ಕೋಲ್ಕೊತಾ: ಬದಲಾದ ಕಾಲಘಟ್ಟದಲ್ಲಿ ಆನ್‌ಲೈನ್ ಗೇಮ್‌ಗಳು (Online Games) ಮಕ್ಕಳು ಮಾತ್ರವಲ್ಲ, ಯುವಕರಿಗೂ ಫೇವರಿಟ್ ಆಗಿವೆ. ಮೂರು ವರ್ಷದ ಮಗು ಕೂಡ ಆನ್‌ಲೈನ್ ಮೂಲಕ ಗೇಮ್ ಆಡಲು ಬಿಡದಿದ್ದರೆ ಊಟ ಮಾಡುವುದಿಲ್ಲ. ಅಷ್ಟೇ ಅಲ್ಲ, ಈ ಆನ್‌ಲೈನ್ ಗೇಮ್ ಆಡುವ ಗೀಳು ಈಗ ಅಪರಾಧ ಕೃತ್ಯಗಳಿಗೂ ಕಾರಣವಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ (West Bengal) ಆನ್‌ಲೈನ್ ಗೇಮ್ ಪಾಸ್‌ವರ್ಡ್ ಕೊಡಲಿಲ್ಲ ಎಂದು ಒಂದಷ್ಟು ಯುವಕರು ತಮ್ಮ ಗೆಳೆಯನನ್ನೇ ಕೊಂದು ಹಾಕಿದ್ದಾರೆ.
ಹೌದು, ಆನ್‌ಲೈನ್ ಮೊಬೈಲ್ ಗೇಮ್ ಪಾಸ್‌ವರ್ಡ್ ಕೊಡದ ಕಾರಣಕ್ಕೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಪಪಾಯ್ ದಾಸ್ (18) ಎಂಬ ಯುವಕನು ಹತ್ಯೆಗೀಡಾಗಿದ್ದಾನೆ. ಈತನ ಗೆಳೆಯರೇ ಕೊಂದು, ದೇಹವನ್ನು ಸುಟ್ಟು, ಬಳಿಕ ಶವವನ್ನು ಕಾಡಿನಲ್ಲಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಮುರ್ಷಿದಾಬಾದ್ ಜಿಲ್ಲೆಯ ಕಾಡಿನಲ್ಲಿ ಜನವರಿ 15ರಂದು ಪಪಾಯ್ ದಾಸ್ ಶವ ಪತ್ತೆಯಾಗಿದೆ. ಮನೆಯಿಂದ ಹೊರಗೆ ಹೋದ ಮಗ ವಾಪಸ್ ಬರದ ಕಾರಣ ಆತನ ತಾಯಿ ಪೂರ್ಣಿಮಾ ದಾಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಪಪಾಯ್ ದಾಸ್ ಹಾಗೂ ಆತನ ಗೆಳೆಯರಿಗೆಲ್ಲ ಆನ್‌ಲೈನ್ ಗೇಮ್ ಆಡುವ ಗೀಳು ಅಂಟಿಕೊಂಡಿದೆ. ಇವರು ಕಾಲೇಜಿಗೆ ಹೋದರೂ ಆನ್‌ಲೈನ್ ಗೇಮ್‌ನಲ್ಲೇ ಮುಳುಗಿರುತ್ತಿದ್ದರು. ಹೀಗೆ ಎಲ್ಲರೂ ಆನ್‌ಲೈನ್ ಗೇಮ್ ಆಡಲು ಒಂದು ಕಡೆ ಸೇರಿದ್ದಾರೆ. ಆಗ ಒಬ್ಬನು ಪಾಸ್‌ವರ್ಡ್ ಕೊಡು ಎಂದು ಪಪಾಯ್ ದಾಸ್‌ಗೆ ಕೇಳಿದ್ದಾನೆ. ಇದಕ್ಕೆ ಪಪಾಯ್ ದಾಸ್ ಒಪ್ಪಿಲ್ಲ. ಇದರಿಂದಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದವು ಜಗಳಕ್ಕೆ ತಿರುಗಿದೆ. ಜಗಳದ ವೇಳೆ ಎಲ್ಲ ಗಳೆಯರು ಒಂದಾಗಿ ಪಪಾಯ್ ದಾಸ್‌ನನ್ನು ಕೊಂದುಹಾಕಿದ್ದಾರೆ.
ಇದನ್ನೂ ಓದಿ: Shivamogga News : ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದಳು ಚೆಲುವೆ; ನವ ವಿವಾಹಿತೆಯದ್ದು ಆತ್ಮಹತ್ಯೆನಾ? ಕೊಲೆನಾ?
ಗೆಳೆಯನನ್ನೇ ಕೊಂದ ದುರುಳರು ಆತನ ಶವವನ್ನು ಊರಿನ ಆಚೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ, ಯಾರೂ ಇಲ್ಲದ ಜಾಗದಲ್ಲಿ ಶವವನ್ನು ಸುಟ್ಟುಹಾಕಿದ್ದಾರೆ. ಬಳಿಕ ಕಾಡಿನೊಳಗೆ ಶವವನ್ನು ಎಸೆದು ಪರಾರಿಯಾಗಿದ್ದಾರೆ. ಮನೆಯಿಂದ ಹೋಗಿ ಹಲವು ದಿನಗಳಾದರೂ ವಾಪಸ್ ಬರದ ಕಾರಣ ಪೂರ್ಣಿಮಾ ದಾಸ್ ಅವರು ದೂರು ನೀಡಿದ್ದಾರೆ. ಪೊಲೀಸರು ಪಪಾಯ್ ದಾಸ್ ಗೆಳೆಯರನ್ನು ಬಂಧಿಸಿದ್ದು, ಶುಕ್ರವಾರ (ಜನವರಿ 19) ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳ ಆನ್‌ಲೈನ್ ಗೀಳಿನ ಬಗ್ಗೆ ಪೋಷಕರು ಜಾಗೃತರಾಗಿ ಇರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ