Site icon Vistara News

ಒಂದೇ ಮರದಲ್ಲಿ ಕಂಡುಬಂತು ಮೂವರು ಸೋದರಿಯರ ಮೃತದೇಹ, ಆತ್ಮಹತ್ಯೆ ಶಂಕೆ

sisters death

ಖಾಂಡ್ವ: ಮಧ್ಯಪ್ರದೇಶದ ಖಾಂಡ್ವ ಜಿಲ್ಲೆಯಲ್ಲಿ ಒಂದೇ ಮರದಲ್ಲಿ ಮೂವರು ಸಹೋದರಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದೊಂದು ಆತ್ಮಹತ್ಯೆ ಪ್ರಕರಣವೆಂದು ಮೇಲ್ನೋಟಕ್ಕೆ ಕಂಡುಬಂದಿದೆಯಾದರೂ ಬೇರೆ ಹಿನ್ನೆಲೆಗಳೂ ಇರಬಹುದು ಎಂಬ ಶಂಕೆಯೂ ಇದೆ.

ಖಾಂಡ್ವ ಜಿಲ್ಲೆಯ ಜವಾರ್‌ ಪೊಲೀಸ್‌ ನಿಲ್ದಾಣ ವ್ಯಾಪ್ತಿಯ ಕೋಟ್‌ಖೇಡಿ ಗ್ರಾಮದಲ್ಲಿನ ಮರದಲ್ಲಿ ಬುಧವಾರ ಬೆಳಗ್ಗೆ ಈ ಶವಗಳು ಕಂಡುಬಂದಿವೆ. ಸೋನು, ಸಾವಿತ್ರಿ ಮತ್ತು ಲಲಿತಾ ಎಂಬ ಹೆಸರಿನ ೧೮ರಿಂದ ೨೨ ವರ್ಷ ವಯಸ್ಸಿನ ಈ ಸೋದರಿಯರು ಸೀರೆಯನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದಿದೆ. ಅವರು ತಮ್ಮ ತಾಯಿ ಮತ್ತು ಸಹೋದರರ ಜತೆ ವಾಸಿಸುತ್ತಿದ್ದರು.

ಇದು ಐವರು ಹೆಣ್ಮಕ್ಕಳು ಮತ್ತು ಮೂವರು ಗಂಡುಮಕ್ಕಳ ಕುಟುಂಬವಾಗಿದ್ದು, ತಾಯಿಯೊಬ್ಬಳೇ ಇವರಿಗೆ ದಿಕ್ಕಾಗಿದ್ದರು. ಘಟನೆ ತಿಳಿದ ತಕ್ಷಣ ಪೊಲೀಸರು ಆಗಮಿಸಿ ಶವಗಳನ್ನು ಇಳಿಸಿ ಪೋಸ್ಟ್‌ ಮಾರ್ಟಂಗೆ ಕಳುಹಿಸಿದ್ದಾರೆ.

ಈ ಸೋದರಿಯರು ಮನೆಯ ಬಡತನದ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಮನ ನೊಂದು ಸಾವಿಗೆ ಶರಣಾದರೆ? ಅಥವಾ ಯಾರಾದರೂ ಕೊಲೆ ಮಾಡಿ ನೇತು ಹಾಕಿದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಇದೇ ರೀತಿ ಸಹೋದರರಿಯರ ಶವಗಳು ಮರದಲ್ಲಿ ಕಂಡುಬಂದಿತ್ತು. ಮುಂದೆ ಇದೊಂದು ವ್ಯವಸ್ಥಿತ ಕೊಲೆ ಎಂದು ಬಯಲಾಗಿತ್ತು.
ಇದನ್ನೂ ಓದಿ Suicide case | ಕರುನಾಡಲ್ಲಿ ಹೆಚ್ಚುತ್ತಿವೆ ಹದಿಹರೆಯದವರ ಆತ್ಮಹತ್ಯೆ; ಕಾರಣವೇನು? ಪರಿಹಾರವೇನು?

Exit mobile version