ಬೆಂಗಳೂರು: ರೋಡ್ ರೇಜ್ (Road Rage) ಆಯ್ತು, ರಸ್ತೆಯಲ್ಲೇ ಹಲ್ಲೆ ಆಯ್ತು. ಇದೀಗ ಪುಂಡರು ತುರ್ತು ಚಿಕಿತ್ಸೆಗೆ (Emergency) ತೆರಳುತ್ತಿದ್ದ ಆಂಬ್ಯುಲೆನ್ಸ್ (Ambulance) ಅನ್ನೂ ಬಿಟ್ಟಿಲ್ಲ. ಸೈರನ್ ಹಾಕಿಕೊಂಡು ಧಾವಿಸುತ್ತಿದ್ದ ಆಂಬ್ಯುಲೆನ್ಸನ್ನೂ ಚೇಸ್ ಮಾಡಿ, ಅಡ್ಡಗಟ್ಟಿ, ಉಸಿರಾಟದ ತೊಂದರೆ ಇರೋ ಮಗುವಿದೆ ಬಿಟ್ಬಿಡಿ ಎಂದು ಬೇಡಿಕೊಂಡರೂ ಕೇಳದೆ ಡ್ರೈವರ್ ಮೇಲೆ ಹಲ್ಲೆ (Assault Case) ನಡೆಸಿದ್ದಾರೆ.
ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಟೋಲ್‌ನಲ್ಲಿ ನಿನ್ನೆ ಸಂಜೆ ನಡೆದಿದೆ. ಆಂಬ್ಯುಲೆನ್ಸ್ ಅತಿ ವೇಗವಾಗಿ ಓಡಿಸ್ತಿದೀಯಾ ಎಂದು ಕೆಣಕಿ ಕಾರಿನಲ್ಲಿದ್ದ ನಾಲ್ವರಿಂದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆದಿದೆ. ಆಂಬ್ಯುಲೆನ್ಸ್ ಚಾಲಕನ ಬಟ್ಟೆ ಹರಿದುಹಾಕಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಖಾಸಗಿ ಆಂಬ್ಯುಲೆನ್ಸ್ ಬರುತ್ತಿತ್ತು. ಐದು ತಿಂಗಳ ಮಗುವಿಗೆ ತುರ್ತು ಚಿಕಿತ್ಸೆಗಾಗಿ, ಆಕ್ಸಿಜನ್ ಹಾಕಿಸಿ ಕರೆ ತರಲಾಗುತ್ತಿತ್ತು. KA01 MJ9996 ನಂಬರಿನ ಇನ್ನೋವಾ ಕಾರಿನಲ್ಲಿದ್ದ ನಾಲ್ವರು ವಿನಾಕಾರಣ ಆಂಬ್ಯುಲೆನ್ಸ್ ಚಾಲಕನನ್ನು ಕೆಣಕಿದ್ದಾರೆ. ಐದಾರು ಕಿಲೋಮೀಟರ್ ಚೇಸ್ ಮಾಡಿಕೊಂಡು ಬಂದು, ಟೋಲ್ ಬಳಿ ಆಂಬ್ಯುಲೆನ್ಸ್ ನಿಂತಾಗ ಅಡ್ಡಗಟ್ಟಿ ಏಕಾಏಕಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಮಗುವಿನ ಕಂಡಿಷನ್ ಕ್ರಿಟಿಕಲ್ ಇದೆ, ಬಿಟ್ಬಿಡಿ ಎಂದು ಮಗುವಿನ ಪೋಷಕರು ಕೈ ಮುಗಿದರೂ ಕ್ರೂರಿ ಪುಂಡರು ಬಿಡಲಿಲ್ಲ. ಚಾಲಕನಿಗೆ ಥಳಿಸಿ ಆಂಬ್ಯುಲೆನ್ಸ್ ಕೀ ಕಿತ್ತುಕೊಂಡು ಗಲಾಟೆ ಮಾಡಿದ್ದಾರೆ. ನಂತರ ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ತಡೆದು ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ಕಳಿಸಿದ್ದಾರೆ. ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಇಂದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಬಳಿ ಆಂಬ್ಯೂಲೆನ್ಸ್ ಚಾಲಕರು ಪ್ರತಿಭಟಿಸುವ ಸಾಧ್ಯತೆ ಇದೆ.
ಟೆಂಪೋ ಪಲ್ಟಿ; ಓವರ್‌ಟೇಕ್ ಧಾವಂತಕ್ಕೆ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ
ಕಲಬುರಗಿ: ಗೂಡ್ಸ್ ಮಿನಿ ಟೆಂಪೋ ಪಲ್ಟಿಯಾಗಿ (Road Accident) ಸ್ಥಳದಲ್ಲೆ ಓರ್ವ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಡೊಂಗರಗಾಂವ್ ಬಳಿ ಘಟನೆ ನಡೆದಿದೆ. ಹರಕಂಚಿ ಗ್ರಾಮದ ಕೂಲಿ ಕಾರ್ಮಿಕ ಶಿವಪ್ಪ ಸ್ಥಳದಲ್ಲೆ ಮೃತಪಟ್ಟ ದುರ್ದೈವಿ.
ಹರಕಂಚಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಹುಮನಬಾದ್ ಪಟ್ಟಣಕ್ಕೆ ತೆರಳುತ್ತಿದ್ದರು. ಈ ವೇಳೆ ವಾಹನವೊಂದಕ್ಕೆ ಓವರ್‌ಟೆಕ್ ಮಾಡಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಶಿವಪ್ಪ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕಮಲಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಟೆಂಪೋವನ್ನು ತೆರವು ಮಾಡಿದ್ದಾರೆ.
ಚಿಕ್ಕೋಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಕಾರು ಬಿಟ್ಟು ಚಾಲಕ ಪರಾರಿ
ಬೆಳಗಾವಿ ಜಿಲ್ಲೆಯ ರಾಯಬಾದ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು (Car Accident) ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಪಾಲಬಾವಿ ಗ್ರಾಮದ ಮಹಾಲಿಂಗ ನಿಂಗನೂರ (47) ಮತ್ತು ಈರಪ್ಪಾ ಉಗಾರೆ (32) ಮೃತ ದುರ್ದೈವಿಗಳು.
ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್ ಕಂಬ ಡಿಕ್ಕಿ ಹೊಡೆದಿದೆ. ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರಿಗೆ ತೀವ್ರ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಇದನ್ನೂ ಓದಿ: Shivamogga Accident : ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿ; ಉರುಳಿ ಬಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ