Site icon Vistara News

Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್ ಕೇಸ್‌ ತನಿಖೆ NIA ಹೆಗಲಿಗೆ? ಇಂದೇ ಹಸ್ತಾಂತರ!

Reasi Terror Attack

ಬೆಂಗಳೂರು: ವೈಟ್‌ಫೀಲ್ಡ್‌ನ (Whitefield) ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ ಪ್ರಕರಣವನ್ನು (Blast in Bengaluru) ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು (ಭಾನುವಾರ) ಸಂಜೆ ಅಧಿಕೃತವಾಗಿ ವರ್ಗಾವಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. .

ಈಗಾಗಲೇ ಕೇಸ್ ಬಗ್ಗೆ ನಗರ ಪೊಲೀಸರಿಂದ ಎನ್‌ಐಎ ಮಾಹಿತಿಯನ್ನು ಪಡೆದುಕೊಂಡಿದೆ. ಅಲ್ಲದೆ, ಈ ಬ್ಲಾಸ್ಟ್‌ ಅನ್ನು ವ್ಯವಸ್ಥಿತವಾಗಿ ಮಾಡಲಾಗಿದ್ದು, ಎಲ್ಲಿಯೂ ಸಹ ಹೆಚ್ಚಿನ ಚಹರೆಯಾಗಲಿ, ಸುಳಿವನ್ನಾಗಲೀ ಬಿಡದಂತೆ ಪ್ಲ್ಯಾನ್‌ ಮಾಡಿ ಬ್ಲಾಸ್ಟ್‌ ಮಾಡಲಾಗಿದೆ. ಜತೆಗೆ ಇದು ಒಬ್ಬ ಕೃತ್ಯವಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರ ಹಿಂದೆ ಒಂದು ಜಾಲವೇ ಇದ್ದು, ಆ ಬಗ್ಗೆ ತನಿಖೆ ನಡೆಸಬೇಕಿದೆ. ಅಲ್ಲದೆ, ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಬಳಸಿದ ವಸ್ತುಗಳಿಗೂ, ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಬಳಕೆ ಮಾಡಲಾಗಿರುವ ವಸ್ತುಗಳಿಗೂ ಸಾಮ್ಯತೆ ಇರುವುದರಿಂದ ತನಿಖೆ ಬೇರೆ ದಿಕ್ಕಿನಲ್ಲೇ ಸಾಗಬೇಕಿದೆ. ಹೀಗಾಗಿ ಎನ್‌ಐಎ ಮಧ್ಯಪ್ರವೇಶ ಮಾಡಿದೆ. ತನಿಖೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದೆ.

ಇದರ ಹಿಂದೆ ಉಗ್ರರ ಕೈವಾಡ ಇದೆಯೇ? ಅಥವಾ ವೈಯಕ್ತಿಕ ದ್ವೇಷಕ್ಕೆ ಮಾಡಲಾಗಿದೆಯೇ? ಇಲ್ಲವೇ ಬೇರೆ ಯಾವ ಕಾರಣಕ್ಕೆ ಯಾರು ಮಾಡಿರಬಹುದು ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯಬೇಕು. ಇನ್ನು ಬಾಂಬ್‌ ಸ್ಫೋಟದಂತಹ ಪ್ರಕರಣಗಳಲ್ಲಿ ಹಲವು ತನಿಖೆಗಳನ್ನು ನಡೆಸಿರುವ ಎನ್‌ಐಎ ಜವಾಬ್ದಾರಿ ವಹಿಸಿಕೊಂಡರೆ ಜಾಲವನ್ನು ಭೇದಿಸುವುದು ಮತ್ತಷ್ಟು ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ರಾಮೇಶ್ವರಂ ಬಾಂಬ್‌ ಬ್ಲಾಸ್ಟ್‌ ಪ್ರಕರಣವನ್ನು ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈ ಮೊದಲು ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.

ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್‌? ಮೊಬೈಲ್‌ ಬಳಸದೇ ಕೃತ್ಯ!

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಆಯಾಮದಲ್ಲಿ ತನಿಖೆಯನ್ನು (Blast In Bengaluru) ನಡೆಸುತ್ತಿದ್ದಾರೆ. ಈ ಕೃತ್ಯವು ಶಂಕಿತರ ಟಾರ್ಗೆಟ್‌ ಆಗಿತ್ತೇ ಅಥವಾ ಬ್ಯುಸಿನೆಸ್‌ ಕಾರಣಕ್ಕೆ ವಿರೋಧಿಗಳು ಬಾಂಬ್‌ ಬ್ಲಾಸ್ಟ್‌ ಮಾಡಿಸಿದ್ದರಾ ಎಂಬುದರ ಕುರಿತು ತನಿಖೆ (rameshwaram cafe blast) ಮುಂದುವರಿದಿದೆ.

ಈ ನಡುವೆ ಶಂಕಿತರು ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದ ಸ್ಕೆಚ್‌‌ ಹಾಕಿದ್ದಾರೆ ಎನ್ನಲಾಗಿದೆ. ಕೆಫೆಯಲ್ಲಿ ಯಾವಾಗ ಹೆಚ್ಚು ಜನರು ಇರುತ್ತಾರೆ. ಕೆಫೆಗೆ ಸುತ್ತಮುತ್ತ ಎಲ್ಲೆಲ್ಲಿ ಸಿಸಿ ಕ್ಯಾಮೆರಾ ಇದೆ. ಸಿಸಿ ಕ್ಯಾಮೆರಾ ಇದ್ದರೂ ಕೃತ್ಯದ ಬಳಿಕ ಹೇಗೆ ಸೇಫ್‌ ಆಗಿ ಎಕ್ಸಿಟ್‌ ಆಗಬೇಕು. ಈ ನಡುವೆ ಎಲ್ಲೆಲ್ಲಿ ಪೊಲೀಸ್ ಠಾಣೆಗಳು ಸಿಗುತ್ತವೆ ಎನ್ನುವ ಮಾಹಿತಿಯನ್ನು ಈ ಮೊದಲೇ ಸಂಗ್ರಹಿಸಿದ್ದಾರೆ.

ಜತೆಗೆ ನಗರದಲ್ಲಿ ಎಲ್ಲೆಲ್ಲಿ ಇಂಟೆಲಿಜೆನ್ಸಿ ಐಬಿ ಹೆಚ್ಚಾಗಿ ಸಕ್ರಿಯವಾಗಿದೆ ಎಂಬುದರ ಬಗ್ಗೆಯೂ ರೆಕ್ಕಿ ಮಾಡಿದ್ದಾರೆ. ಇನ್ನೂ ಕೃತ್ಯದಲ್ಲಿ ಒಬ್ಬನಲ್ಲ ಬದಲಿದೆ ಒಂದು ಗ್ಯಾಂಗ್‌ ಕೆಲಸ ಮಾಡಿದೆ ಎಂಬ ಅನುಮಾನ ಮೂಡಿದೆ. ಶಂಕಿತರು ಯಾವುದೇ ಮೊಬೈಲ್‌ ಬಳಸದೇ ಕೃತ್ಯ ಎಸಗಿದ್ದಾರೆ.

ಇಂದೊಂದು ಫ್ರೀ ಪ್ಲಾನ್ಡ್‌ ಬ್ಲಾಸ್ಟಾ?

ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾ ಎಂಬ ಅನುಮಾನ ಮೂಡುತ್ತಿದೆ. ದಿ ರಾಮೇಶ್ವರಂ ಕೆಫೆ ಸ್ಫೋಟವನ್ನು ಬ್ಯುಸಿನೆಸ್ ವಿಚಾರಕ್ಕೆ ಟಾರ್ಗೆಟ್‌ ಮಾಡಿಲ್ಲ. ಬದಲಿಗೆ ಸಾವು-ನೋವುಗಳನ್ನು ಮಾಡಲೇಬೇಕೆಂಬ ಕಾರಣಕ್ಕೆ ಸ್ಫೋಟ ನಡೆಸಲಾಗಿದೆ ಎನ್ನಲಾಗುತ್ತಿದೆ. ಕೆಫೆಯಲ್ಲಿ ಮಧ್ಯಾಹ್ನ ಹೊತ್ತು ಗ್ರಾಹಕರು ಅತಿ ಹೆಚ್ಚಾಗಿ ಬರುತ್ತಾರೆ ಎಂಬ ಮಾಹಿತಿ ಮೊದಲೇ ಸಂಗ್ರಹಿಸಿದ್ದರು. ಸ್ಫೋಟಕ್ಕೂ ಮುನ್ನ ಶಂಕಿತರು ಸಾಕಷ್ಟು ರಿಸರ್ಚ್‌ ಮಾಡಿದ್ದಾರೆ. ಹೀಗಾಗಿ ಯಾವ ಬಸ್‌ನಲ್ಲಿ ಬಂದು ಇಳಿಬೇಕು, ಯಾವ ಬಸ್‌ ಮೂಲಕ ವಾಪಸ್ ಹೋಗಬೇಕೆಂದು ಮೊದಲೇ ಮಾಹಿತಿಯನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸಿಸಿ ಕ್ಯಾಮೆರಾಗಳ ಕೈ ಸಿಗದಂತೆ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕ್ಯಾಪ್, ಕೈ ರೇಖೆ ಗುರುತು ಸಿಗದಂತೆ ಹ್ಯಾಂಡ್ ಗ್ಲೌಸ್ ಬಳಕೆ ಮಾಡಲಾಗಿದೆ. ಸುಮಾರು 25ರ ಆಸುಪಾಸಿನ ಶಂಕಿತ ಎಂದು ಗುರುತಿಸಲಾಗಿದೆ. ವೋಲ್ವೋ ಬಸ್ ಹತ್ತಿ ರಾಮೇಶ್ವರಂ ಕೆಫೆಯಿಂದ ಎರಡು ಸ್ಟಾಪ್ ನಂತರ ಇಳಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 500 ಎಫ್ ವೋಲ್ವೋ ಬಸ್‌ನ ಕೊನೆಯ ನಿಲ್ದಾಣವಾಗಿದ್ದು, ಅಲ್ಲಿಂದ ಬೇರೆ ಕಡೆಗೆ ಬಸ್‌ ಮೂಲಕವೇ ಹೋಗಲು ಪ್ಲಾನ್‌ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ – ಮಂಗಳೂರು ಬ್ಲಾಸ್ಟ್‌ಗೆ ಸಾಮ್ಯತೆ; ಇಲ್ಲ ಅಂದ್ರು ಸಿಎಂ, ಇದೆ ಅಂದ್ರು ಡಿಸಿಎಂ!

ಇನ್ನೂ ಕೃತ್ಯಕ್ಕೆ ಸ್ವಂತ ವಾಹನ ಬಳಕೆ ಮಾಡಿಲ್ಲ, ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿದ್ದಾನೆ. ಮತ್ತೊಂದು ಕಡೆ ತಾನು ಬಂದ ಬಸ್‌ನಲ್ಲಿ ಬಾಂಬ್ ಬಿಟ್ಟು ಹೋಗಬಹುದಿತ್ತು, ಆದರೆ ರಾಮೇಶ್ವರಂ ಕೆಫೆನೇ ಯಾಕೆ ಎಂಬ ಪ್ರಶ್ನೆಯು ಉದ್ಭವಿಸಿದೆ. ಇದೆಲ್ಲವೂ ಪೊಲೀಸರ ತನಿಖೆಯಿಂದಲೇ ಹೊರಬಾರಬೇಕಿದೆ.

Exit mobile version