ಆನೇಕಲ್: ಪುಡಿ ರೌಡಿಗಳು (Rowdy Sheeters) ಕ್ಷುಲ್ಲಕ ಕಾರಣಕ್ಕೆ ಡೆಡ್ಲಿ ಅಟ್ಯಾಕ್ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ʼಏಯ್ ಹೋಗೋʼ ಎಂದಿದ್ದಕ್ಕೆ ವಿಶೇಷ ಚೇತನ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿ ಕೊಚ್ಚಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ನಡೆದಿರುವುದು ಬೆಂಗಳೂರು ಹೊರವಲಯ (Bangalore Rural) ಆನೇಕಲ್ (Anekal) ತಾಲ್ಲೂಕಿನ ಜಿಗಣಿಯಲ್ಲಿ.
ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ವಾಬಸಂದ್ರದಲ್ಲಿ ಘಟನೆ ನಡೆದಿದ್ದು, ವಾಬಸಂದ್ರ ವಾಸಿ ನಾಗರಾಜ್(26) ಹಲ್ಲೆಗೊಳಗಾದ ಯುವಕ. ಮುಂಜಾನೆ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಸ್ ಆಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್ ʼಏಯ್ ಹೋಗ್ರೋʼ ಎಂದಿದ್ದಾರೆ.
ಅಷ್ಟಕ್ಕೆ ಮನೆವರೆಗೂ ನಾಗರಾಜ್‌ನನನ್ನು ಹಿಂಬಾಲಿಸಿದ್ದ ಆರೋಪಿಗಳು, ಮನೆ ಬಳಿ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ. ಮುಖ, ಕೈ, ಕುತ್ತಿಗೆಗೆ ಲಾಂಗ್, ಮಚ್ಚುಗಳಿಂದ ಯದ್ವಾತದ್ವಾ ಕೊಚ್ಚಿ ಹಾಕಿ, ಹಲ್ಲೆ ಬಳಿಕ ಆಟೋ ಸಮೇತ ಪರಾರಿಯಾಗಿದ್ದಾರೆ. ಗಾಯಾಳು ನಾಗರಾಜ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರೌಡಿ ಶೀಟರ್‌ಗಳಾದ ಮೇಲುಕೋಟೆ ಮೂಲದ ಸೂರ್ಯ, ಯಾರಂಡಹಳ್ಳಿ ವಾಸಿ ಪ್ರವೀಣ್ ಮತ್ತು ಇತರರಿಂದ ಕೃತ್ಯ ನಡೆದಿರುವ ಶಂಕೆ ಇದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಇತ್ತೀಚೆಗೆ ಕ್ರೈಮ್ ನಿಯಂತ್ರಣಕ್ಕೆ ಸಿಗದಂತೆ ಹೆಚ್ಚುತ್ತಿದೆ. ಕಳೆದ ತಿಂಗಳು 26ನೇ ತಾರೀಕು ಗುರಾಯಿಸಿದ ಎಂದು ಬಾರ್‌ನಲ್ಲಿ ತಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಮರ್ಡರ್ ಮಾಡಲಾಗಿತ್ತು. ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಲ್ಕೆರೆ ಬಾರ್‌ನಲ್ಲಿ ಉತ್ತರ ಕರ್ನಾಟಕ ಮೂಲದ ಹರ್ಷವರ್ಧನ್ ಕೊಲೆಯಾಗಿತ್ತು. ಇದೀಗ ಏಯ್ ಹೋಗೋ ಅಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಮಾರಕ ದಾಳಿ ನಡೆದಿದೆ. ಆನೇಕಲ್ ಭಾಗದಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೊಲೆ, ಕೊಲೆ ಯತ್ನ ನಡೆಯುತ್ತಿದೆ. ಗೂಂಡಾಗಿರಿ ನಡೆಸತ್ತಿರುವ ಪಾತಕಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಶ್ರೀಸಾಮಾನ್ಯರು ಅಳಲು ತೋಡಿಕೊಳ್ಳುತ್ತಾರೆ.
ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ
ಹಾಸನ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ನಡುವೆ ಶುರುವಾದ ಜಗಳವು ಕೊಲೆಯಲ್ಲಿ (Murder case) ಅಂತ್ಯವಾಗಿದೆ. ದಯಾನಂದ್ (40) ಮೃತ ದುರ್ದೈವಿ. ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ದಮ್ಮನಿಂಗಳ ಗ್ರಾಮದಲ್ಲಿ ಘಟನೆ ನಡೆದಿದೆ.
ಜಲಜೀವನ್ ಮಿಷನ್ ಯೋಜನೆಯ ನೀರಿನಲ್ಲಿ ಸಂಪರ್ಕ ಅಳವಡಿಸುವ ಜಾಗದ ವಿಷಯಕ್ಕೆ ದಯಾನಂದ್ ಹಾಗೂ ವರುಣ್ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಹೋದರರು ಚಾಕು ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಈ ವೇಳೆ ದಯಾನಂದ್ ಸ್ಥಳದಲ್ಲೇ ಮೃತಪಟ್ಟರೆ, ವರುಣ್ (36) ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ವರುಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದ ನಾಲ್ಕು ಅಡಿ ಜಾಗಕ್ಕಾಗಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಇದೇ ಜಾಗಕ್ಕಾಗಿ ಸಹೋದರರ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: Parappana Agrahara: ಪರಪ್ಪನ ಅಗ್ರಹಾರ ಜೈಲಿನೊಳಗೆ ಮೊಬೈಲು ಸಾಗಿಸುತ್ತಿದ್ದ ಕೈದಿ; 2 ಫೋನ್ ಎಲ್ಲಿಟ್ಟುಕೊಂಡಿದ್ದ ಗೊತ್ತಾ?