಯಾಗಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತನೂ ಆಗಿದ್ದಾನೆ.
ಈತ ಬೈಕ್‌ನಲ್ಲಿ ಹೋಗುತ್ತಿದ್ದ ವೆಂಕಟೇಶಪ್ಪ (65) ಎಂಬವರ ಮೇಲೆ ವಿನಾಕಾರಣ ಕಾಲು ಕೆರೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಲಾಟೆ ತಡೆಯಲು ಬಂದ ಮಂಜುನಾಥ್ ಎಂಬಾತನ ಮೇಲೆಯೂ ದಾಳಿ ಮಾಡಿದ್ದಾನೆ. ವೆಂಕಟೇಶಪ್ಪ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದು, ಅದೇ ರಸ್ತೆಯಲ್ಲಿ ಶ್ರೀರಾಮ್ ಹಾಗೂ ತಂಡ ಕಾರಿನಲ್ಲಿ ಬಂದಿದೆ.
ಶ್ರೀರಾಮ್ ಏಕಾಏಕಿ ವೆಂಕಟೇಶಪ್ಪನವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಶುರುಮಾಡಿದ್ದಾನೆ. ಯಾಕಪ್ಪ ಬೈತಿದ್ದೀಯ ಎಂದು ವೆಂಕಟೇಶಪ್ಪ ಪ್ರಶ್ನೆ ಮಾಡಿದ್ದಕ್ಕೆ ಕಾರಿನಿಂದ ಇಳಿದು ಥಳಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ ಕಲ್ಲು ತೆಗೆದುಕೊಂಡು ವೆಂಕಟೇಶಪ್ಪನವರ ಮೇಲೆ ಗುದ್ದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಶ್ರೀರಾಮ್ ಮತ್ತು ಆತನ ಪಟಾಲಂ ಯದ್ವಾತದ್ವಾ ಹಲ್ಲೆ ನಡೆಸಿದೆ. ವೆಂಕಟೇಶಪ್ಪನವರ ಹಲ್ಲುಗಳು ಮುರಿದಿದ್ದು, ಮೈಯ ಮೇಲೆ ಗಾಯಗಳಾಗಿವೆ.
ಗಾಯಾಳುವಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರೌಡಿಶೀಟರ್ ಶ್ರೀರಾಮ್, ತಾನು ರಾಜಕೀಯವಾಗಿ ಪ್ರಭಾವಿ ಎಂಬ ದರ್ಪದಿಂದ ಈ ಪರಿಸರದಲ್ಲಿ ವರ್ತಿಸುತ್ತಿದ್ದು, ದುರ್ಬಲರನ್ನು ಪೀಡಿಸುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈತನ ಮೇಲೆ ಹಲ್ಲೆ, ಕೊಲೆ ಬೆದರಿಕೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಿವೆ. ಈತನನ್ನು ಬಂಧಿಸಿ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಯುವಕನ ಕಿರುಕುಳ ತಾಳದೆ ಬಾಲಕಿ ಆತ್ಮಹತ್ಯೆ
ಕೊಪ್ಪಳ: ಫೋನ್‌ನಲ್ಲಿ ಯುವಕ ನೀಡುತ್ತಿದ್ದ ಕಿರುಕುಳ ತಾಳಲಾರದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಚ್ಚಲಕುಂಟ ಗ್ರಾಮದಲ್ಲಿ ನಡೆದಿದೆ. ಆರೋಪಿ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಶವವಿಟ್ಟು ಬಾಲಕಿತ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಪೂಜಾ ಯಡ್ಡೋಣಿ(16) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಪುರಷೋತ್ತಮ ಎನ್ನುವ ಯುವಕ ಪೂಜಾಳ ಮನೆಯ ಮೊಬೈಲ್‌ಗೆ ಕರೆ ಮಾಡುತ್ತಿದ್ದ. ಬೇರೊಂದು ನಂಬರ್ ಮೂಲಕ ಕಾನ್ಫರೆನ್ಸ್ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಯುವಕನ ಕಿರುಕುಳ ತಾಳಲಾರದೆ ಏ.7 ರಂದು ವಿಷ ಸೇವಿಸಿದ್ದ ಪೂಜಾ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾಳೆ.
ಈ ಹಿನ್ನೆಲೆಯಲ್ಲಿ ಉಚ್ಚಲಕುಂಟ ಗ್ರಾಮಸ್ಥರು, ಆರೋಪಿ ಪುರಷೋತ್ತಮ ಬಂಧನಕ್ಕೆ ಆಗ್ರಹಿಸಿ ಬೇವೂರು ಪೊಲೀಸ್ ಠಾಣೆ ಎದುರು ಪೂಜಾ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಬಂಧನ ಮಾಡುವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: Crime News: ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು; ರೈಲಿಗೆ ಸಿಲುಕಿ ದಂಪತಿ ದುರ್ಮರಣ