ಬೆಂಗಳೂರು: ಮದುವೆ ವಾರ್ಷಿಕೋತ್ಸವಕ್ಕೆ (Marriage Anniversary) ಗಂಡ ಗಿಫ್ಟ್ (Gift) ನೀಡಲಿಲ್ಲ ಎಂದು ರೊಚ್ಚಿಗೆದ್ದ ಪತ್ನಿ, ಗಂಡ ಮಲಗಿದಾಗ ಆತನಿಗೆ ಚಾಕುವಿನಿಂದ ಇರಿದು (Knife attack) ಶಾಕ್ ನೀಡಿದ್ದಾಳೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿ ಘಟನೆ ನಡೆದಿದೆ. ಫೆ.27ರಂದು ರಾತ್ರಿ ಈ ಘಟನೆ ನಡೆದಿದ್ದು, ರಾತ್ರಿ 1:30ರ ಸುಮಾರಿಗೆ ಈಕೆ ಚಾಕುವಿನಿಂದ ಇರಿದಿದ್ದಾಳೆ. ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ ಕೊಡದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದಿರುವುದನ್ನು ಒಪ್ಪಿಕೊಂಡಿದ್ದಾಳೆ.
ಮದುವೆ ವಾರ್ಷಿಕೋತ್ಸವ ದಿನ ಯಾವುದೇ ಗಿಫ್ಟು- ಕೇಕು ನೀಡದೆ ಗಡದ್ದಾಗಿ ನಿದ್ದೆಗೆ ಜಾರಿದ್ದ ಗಂಡನನ್ನು ಕಂಡು ಕೆಂಡಾಮಂಡಲವಾದ ಪತ್ನಿ, ಅಡುಗೆ ಮನೆಯಿಂದ ಚಾಕು ತಂದು ಇರಿದಿದ್ದಾಳೆ. ಚಾಕುವಿನಿಂದ ಇರಿದ ಪರಿಣಾಮ ಗಂಡನ ಕೈಗೆ ಗಾಯವಾಗಿದೆ. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗಂಡ ಹೆಂಡತಿಗೆ ಕೌನ್ಸೆಲಿಂಗ್ ನಡೆಸಿದ್ದು, ತನಿಖೆ ವೇಳೆ, ಮೊದಲ ಬಾರಿಗೆ ಗಿಫ್ಟ್ ನೀಡಿಲ್ಲ ಎಂದು ಈ ಕೃತ್ಯ ಎಸಗಿದ್ದಾಗಿ ಪತ್ನಿ ಹೇಳಿದ್ದಾಳೆ. ಗಂಡನ ತಾತ ತೀರಿ ಹೋಗಿದ್ದ ಹಿನ್ನೆಲೆಯಲ್ಲಿ ಗಿಫ್ಟ್ ನೀಡಿರಲಿಲ್ಲ ಎಂದು ಗಂಡ ಹೇಳಿದ್ದಾನೆ.
ಶಿವಮೊಗ್ಗದಲ್ಲಿ ಹಾಡಹಗಲೇ ಇರಿತ
ಶಿವಮೊಗ್ಗ: ಶಿವಮೊಗ್ಗದಲ್ಲಿ ಕೆಲವು ತಿಂಗಳ ಬಳಿಕ ಮತ್ತೆ ಹಾಡಹಗಲೇ ರಸ್ತೆಯೊಂದರಲ್ಲಿ ಒಬ್ಬನ ಮೇಲೆ ಇಬ್ಬರು ದಾಳಿ ನಡೆಸಿ ಚಾಕು ಇರಿದಿದ್ದಾರೆ. ಅಪರಿಚಿತ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿ (Stab wound) ಪರಾರಿಯಾಗಿದ್ದಾರೆ. ಶಿವಮೊಗ್ಗದ ರಾಯಲ್ ಆರ್ಕೆಡ್ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಈ ಕೊಲೆ ಯತ್ನ (Attempt to Murder) ಪ್ರಕರಣ ನಡೆದಿದೆ.
ಕಾರ್ತಿಕ್ (48) ಚಾಕು ಇರಿತಕ್ಕೆ ಒಳಗಾದವರು. ಘಟನೆ ಬಳಿಕ ದಾಳಿ ಮಾಡಿದ ವ್ಯಕ್ತಿಗಳು ಪರಾರಿಯಾಗಿದ್ದು, ಅವರನ್ನು ಹಿಡಿಯಲು ಯತ್ನಿಸಿದರೂ ತಪ್ಪಿಸಿಕೊಂಡು ಹೋಗಿದ್ದಾರೆನ್ನಲಾಗಿದೆ. ಕಾರ್ತಿಕ್ ಮೇಲಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ.
ಕಾರ್ತಿಕ್ ಮೇಲೆ ಚಾಕು ಬೀಸಿದಾಗ ಅವರು ಕೈಯನ್ನು ಅಡ್ಡ ಇಟ್ಟಿದ್ದಾರೆ. ಆಗ ಕೈಗೆ ಚಾಕು ತಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಆ ನೋವಿನಿಂದ ಅವರು ಜೋರಾಗಿ ಕೂಗಿಕೊಂಡಿದ್ದರಿಂದ ದುಷ್ಕರ್ಮಿಗಳಿಬ್ಬರು ಭಯದಿಂದ ಪರಾರಿಯಾಗಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಾಕು ಇರಿತಕ್ಕೊಳಗಾದ ವ್ಯಕ್ತಿ ಶಿವಮೊಗ್ಗದ ಮಿಳಘಟ್ಟ ಬಡಾವಣೆ ನಿವಾಸಿ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ದೂರು ದಾಖಲು ಮಾಡಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Attempt to Murder: ಶಿವಮೊಗ್ಗದಲ್ಲಿ ಮತ್ತೆ ಚಾಕು ಇರಿತ; ಇಬ್ಬರು ದುಷ್ಕರ್ಮಿಗಳಿಂದ ದಾಳಿ