Site icon Vistara News

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒಡೆತನದ ಶಾಲೆಗೆ ಬಾಂಬ್‌ ಬೆದರಿಕೆ

national hillview public school

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒಡೆತನದ ಶಾಲೆಗೆ ಬಾಂಬ್‌ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್‌ ನಿಷ್ಕ್ರಿಯ ದಳ ಧಾವಿಸಿದೆ.

ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಶಾಲೆಗೆ ಇಮೇಲ್‌ ಮೂಲಕ ಬೆದರಿಕೆ ಬಂದಿದೆ. ಶಾಲೆಯಲ್ಲಿ ಬಾಂಬ್‌ ಇಡಲಾಗಿದ್ದು, ಭಾನುವಾರ ಸಂಜೆ ಸ್ಫೋಟಿಸುವುದಾಗಿ ತಿಳಿಸಲಾಗಿದೆ.

ಏಪ್ರಿಲ್‌ 8ರಂದು ಬೆಳಗ್ಗೆ ಬೆಂಗಳೂರಿನ 5 ಖಾಸಗಿ ಶಾಲೆಗಳಿಗೆ ಬೆದರಿಕೆ ಇಮೇಲ್‌ ಬಂದಿತ್ತು. ಹುಸ್ಕೂರು ಬಳಿಯಿರುವ ಎಬನೈಜರ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಹಾಗೂ ಹೆಣ್ಣೂರು ಬಳಿ ಇರುವ ಸೈಂಟ್‌ ವಿನ್ಸೆಂಟ್‌ ಪಲ್ಲೋಟ್ಟಿ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂಬ ಮಾಹಿತಿ ಲಭಿಸಿತ್ತು. ಕೂಡಲೆ ಪೊಲೀಸರು ಶಾಲೆಗಳಿಗೆ ಧಾವಿಸಿ ಮಕ್ಕಳು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳಿಸಿದ್ದರು. ಕೆಲ ಸಮಯದ ನಂತರ ಈ ಶಾಲೆಗಳ ಜತೆಗೆ ಮಹದೇವಪುರ, ವರ್ತೂರು, ಹೆಣ್ಣೂರು, ಮಾರತ್ತಹಳ್ಳಿ, ಹೆಬ್ಬಗೋಡಿಯಲ್ಲಿರುವ ಇನ್ನೂ ಅನೇಕ ಶಾಲೆಗಳಿಗೆ ಇಮೇಲ್‌ ಬಂದಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೊನೆಗೆ ಬೆಂಗಳೂರಿನ ಹನ್ನೆರಡು ಶಾಲೆಗಳು ಈ ಆತಂಕ ಎದುರಿಸಿದ್ದವು.

barons.masarfm@gmail.com ಇಮೇಲ್‌ ವಿಳಾಸದಿಂದ ಬಂದಿದ್ದ ಸಂದೇಶದಲ್ಲಿ, “ನಿಮ್ಮ ಶಾಲೆಯಲ್ಲಿ ಶಕ್ತಿಯುತ ಬಾಂಬ್‌ ಅಳವಡಿಸಲಾಗಿದೆ. ಎಚ್ಚರಿಕೆಯಿಂದ ಇರಿ, ಇದು ತಮಾಷೆ ಅಲ್ಲ. ತಕ್ಷಣವೇ ಪೊಲೀಸರನ್ನು ಕರೆಯಿರಿ. ನಿಮ್ಮ ಜೀವವೂ ಸೇರಿ ನೂರಾರು ಜೀವಗಳು ಅಪಾಯಕ್ಕೆ ಸಿಲುಕಬಹುದು. ಇನ್ನು ತಡ ಮಾಡಬೇಡಿ, ಎಲ್ಲವೂ ನಿಮ್ಮ ಕೈಯಲ್ಲೇ ಇದೆ ಎಂದು ಇಂಗ್ಲಿಷ್‌ನಲ್ಲಿ ತಿಳಿಸಲಾಗಿತ್ತು.

ಇಮೇಲ್‌ಗಳು ಬಂದಿದ್ದು ಸಿರಿಯಾ ಹಾಗೂ ಪಾಕಿಸ್ತಾನದಿಂದ ಎಂದು ಪೊಲೀಸರು ಶಂಕಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ಕರ್ನಾಟಕ ಪ್ರಗತಿಪರವಾದ ರಾಜ್ಯವಾಗಿದ್ದು, ಇದಕ್ಕೆ ಕೆಟ್ಟ ಹೆಸರು ತರಲು ಕೆಲವರು ಪದೇಪದೆ ಹೀಗೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದೀಗ ಪ್ರಕರಣದ ಬೆನ್ನು ಹತ್ತಿ ಹೋದ ಪೊಲೀಸರಿಗೆ ಅಚ್ಚರಿಯ ಮಾಹಿತಿ ಲಭಿಸಿದೆ. ಬೆಂಗಳೂರಷ್ಟೆ ಅಲ್ಲದೆ ಮಧ್ಯಪ್ರದೇಶದ ಭೂಪಾಲ್‌ನ 11 ಶಾಲೆಗಳಿಗೂ ಅದೇ ದಿನ ಬಾಂಬ್‌ ಬೆದರಿಕೆ ಇಮೇಲ್‌ ರವಾನೆ ಆಗಿದ್ದವು. ಈ ಎಲ್ಲ ಇಮೇಲ್‌ಗಳ ಮೂಲ ಒಂದೇ ಎಂಬ ಅಂಶ ಪತ್ತೆಯಾಗಿತ್ತು.

ಇವಿಷ್ಟೂ ಇಮೇಲ್‌ಗಳನ್ನು ರವಾನೆ ಮಾಡಲು ಬಳಸಿದ್ದ ಸಾಫ್ಟ್‌ವೇರ್‌ ಅನ್ನು ತಮಿಳುನಾಡಿನ ಸೇಲಂ ನಿವಾಸಿಯಾಗಿರುವ ಬಾಲಕನೇ ಅಭಿವೃದ್ಧಿಪಡಿಸಿದ್ದ. ಈ ಹಿನ್ನೆಲೆಯಲ್ಲಿ ಬಾಲಕನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ವಿಚಾರಣೆ ವೇಲೆ ಈ ಕುರಿತು ಅನೇಕ ಅಂಶಗಳನ್ನು ಬಾಲಕ ಬಾಯಿಬಿಟ್ಟಿದ್ದ.

ಈ ಬಾಲಕ ಸಾಫ್ಟ್‌ವೇರ್‌ ಕಂಪನಿ ಆರಂಭಿಸುವ ಆಸೆ ಹೊಂದಿದ್ದ. ಏಕಕಾಲದಲ್ಲಿ ಅನೇಕ ಇ-ಮೇಲ್‌ ಐಡಿಗಳಿಗೆ ಸಂದೇಶ ಕಳುಹಿಸುವ ಬಾಟ್‌ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದ. ಈ ಸಾಫ್ಟ್‌ವೇರ್‌ನಿಂದಲೇ ಎಲ್ಲ ಶಾಲೆಗಳಿಗೆ ಇಮೇಲ್‌ ರವಾನೆ ಆಗಿದೆ. ಆದರೆ ಆ ಸಾಫ್ಟ್‌ವೇರ್‌ ತನ್ನ ಬಳಿ ಇಲ್ಲ. ಅದನ್ನು 200 ಬಿಟ್‌ಕಾಯಿನ್‌ಗಳಿಗೆ ವಿದೇಶಿಯರಿಗೆ ಮಾರಾಟ ಮಾಡಿದ್ದೇನೆ. ಅವರೇ ಈ ತಂತ್ರಾಂಶ ಬಳಸಿ ಇಮೇಲ್‌ ಕಳಿಸಿದ್ದಾರೆ ಎಂದಿದ್ದ.

ಇದೀಗ ಡಿ.ಕೆ. ಶಿವಕುಮಾರ್‌ ಒಡೆತನದ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಶಾಲೆಯ ಯೂನಿಟ್‌ ೩ಕ್ಕೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದೆ. ಸೋಮವಾರ ಬೆಳಗ್ಗೆ ಶಾಲೆಗೆ ಬಂದ ಸಿಬ್ಬಂದಿ ಇಮೇಲ್‌ ನೋಡಿದ್ದಾರೆ. ತಕ್ಷಣವೇ ಮಕ್ಕಳನ್ನು ಯೂನಿಟ್‌ 1 ಹಾಗೂ 2ಕ್ಕೆ ಸ್ಥಳಾಂತರ ಮಾಡಿದ್ದಾರೆ. ಸುಮಾರು ಒಂದೂವರೆ ಸಾವಿರ ಮಕ್ಕಳನ್ನು ಈ ರೀತಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಬಾಂಬ್‌ ನಿಷ್ಕ್ರಿಯ ದಳ ಈಗಾಗಲೆ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸುತ್ತಿದೆ.

ಇದನ್ನೂ ಓದಿ | ಶಾಲೆ ಬಾಂಬ್‌ ಬೆದರಿಕೆ: ಸಾಫ್ಟ್‌ವೇರ್‌ ಉದ್ಯಮಿಯಾಗಲು ಹೊರಟ ಬಾಲಕನ ಕೈಚಳಕ !

Exit mobile version