ಮುಂಬೈ: ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ, ಮಹಾರಾಷ್ಟ್ರದಲ್ಲಿ ಗಟ್ಟಿಮುಟ್ಟಾಗಿರುವ ವ್ಯಕ್ತಿಯೊಬ್ಬ, ತನ್ನದೇ ಮರಣ ಪ್ರಮಾಣಪತ್ರ ಸಲ್ಲಿಸಿ ಕೋಟ್ಯಂತರ ರೂ. ವಿಮಾ ಹಣ ಪಡೆಯಲು ಯತ್ನಿಸಿದ್ದಾನೆ. ಕೊನೆಗೆ ಎಲ್‌ಐಸಿ ತನಿಖೆಯಲ್ಲಿ ಈತನ ಕುತಂತ್ರ ಬಯಲಾಗಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಇವನ ಇಬ್ಬರು ಗೆಳೆಯರನ್ನೂ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ನಿವಾಸಿಗಳಾದ ದಿನೇಶ್ ಟಾಕ್ಸಾಲೆ, ಅನಿಲ್ ಲಟ್ಕೆ ಹಾಗೂ ವಿಜಯ್ ಮಾಲ್ವಾಡೆ ಬಂಧಿತರು. ದಿನೇಶ್ ಟಾಕ್ಸಾಲೆಯೇ ಬದುಕಿದ್ದರೂ ಸತ್ತಿರುವ ಕುರಿತು ನಕಲಿ ಮಾಹಿತಿಯನ್ನು ಎಲ್‌ಐಸಿಗೆ ಒದಗಿಸಿ ಕೋಟ್ಯಂತರ ರೂ. ವಿಮೆ ಹಣ ಪಡೆಯಲು ಮುಂದಾಗಿದ್ದ. ಎಲ್‌ಐಸಿ ಅಧಿಕಾರಿ ಓಂಪ್ರಕಾಶ್ ಸಾಹು ಅವರು ನೀಡಿದ ದೂರಿನ ಮೇರೆಗೆ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Teaching Bible At School: ಶಾಲೆಯಲ್ಲಿ ಬೈಬಲ್ ಬೋಧನೆ, ಪ್ರಿನ್ಸಿಪಾಲ್ ವಿರುದ್ಧ ಕೇಸ್, ಹಾಸ್ಟೆಲ್ ವಾರ್ಡನ್ ಬಂಧನ
ದಿನೇಶ್ ಟಾಕ್ಸಾಲೆಯು 2015ರಲ್ಲಿ 2 ಕೋಟಿ ರೂ. ಮೌಲ್ಯದ ಎಲ್‌ಐಸಿ ವಿಮೆ ಮಾಡಿದ್ದಾನೆ. ವರ್ಷಕ್ಕೆ ಲಕ್ಷಾಂತರ ರೂ. ದುಡಿಯುತ್ತೇನೆ ಎಂದು ವಿಮೆ ಮಾಡಿದ್ದಾನೆ. ಒಂದು ವರ್ಷ ಪ್ರೀಮಿಯಂ ತುಂಬಿದ್ದಾನೆ. ಇದಾದ ಬಳಿಕ ದಿನೇಶ್ ಟಾಕ್ಸಾಲೆಯು 2016ರಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂಬುದಾಗಿ ದಿನೇಶ್‌ನ ಗೆಳೆಯ ಎಲ್‌ಐಸಿಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ, ಇವರ ದಾಖಲೆ ಕುರಿತು ಅನುಮಾನ ಬಂದ ಕಾರಣ ಎಲ್‌ಐಸಿಯು ತನಿಖೆ ನಡೆಸಿದೆ. ಈಗ ಅವರು ಸಲ್ಲಿಸಿದ ದಾಖಲೆ ನಕಲಿ ಎಂಬುದು ಸಾಬೀತಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.