Site icon Vistara News

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌; ಟೆಕ್ನಾಲಜಿ ಬಳಸಿ ವಿದ್ರೋಹಿಗಳ ಹಿಡಿಯಲು ಸಿಎಂ ಖಡಕ್‌ ಸೂಚನೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣದಲ್ಲಿನ (Blast in Bengaluru) ಸಂಪೂರ್ಣ ಸತ್ಯ ಹೊರಗೆ ಬರಲಿ. ತಂತ್ರಜ್ಞಾನದ ಸಾಧ್ಯತೆಗಳನ್ನು ತನಿಖೆಯಲ್ಲಿ ಪರಿಣಾಮಕಾರಿಯಾಗಿ ಬಳಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಶನಿವಾರ ಗೃಹ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಜನನಿಬಿಡ ಸ್ಥಳಗಳನ್ನು ಗುರುತಿಸಿ ಅಂಥ ಪ್ರದೇಶಗಳಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಿ. ಜನರಿಗೆ ರಕ್ಷಣೆ ಒದಗಿಸಬೇಕು ಎಂದು ಸೂಚಿಸಿದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲು ಸೂಚಿಸಿದ ಮುಖ್ಯಮಂತ್ರಿಗಳು ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಪೊಲೀಸರು ಇಂಥ ಘಟನೆ ನಡೆದಾಗ ಎಚ್ಚರಿಕೆ ವಹಿಸಿ, ನಂತರ ಮರೆಯುವುದಾಗಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಟ್ಟ ಹಾಕುವಂತೆ ಸೂಚನೆ ನೀಡಿದರು.

ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೇ ಕ್ರಮ ಜರುಗಿಸಿ

ಇಂಟೆಲಿಜೆನ್ಸ್ ಹೆಚ್ಚು ಜಾಗೃತವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೇ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು. ಈ ಬಗ್ಗೆಯೇ ಪೊಲೀಸ್ ಇಲಾಖೆ ಜತೆಗೆ ಪ್ರತ್ಯೇಕ ಸಭೆ ಕರೆಯುವುದಾಗಿ ಹೇಳಿದರು. ಸಮಯ ಸಂದರ್ಭಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕು ಎಂದರು.

ಸಚಿವ ಪ್ರಿಯಾಂಕ ಖರ್ಗೆ, ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಬಿ.ದಯಾನಂದ್, ಮೊದಲಾದವರು ಉಪಸ್ಥಿತರಿದ್ದರು.

ಬಾಂಬ್‌ ಬ್ಲಾಸ್ಟ್ ಕೇಸ್‌ ತನಿಖೆ NIA ಹೆಗಲಿಗೆ? ಇಂದೇ ಹಸ್ತಾಂತರ!

ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ ಪ್ರಕರಣವನ್ನು (Blast in Bengaluru) ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು (ಭಾನುವಾರ) ಸಂಜೆ ಅಧಿಕೃತವಾಗಿ ವರ್ಗಾವಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. .

ಈಗಾಗಲೇ ಕೇಸ್ ಬಗ್ಗೆ ನಗರ ಪೊಲೀಸರಿಂದ ಎನ್‌ಐಎ ಮಾಹಿತಿಯನ್ನು ಪಡೆದುಕೊಂಡಿದೆ. ಅಲ್ಲದೆ, ಈ ಬ್ಲಾಸ್ಟ್‌ ಅನ್ನು ವ್ಯವಸ್ಥಿತವಾಗಿ ಮಾಡಲಾಗಿದ್ದು, ಎಲ್ಲಿಯೂ ಸಹ ಹೆಚ್ಚಿನ ಚಹರೆಯಾಗಲಿ, ಸುಳಿವನ್ನಾಗಲೀ ಬಿಡದಂತೆ ಪ್ಲ್ಯಾನ್‌ ಮಾಡಿ ಬ್ಲಾಸ್ಟ್‌ ಮಾಡಲಾಗಿದೆ. ಜತೆಗೆ ಇದು ಒಬ್ಬ ಕೃತ್ಯವಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರ ಹಿಂದೆ ಒಂದು ಜಾಲವೇ ಇದ್ದು, ಆ ಬಗ್ಗೆ ತನಿಖೆ ನಡೆಸಬೇಕಿದೆ. ಅಲ್ಲದೆ, ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಬಳಸಿದ ವಸ್ತುಗಳಿಗೂ, ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಬಳಕೆ ಮಾಡಲಾಗಿರುವ ವಸ್ತುಗಳಿಗೂ ಸಾಮ್ಯತೆ ಇರುವುದರಿಂದ ತನಿಖೆ ಬೇರೆ ದಿಕ್ಕಿನಲ್ಲೇ ಸಾಗಬೇಕಿದೆ. ಹೀಗಾಗಿ ಎನ್‌ಐಎ ಮಧ್ಯಪ್ರವೇಶ ಮಾಡಿದೆ. ತನಿಖೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Blast in Bengaluru: ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್? ಸರ್ಕಾರದ ವಿರುದ್ಧ ಗುಡುಗಿದ ಸಿ.ಟಿ.ರವಿ

ಇದರ ಹಿಂದೆ ಉಗ್ರರ ಕೈವಾಡ ಇದೆಯೇ? ಅಥವಾ ವೈಯಕ್ತಿಕ ದ್ವೇಷಕ್ಕೆ ಮಾಡಲಾಗಿದೆಯೇ? ಇಲ್ಲವೇ ಬೇರೆ ಯಾವ ಕಾರಣಕ್ಕೆ ಯಾರು ಮಾಡಿರಬಹುದು ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯಬೇಕು. ಇನ್ನು ಬಾಂಬ್‌ ಸ್ಫೋಟದಂತಹ ಪ್ರಕರಣಗಳಲ್ಲಿ ಹಲವು ತನಿಖೆಗಳನ್ನು ನಡೆಸಿರುವ ಎನ್‌ಐಎ ಜವಾಬ್ದಾರಿ ವಹಿಸಿಕೊಂಡರೆ ಜಾಲವನ್ನು ಭೇದಿಸುವುದು ಮತ್ತಷ್ಟು ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ರಾಮೇಶ್ವರಂ ಬಾಂಬ್‌ ಬ್ಲಾಸ್ಟ್‌ ಪ್ರಕರಣವನ್ನು ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈ ಮೊದಲು ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.

Exit mobile version