ಬೆಳಗಾವಿ: ಕ್ರಿಕೆಟ್ (cricket) ಆಟದ ವೇಳೆ ಉಂಟಾದ ಜಗಳ ವಿಕೋಪಕ್ಕೆ ಹೋಗಿ ಎರಡು ಗುಂಪುಗಳ ನಡುವೆ ಘರ್ಷಣೆ (Belagavi Violence) ಸೃಷ್ಟಿಯಾದ ಘಟನೆ ಬೆಳಗಾವಿ (Belagavi crime) ನಗರದ ಅಳ್ವಾನ್ ಗಲ್ಲಿಯಲ್ಲಿ ನಡೆದಿದೆ. ಪುಂಡರು ತಲ್ವಾರ್ (talvar show) ಝಳಪಿಸಿ, ಎಸೆದು ಅಟ್ಟಹಾಸ ಮೆರೆದಿದ್ದಾರೆ. ಕಲ್ಲು ತೂರಾಟ (Stone pelting) ನಡೆಸಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ಬಿಗುವಿನ (Belagavi tense) ವಾತಾವರಣ ಉಂಟಾಗಿದೆ.
ಶಹಾಪುರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಅಳ್ವಾನ್ ಗಲ್ಲಿಯಲ್ಲಿ ಘಟನೆ ನಡೆದಿದೆ. ಸಂಜೆ ಐದು ಗಂಟೆ ಸುಮಾರಿಗೆ ಚಿಕ್ಕ ಮಕ್ಕಳ ನಡುವೆ ಕ್ರಿಕೆಟ್ ವಿಚಾರದಲ್ಲಿ ಗಲಾಟೆ ಹುಟ್ಟಿಕೊಂಡಿದೆ. ಬಳಿಕ ಗಲಾಟೆಯಲ್ಲಿ ಹಿಂದೂ- ಮುಸ್ಲಿಂ ಎರಡೂ ಗುಂಪಿನ ಯುವಕರು ಮಧ್ಯಪ್ರವೇಶಿಸಿದ್ದು, ಹೊಡೆದಾಡಿಕೊಂಡಿದ್ದಾರೆ. ಯುವಕರ ನಡುವಿನ ಗಲಾಟೆಯಲ್ಲಿ ಎಂಟು ಜನರಿಗೆ ಗಾಯವಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಲಾಟೆಯಲ್ಲಿ ಓರ್ವ ಪೊಲೀಸ್ ಪೇದೆಗೂ ಗಾಯವಾಗಿದೆ.
ಈ ವೇಳೆ ಹಿಂದೂ ಸಮುದಾಯದ ಮನೆಗಳ ಮೇಲೆ ಕಲ್ಲು ತೂರಿ ತಲ್ವಾರ್ ಪ್ರದರ್ಶನ ಮಾಡಲಾಗಿದ್ದು, ಅಬ್ದುಲ್ ಎಂಬಾತ ನಡು ರಸ್ತೆಯಲ್ಲಿ ತಲ್ವಾರ್ ಝಳಪಿಸಿದ್ದಾನೆ ಎಂದು ಆರೋಪಿಸಲಾಗಿದೆ. ಶಾಂತಿ ಸ್ಥಾಪನೆಗಾಗಿ ಸ್ಥಳದಲ್ಲಿ ಮೂರು ಕೆಎಸ್ಆರ್‌ಪಿ, ಮೂರು ಜನ ಸಿಪಿಐ ನಿಯೋಜನೆ ಮಾಡಲಾಗಿದೆ.
ಸಿಸಿಟಿವಿಯಲ್ಲಿ ಕಲ್ಲು, ತಲ್ವಾರ್ ಎಸೆಯುವ ದೃಶ್ಯ ಸೆರೆಯಾಗಿದೆ. ಪೊಲೀಸ್ ಜೀಪ್ ಬರುತ್ತಿದ್ದಂತೆಯೇ ಅದರತ್ತ ಒಂದು ಕೋಮಿನ ಯುವಕರು ತಲ್ವಾರ್ ಎಸೆದಿದ್ದಾರೆ. ಇದರಿಂದ ಭಯಭೀತರಾದ ಹಿಂದೂಗಳು ಮಹಿಳಾ ಪೊಲೀಸ್ ಅಧಿಕಾರಿಗೆ ತಮ್ಮತ್ತ ತಲ್ವಾರ್ ಎಸೆದಿರುವುದನ್ನು ತೋರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಚಾರ ತಿಳಿದ ಕೂಡಲೇ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಶಹಾಪುರ ಪೊಲೀಸ್ ಠಾಣೆಗೆ ಆಗಮಿಸಿದ್ದು, ಘಟನೆ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ. ನಗರದ ತುಂಬೆಲ್ಲಾ ರೌಂಡ್ಸ್ ಹಾಕಲು ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ನಿಗಾ ಇರಿಸಲು ಸೂಚಿಸಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿ ಕರೆಯಿಸುತ್ತಿದ್ದೇವೆ. ಗಲಾಟೆಯಲ್ಲಿ ಎಂಟು ಜನರಿಗೆ ಗಾಯವಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ರಿಕೆಟ್ ವಿಚಾರಕ್ಕೆ ಗಲಾಟೆಯಾಗಿದ್ದು ಬಳಿಕ ದೊಡ್ಡದಾಗಿದೆ. ತಲ್ವಾರ್ ಝಳಪಿಸಿದ್ದರ ಕುರಿತು ಮಾಹಿತಿ ಇದೆ. ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಯಾರೂ ಸುಳ್ಳು ವದಂತಿ ಹರಡಬಾರದು ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹೇಳಿದ್ದಾರೆ.
ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!
ಗದಗ: ಭಾವಂದಿರು ಬಂದು ಥಳಿಸಿ ತನ್ನ ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋದರು ಎಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ನೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಗದಗ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ.
ಈಶಪ್ಪ ಕಟ್ಟಿಮನಿ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನನ್ನ ಸಾವಿಗೆ ಭಾವಂದಿರೇ (ಪತ್ನಿಯ ಸಹೋದರರು) ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗದಗನ ಬಸವೇಶ್ವರ ನಗರದಲ್ಲಿನ ಸರ್ಕಾರಿ ಶಾಲೆ ನಂ. 6 ರಲ್ಲಿ ಶಿಕ್ಷಕನಾಗಿದ್ದ ಈಶಪ್ಪ ಕಳೆದ ರಾತ್ರಿ ಹೆಂಡತಿ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆಗೆ ಆಕೆಯ ಸಹೋದರರಾದ ಅನಿಲ್ ಪವಾರ ಮತ್ತು ಮಂಜುನಾಥ ಪವಾರ ಎಂಬುವವರು ಮನಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಸಹೋದರಿಯೊಂದಿಗೆ ಭಾವ ಜಗಳ ಮಾಡುತ್ತಿರುವುದನ್ನು ನೋಡಿಕೊಂಡು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು ನಮ್ಮ ತಂಗಿ ಜತೆಗೆ ಯಾಕೆ ಜಗಳ ಮಾಡುತ್ತೀಯಾ ಎಂದು ಈಶಪ್ಪನಿಗೆ ಎರಡು ಬಾರಿಸಿದ್ದಾರೆ. ಅಲ್ಲದೆ, ಈ ವೇಳೆ ಸಾಕಷ್ಟು ಗಲಾಟೆಗಳು ಸಹ ನಡೆದಿವೆ ಎನ್ನಲಾಗಿದೆ.
ಕೊನೆಗೆ ಮಾತಿಗೆ ಮಾತು ಬೆಳೆದಿದ್ದರಿಂದ ಅನಿಲ್ ಮತ್ತು ಮಂಜುನಾಥ ಅವರು ಇನ್ನು ತಮ್ಮ ತಂಗಿ ಇಲ್ಲಿ ಇರುವುದು ಸರಿಯಲ್ಲ. ಆಕೆಯನ್ನು ತವರು ಮನೆಗೆ ಕರೆದೊಯ್ಯುವುದೇ ಸರಿ ಎಂದು ನಿರ್ಧರಿಸಿ ಅಲ್ಲಿಂದ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇದರಿಂದ ಮನನೊಂದ ಈಶಪ್ಪ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಈ ವೇಳೆ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಭಾವಂದಿರಾದ ಅನಿಲ್ ಮತ್ತು ಮಂಜುನಾಥ್ ಅವರೇ ಕಾರಣ ಎಂದು ದೂರಿದ್ದಾರೆ. ನನ್ನ ಸಾವಿಗೆ ಇವರಿಬ್ಬರೂ ಕಾರಣರಾಗಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು ಎಂದು ಉಲ್ಲೇಖಿಸಿದ್ದಾರೆ. ಗದಗ ನಗರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.