ಬೆಂಗಳೂರು: ಪಾರ್ಕಿಂಗ್ (parking controversy) ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ನಡೆದ ಗಲಾಟೆ ಉಲ್ಬಣಗೊಂಡು, ಆಟೋ ಚಾಲಕ ಹಾಗೂ ಆತನ ಮನೆಯವರ ಮೇಲೆ ಅನ್ಯಕೋಮಿನ ಸುಮಾರು 40 ಮಂದಿ ಹಲ್ಲೆ ನಡೆಸಿದ (Assault Case) ಘಟನೆ ಪ್ರಗತಿ ಬಡಾವಣೆಯಲ್ಲಿ ನಡೆದಿದೆ. ಮನೆಗೆ ನುಗ್ಗಿದ ಪುಂಡರು ಮಹಿಳೆಯರು – ಮಕ್ಕಳೆನ್ನದೆ ಹಲ್ಲೆ ನಡೆಸಿದ್ದು , ಮಾಂಗಲ್ಯ ಸರ ಹಾಗೂ ಮೊಬೈಲ್ ಕೂಡ ಕಸಿದುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಗಲಾಟೆಯಲ್ಲಿ ಶಿವಕುಮಾರ್ ಎಂಬ ವ್ಯಕ್ತಿಯ ಕುಟುಂಬ ಸೇರಿದಂತೆ ಎಂಟು ಮಂದಿ ಮೇಲೆ ಹಲ್ಲೆ ನಡೆದಿದೆ. ಪಕ್ಕದ ಮನೆಗೆ ಸಂಬಂಧಿಸಿದ ಅನ್ಯಕೋಮಿನ ಯುವಕ ಹಾಗೂ ಆತನ ಕಡೆಯವರಿಂದ ಹಲ್ಲೆ ನಡೆದಿದೆ. ನಾಲ್ವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಹಲ್ಲೆಯಲ್ಲಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಪ್ರಗತಿ ಬಡಾವಣೆಯಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದ ಶಿವಕುಮಾರ್ ಹಾಗೂ ಅನ್ಯಕೋಮಿನ ವ್ಯಕ್ತಿ ಇಕ್ಕಟ್ಟಾದ ರಸ್ತೆಯಿರುವ ಏರಿಯಾದ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾದ ಶಿವಕುಮಾರ್, ತಮ್ಮ ಮನೆ ಮುಂದೆ ಆಟೋ ನಿಲ್ಲಿಸಿದ್ದರು. ಈ ವೇಳೆ ಪಕ್ಕದ ಅನ್ಯಕೋಮಿನ ವ್ಯಕ್ತಿಯ ಸಂಬಂಧಿ ಮನೆಯ ಮುಂದೆಯೂ ಆಟೋ ನಿಲ್ಲಿಸಿದ್ದ.
ಇದರಿಂದ ಟ್ರಾಫಿಕ್ ಬಂದ್ ಆಗಿತ್ತು. ಹೀಗಾಗಿ ಶಿವಕುಮಾರ್, ಆಟೋ ನಿಲ್ಲಿಸಿದ್ದಕ್ಕೆ ಪ್ರಶ್ನೆ ಮಾಡಿದ್ದ. ಈ ವೇಳೆ ಪರಸ್ಪರ ಗಲಾಟೆ ಶುರುವಾಗಿತ್ತು. ಗಲಾಟೆ ಜೋರಾಗುತ್ತಿದ್ದಂತೆ ಅನ್ಯಕೋಮಿನ ವ್ಯಕ್ತಿ ಅಲ್ಲಿಂದ ಹೊಗಿದ್ದು, ಕೂಗಳತೆ ದೂರದಲ್ಲೇ ಇದ್ದ ಮಸೀದಿಯಿಂದ ತನ್ನ ಜೊತೆಗಾರರೊಂದಿಗೆ ವಾಪಸ್ ಬಂದು ಮತ್ತೆ ಗಲಾಟೆಯಲ್ಲಿ ತೊಡಗಿದ್ದ. ಗಲಾಟೆ ನಡುವೆ ಈ ಗುಂಪು ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಶಿವಕುಮಾರ್ ಮನೆಯೊಳಗೆ ಸಹ ನುಗ್ಗಿ ಹಲ್ಲೆ ಮಾಡಿದೆ. ಸದ್ಯ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸದ ಟ್ವೀಟ್, ಡಿಲೀಟ್
ಗಲಾಟೆ ನಡೆದ ಕೆಲವೇ ಗಂಟೆಗಳಲ್ಲಿ ಮೈಸೂರು ಸಂಸದ ಪ್ರತಾಪ್‌ಸಿಂಹ ಈ ಬಗ್ಗೆ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದು, ʼwake up Hindusʼ ಎಂದು ಟ್ವೀಟ್ ಮಾಡಿದ್ದರು. ಗಲಾಟೆ ವೇಳೆ ಸೆರೆ ಹಿಡಿಯಲಾದ ದೃಶ್ಯವನ್ನು ಸಹ ಅದರಲ್ಲಿ ಅಪ್ಲೋಡ್ ಮಾಡಿದ್ದರು.
“ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದರ ಗಮನಕ್ಕೂ ತರಲಾಗಿದೆ. wake up Hindusʼʼ ಎಂದು ಬರೆದಿದ್ದರು. ಸ್ವಲ್ಪ ಹೊತ್ತಿನ ಬಳಿಕ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಪೊಲೀಸರು ಹಾಗೂ ಹಲ್ಲೆಗೊಳಗಾದವರು ಆಟೋ ವಿಚಾರಕ್ಕೆ ಈ ಗಲಾಟೆ ಎನ್ನುತ್ತಿದ್ದಾರೆ. ಆದರೆ ಸಂಸದ ಪ್ರತಾಪ್ ಸಿಂಹ ಪೋಸ್ಟ್ ಬಳಿಕ ಈ ಬಗ್ಗೆ ಅನುಮಾನ ಮೂಡಿದ್ದು, ಹಲ್ಲೆಯ ಹಿಂದೆ ಬೇರೇನಾದರೂ ಕಾರಣವಿದೆಯಾ ಎಂದು ಶಂಕಿಸಲು ಕಾರಣವಾಗಿದೆ.
ಇದನ್ನೂ ಓದಿ: Naxals in Karnataka : ಕುಕ್ಕೆ ಸುಬ್ರಹ್ಮಣ್ಯ ಸಮೀಪ ಮತ್ತೆ ಕಾಣಿಸಿಕೊಂಡ ನಕ್ಸಲರು