ನವ ದೆಹಲಿ: ಅಮರನಾಥ ಯಾತ್ರೆ ಮೇಲೆ ದಾಳಿ ಮಾಡಲು ಸಂಚು ಮಾಡುತ್ತಿದ್ದ, ಪಾಕಿಸ್ತಾನದ ಲಷ್ಕರೆ ತಯ್ಬಾ ಸಂಘಟನೆಗೆ ಸೇರಿದ ಉಗ್ರ ತಾಲಿಬ್ ಹುಸೇನ್ ಶಾಗೆ ಬಿಜೆಪಿ ಜತೆ ಸಂಬಂಧವಿದೆ ಎಂಬ ಅಂಶದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಪಕ್ಷ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ.
ತಾಲಿಬ್ ಹುಸೇನ್ ಕಾಶ್ಮೀರದ ಐಟಿ ಸೆಲ್ ಮುಖ್ಯಸ್ಥನಾಗಿದ್ದ ಎಂಬ ಆರೋಪವನ್ನು ಬಲವಾಗಿ ತಳ್ಳಿ ಹಾಕಿರುವ ಬಿಜೆಪಿ, ಅವನು ಐಟಿ ಸೆಲ್ ಮುಖ್ಯಸ್ಥನಾಗಿರಲಿಲ್ಲ ಮತ್ತು ಅವನಿಗೂ ಪಕ್ಷಕ್ಕೂ ಸಂಬಂಧವೇ ಇಲ್ಲ ಎಂದು ವಾದಿಸಿದೆ. ಈ ಬಗ್ಗೆ ಎನ್‌ಐಎ ತನಿಖೆ ನಡೆಸಿ ಎಲ್ಲ ಸತ್ಯಾಂಶಗಳನ್ನು ಬಯಲಿಗೆ ತರಬೇಕು ಎಂದು ಒತ್ತಾಯಿಸಿದೆ.
ಕಾಶ್ಮೀರದ ರಜೌರಿ ಜಿಲ್ಲೆಯ ತಾಲಿಬ್ ಹುಸೇನ್ ಮತ್ತು ಪುಲ್ವಾಮಾ ಜಿಲ್ಲೆಯ ಫೈಜಲ್ ಅಹಮದ್ ಎಂಬಿಬ್ಬರನ್ನು ಭದ್ರತಾ ಪಡೆಗಳ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಜುಲೈ ೫ರಂದು ಬಂಧಿಸಿದ್ದು. ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಟುಕ್ಸನ್ ಧೋಕ್ ಗ್ರಾಮದಲ್ಲಿ ಬಂಧಿತರಾದ ಅವರಿಂದ ಎರಡು ಎ.ಕೆ. ರೈಫಲ್‌ಗಳು, ಏಳು ಗ್ರೆನೇಡ್‌ಗಳು, ಒಂದು ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿತ್ತು. ತಾಲಿಬ್ ಹುಸೇನ್ ಒಬ್ಬ ಘೋಷಿತ ಅಪರಾಧಿಯಾಗಿದ್ದು, ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಲಾಗಿತ್ತು. ಹುಸೇನ್‌ಗೆ ಲಷ್ಕರ್‌ಗೆ ಸಂಘಟನೆ ಜತೆ ಸಂಬಂಧವಿರುವುದು ಮಾತ್ರವಲ್ಲ, ಉಗ್ರ ಸಂಘಟನೆ ಆತನಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಒದಗಿಸಿತ್ತು ಎಂದು ಹೇಳಲಾಗಿದೆ.
ಐಟಿ ಸೆಲ್ ಮುಖ್ಯಸ್ಥನೇ?
ಇಂಥ ಉಗ್ರಗಾಮಿಯೊಬ್ಬ ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಸದಸ್ಯನೆಂಬ ಮಾಹಿತಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅತ ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾದ ಉಸ್ತುವಾರಿಯಾಗಿದ್ದ ಮತ್ತು ಐಟಿ ಹಾಗೂ ಸೋಷಿಯಲ್ ಮೀಡಿಯಾ ಸೆಲ್‌ನ್ನೂ ನೋಡಿಕೊಳ್ಳುತ್ತಿದ್ದ ಎಂಬ ಸುದ್ದಿ ಹರಡಿತ್ತು.
ಬಿಜೆಪಿ ಕೂಡಾ ಒಪ್ಪಿಕೊಂಡಿತ್ತು
ಒಂದು ಹಂತದಲ್ಲಿ ಹುಸೇನಿ ಬಿಜೆಪಿ ಸದಸ್ಯನಾಗಿದ್ದ ಎಂದು ಬಿಜೆಪಿ ಕೂಡಾ ಆರಂಭದಲ್ಲಿ ಒಪ್ಪಿಕೊಂಡಿತ್ತು. ಆದರೆ, ಬಳಿಕ ಆತ ಕೇವಲ ೧೮ ದಿನಗಳ ಕಾಲ ಸದಸ್ಯನಾಗಿದ್ದ. ಮೇ ತಿಂಗಳಲ್ಲಿ ರಾಜೀನಾಮೆ ಕೊಟ್ಟಿದ್ದಾನೆ ಎಂದು ಹೇಳಿತು. ಆದರೆ, ಅವನಿಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದ್ರ ರೈನಾ ಸ್ಪಷ್ಟಪಡಿಸಿದ್ದರು. ತಾಲಿಬ್ ಹುಸೇನ್ ಪಕ್ಷದ ಸದಸ್ಯನೇ ಆಗಿರಲಿಲ್ಲ. ಅವನು ಪತ್ರಕರ್ತನ ಸೋಗಿನಲ್ಲಿ ಬಿಜೆಪಿ ಕಚೇರಿಗೆ ಬರುತ್ತಿದ್ದರು ಎಂದು ರೈನಾ ಹೇಳಿಕೊಂಡಿದ್ದಾರೆ.
ಬಿಜೆಪಿ ನಾಯಕರೇ ಹಿಟ್ ಲಿಸ್ಟಲ್ಲಿದ್ದರು!
ತಾಲಿಬ್ ಹುಸೇನ್‌ನ ಹಿಟ್ ಲಿಸ್ಟ್‌ನಲ್ಲಿ ಬಿಜೆಪಿ ನಾಯಕರು ಇದ್ದರು. ಅವನು ನನ್ನ ಕಚೇರಿಗೆ ಬಂದು ವಿಡಿಯೊ ಮಾಡಿದ್ದ. ಅವುಗಳನ್ನು ಪಾಕಿಸ್ತಾನದ ಉಗ್ರ ಸಂಘಟನೆಗಳಿಗೆ ಕಳುಹಿಸಿದ್ದ. ಪತ್ರಕರ್ತನೆಂದು ಹೇಳಿಕೊಂಡು ಬಿಜೆಪಿ ನಾಯಕರನ್ನು ಭೇಟಿಯಾಗುತ್ತಿದ್ದ ಎನ್ನುವುದು ರವೀಂದ್ರ ರೈನಾ ನೀಡುವ ವಿವರಣೆ.
ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಿಗೆ ನೋಟಿಸ್
ಈ ನಡುವೆ, ತಾಲಿಬ್ ಹುಸೇನ್‌ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವ ವಿವಾದಕ್ಕೆ ಸಂಬಂಧಿಸಿ ೪೮ ಗಂಟೆಗಳ ಒಳಗೆ ವಿವರ ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೇಖ್ ಬಶೀರ್ ಅವರಿಗೆ ರೈನಾ ಶೋಕಾಸ್ ನೋಟಿಸ್ ನೀಡಿದ್ದಾರೆ. ʻʻಅವರಿಗೆ ಯಾರನ್ನೇ ಅದರೂ ನೇಮಕ ಮಾಡಿಕೊಳ್ಳಲು ಅಧಿಕಾರವಿಲ್ಲ. ಪ್ರತಿಯೊಂದು ನೇಮಕವನ್ನೂ ಪಕ್ಷದ ಅಧ್ಯಕ್ಷರೇ ನಡೆಸಬೇಕುʼʼ ಎಂದು ರೈನಾ ಹೇಳಿದ್ದಾರೆ.
ಇದನ್ನೂ ಓದಿ| ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಸ್ಕೆಚ್, ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರು ಅರೆಸ್ಟ್, ಒಬ್ಬ I love NAMO ಎಂದಿದ್ದ!