Site icon Vistara News

Blast in Bengaluru: ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಳ್ಳಾರಿಯ ಬಂಧಿತ ಉಗ್ರ ಮಿನಾಝ್‌ ಕೈವಾಡ? ತೀವ್ರ ವಿಚಾರಣೆ

nia officers

ಬೆಂಗಳೂರು: ರಾಜಧಾನಿಯ ವೈಟ್‌ಪೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ (Rameshwaram cafe bomb blast, bengaluru blast, blast in bengaluru) ಬಾಂಬ್‌ ಸ್ಫೋಟ ನಡೆಸಿರುವ ಉಗ್ರನ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರು, ಈಗಾಗಲೇ ಇಂಥ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವ, ಇಂಥ ಸ್ಫೋಟಗಳ ಪ್ಲಾನ್‌ ನಡೆಸಿದ್ದವರನ್ನು ಎರಡನೇ ಸುತ್ತಿನ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ. ಬಳ್ಳಾರಿಯಲ್ಲಿ (Belllary) ಬಂಧಿತನಾಗಿ ಈಗ ಪರಪ್ಪನ ಅಗ್ರಹಾರದಲ್ಲಿ ಇರುವ ಶಂಕಿತ ಉಗ್ರ (Suspected terrorist) ಮಿನಾಝ್‌ ಅಲಿಯಾಸ್‌ ಸುಲೈಮಾನ್‌ನನ್ನು (Minaz alias Sulaiman) ಎನ್‌ಐಎ (NIA) ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ (interrogation) ನಡೆಸಿದ್ದು, ಕೆಫೆ ಬಾಂಬರ್‌ಗೂ (Cafe bomber) ಇವನಿಗೂ ಇರಬಹುದಾದ ಲಿಂಕ್‌ಗಳನ್ನು ಭೇದಿಸಲು ಯತ್ನಿಸುತ್ತಿದ್ದಾರೆ.

ಬಳ್ಳಾರಿಯಲ್ಲಿ 2023ರ ಡಿಸೆಂಬರ್‌ನಲ್ಲಿ ಬಂಧಿತನಾಗಿ ಈಗ ಪರಪ್ಪನ ಅಗ್ರಹಾರದಲ್ಲಿರುವ ಮಿನಾಝ್‌ನನ್ನು ಎನ್‌ಐಎ ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಹಾದಿ ಸಂಘಟನೆಗಳು, ಖಲೀಫತ್ ಹಾಗೂ ಐಸಿಸ್ ಸಂಘಟನೆಗಳ ಜೊತೆ ಈತ ನಿಕಟ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಜೈಲಿನಲ್ಲಿದ್ದಾನೆ. ಈ ಹಿಂದೆ ಎನ್‌ಐಎ ಅಧಿಕಾರಿಗಳೇ ಈತನಲ್ಲಿಗೆ ದಾಳಿ ನಡೆಸಿ ಬಳ್ಳಾರಿಯಲ್ಲಿ ಬಂಧಿಸಿದ್ದರು. ನಿನ್ನೆಯಷ್ಟೇ ಈತನನ್ನು ಜೈಲಿನಲ್ಲಿ ವಿಚಾರಣೆ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಇಂದು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ.

ಐಎಸ್ಐಎಸ್ ಉಗ್ರ ಸಂಘಟನೆಯ ಭಾರತದ ಮಾಡ್ಯೂಲ್ ಮೇಲೆ ದೇಶದಾದ್ಯಂತ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ಕಳೆದ ಡಿಸೆಂಬರ್‌ನಲ್ಲಿ ಎನ್‌ಐಎ ದಾಳಿ ನಡೆಸಿತ್ತು. ಈ ವೇಳೆ ಬಳ್ಳಾರಿಯಲ್ಲಿ, ಸುಧಾರಿತ ಸ್ಪೋಟಕಗಳನ್ನು ಬಳಸಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮಿನಾಝ್‌ ಅಲಿಯಾಸ್‌ ಸುಲೈಮಾನ್‌ ಮತ್ತು ಸೈಯ್ಯದ್ ಸಮೀರ್ ಎಂಬವರನ್ನು ಬಂಧಿಸಿತ್ತು.

ಈ ಉಗ್ರ ಸಂಘಟನೆಯ ಮಾಡ್ಯೂಲ್‌ ನೇತೃತ್ವನ್ನು ಬಳ್ಳಾರಿ ಮೂಲದ ಮಿನಾಝ್ ಅಲಿಯಾಸ್ ಎಂಡಿ ಸುಲೈಮಾನ್ ವಹಿಸಿದ್ದ. ಇವರು ಐಸಿಸ್‌ನ ಭಯೋತ್ಪಾದನೆ ಸಂಬಂಧಿತ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಎನ್ಐಎ ದಾಳಿಯಲ್ಲಿ ಸ್ಫೋಟಕ ಕಚ್ಚಾ ಸಾಮಗ್ರಿಗಳಾದ ಸಲ್ಫರ್, ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಗನ್ ಪೌಡರ್, ಸಕ್ಕರೆ ಮತ್ತು ಎಥೆನಾಲ್ ಮತ್ತು ಹರಿತವಾದ ಆಯುಧಗಳು, ನಗದು, ಸ್ಮಾರ್ಟ್‌ಪೋನ್‌ಗಳು, ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಗಳು ಸ್ಫೋಟಕ ಕಚ್ಚಾ ವಸ್ತುಗಳನ್ನು ಐಇಡಿ ತಯಾರಿಕೆಗೆ ಬಳಸಿ ಅದನ್ನು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಬಳಸಲು ಯೋಜಿಸಿದ್ದರು. ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಈ ಸುಧಾರಿತ ಸ್ಫೋಟಕಗಳ ಮಾದರಿಗೂ ಸಾಮ್ಯವಿದೆ ಎಂದು ತಿಳಿದುಬಂದಿದೆ. ಆರೋಪಿಗಳು ಐಸಿಸ್ ಉಗ್ರ ಸಂಘಟನೆಯ ಪರವಾಗಿ ದೇಶದಲ್ಲಿ ಹಿಂಸಾತ್ಮಕ ಜಿಹಾದ್ ನಡೆಸುವ ಮತ್ತು
ಇತರರನ್ನು ಈ ಮಾರ್ಗಕ್ಕೆ ಸೆಳೆದುಕೊಳ್ಳಲು ಸಕ್ರಿಯರಾಗಿ ಕಾರ‍್ಯ ನಿರ್ವಹಿಸುತ್ತಿದ್ದರು. ಇವರು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದರು. ಜಿಹಾದ್ ಉದ್ದೇಶಕ್ಕಾಗಿ ಮುಜಾಹಿದೀನ್‌ಗಳ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಪ್ರಸಾರ ಮಾಡುತ್ತಿದ್ದರು. ಈ ಶಂಕಿತ ಉಗ್ರರು ತಮ್ಮ ನಡುವಿನ ಸಂರ್ಪಕಕ್ಕೆ ಎನ್ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಬಳಕೆ ಮಾಡುತ್ತಿದ್ದರು.

ದಾಳಿಯ ಸಂದರ್ಭದಲ್ಲಿ ಬಳ್ಳಾರಿಯ ಮಿನಾಝ್ ಅಲಿಯಾಸ್ ಎಂಡಿ ಸುಲೈಮಾನ್‌, ಸೈಯದ್ ಸಮೀರ್, ಬೆಂಗಳೂರಿನ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸ್‌ ಸಮಿ, ಎಂಡಿ ಮುಝಮ್ಮಿಲ್, ಮುಂಬಯಿಯ ಅನಾಸ್ ಇಕ್ಬಾಲ್ ಶೇಖ್, ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೇನ್, ಜಾರ್ಖಂಡ್‌ನ ಎಂಡಿ ಶಹಬಾಜ್ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಈ ಜಾಲದ ಯೋಜನೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಸಾಕಾರವಾಗಿದೆ ಎಂದು ಊಹಿಸಲಾಗಿದೆ. ಇನ್ನಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಈ ಜಾಲ ಮುಂದಾಗಿದ್ದು, ಸದ್ಯ ಪೊಲೀಸರ ಚುರುಕಿನ ಕಾರ್ಯವೈಖರಿಯಿಂದಾಗಿ ಇವರಿಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ: NIA Raid : ಸುಳ್ಯದಲ್ಲೂ ಎನ್‌ಐಎ ದಾಳಿ; 2 ದಿನದ ಹಿಂದೆ ಕೇರಳದಿಂದ ಬಂದಿದ್ದವ ವಶಕ್ಕೆ

Exit mobile version