ನವ ದೆಹಲಿ: ೧೯೯೮ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ವೇಳೆ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಚಿತ್ರನಟ ಸಲ್ಮಾನ್ ಖಾನ್ ಬಗ್ಗೆ ತನಗಿರುವ ದ್ವೇಷದ ಬಗ್ಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಇನ್ನಷ್ಟು ಮಾಹಿತಿಗಳನ್ನು ಬಾಯಿ ಬಿಟ್ಟಿದ್ದಾನೆ.
ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯಿ ಸದ್ಯ ದಿಲ್ಲಿ ಪೊಲೀಸರ ವಶದಲ್ಲಿದ್ದಾನೆ. ಮೂಸೆವಾಲಾ ಹತ್ಯೆಯ ವಿಚಾರಣೆ ಹಂತದಲ್ಲಿ ಆತನ ಇತರ ಕುಕೃತ್ಯಗಳೂ ಬಯಲಾಗುತ್ತಿವೆ.
ಲಾರೆನ್ಸ್ ಬಿಷ್ಣೋಯಿ ೨೦೧೮ರಲ್ಲಿ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಎಂದು ಹೇಳಲಾಗಿದೆ. ಜತೆಗೆ ಇತ್ತೀಚಿನ ವರೆಗೂ ಸಲ್ಮಾನ್ ಖಾನ್ ಮತ್ತು ಅವರ ವಕೀಲರಿಗೆ ಬೆದರಿಕೆ ಪತ್ರಗಳು ಬರುತ್ತಲೇ ಇವೆ.
ರೈಫಲ್ ಖರೀದಿಸಿದ್ದ ಗ್ಯಾಂಗ್‌ಸ್ಟರ್
ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಬಿಷ್ಣೋಯಿ ಸಂಪತ್ ನೇಹ್ರಾ ಎಂಬ ತನ್ನ ಸಹಚರನನ್ನು ನೇಮಿಸಿದ್ದ. ಆತ ಮುಂಬಯಿಗೆ ಹೋಗಿ ಅಲ್ಲಿ ಸಲ್ಮಾನ್ ನಿವಾಸ ಸಮೀಪವೇ ಇದ್ದು ಚಲನವಲನಗಳನ್ನು ಗಮನಿಸುತ್ತಿದ್ದ. ಆದರೆ, ಆತನ ಬಳಿ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಬಹುದಾದ ಪಿಸ್ತೂಲು ಮಾತ್ರ. ಅದರಿಂದ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸುವುದು ಕಷ್ಟ ಸಾಧ್ಯವೆಂದು ಆತ ಹೇಳಿದ್ದ ಎನ್ನಲಾಗಿದೆ.
ಈ ಕಾರಣಕ್ಕೆ ಬಿಷ್ಣೋಯಿ ದಿನೇಶ್ ಡಾಗರ್ ಎಂಬ ವ್ಯಕ್ತಿಯ ಮೂಲಕ ಆರ್‌ಕೆ ಸ್ಪ್ರಿಂಗ್ ರೈಫಲ್‌ಗೆ ಆರ್ಡರ್ ಮಾಡಿದ್ದ. ನಾಲ್ಕು ಲಕ್ಷ ರೂಪಾಯಿ ಕೊಟ್ಟು ಅದನ್ನು ಖರೀದಿ ಮಾಡಿದ್ದ. ಈ ಮೊತ್ತವನ್ನು ಡಾಗರ್‌ನ ಸಹಚರ ಅನಿಲ್ ಪಾಂಡೇಗೆ ಮಾಡಲಾಗಿತ್ತು ಎಂದು ಬಿಷ್ಣೋಯಿ ಬಾಯಿ ಬಿಟ್ಟಿದ್ದಾನೆ.
ಸಲ್ಮಾನ್ ಖಾನ್ ಕೊಂದಿರುವ ಕೃಷ್ಣಮೃಗ ಬಿಷ್ಣೋಯಿ ಸಮುದಾಯದ ಪೂಜನೀಯ ಪ್ರಾಣಿಯಾಗಿದೆ. ʻʻಕೃಷ್ಣ ಮೃಗವನ್ನು ನಾವು ನಮ್ಮ ಧಾರ್ಮಿಕ ಗುರುಗಳಾದ ಭಗವಾನ್ ಜಂಬೇಶ್ವರ್ (ಜಂಬಾಜಿ) ಅವರ ಮರು ಜನ್ಮ ಎಂದು ಭಾವಿಸುತ್ತೇವೆ. ಹೀಗಾಗಿ ಕೋರ್ಟ್‌ಗಳು ನೀಡುವ ತೀರ್ಪು ಈ ವಿಷಯದಲ್ಲಿ ಅಂತಿಮವಲ್ಲ,ʼʼ ಎಂದು ಲಾರೆನ್ಸ್ ಹೇಳಿದ್ದ. ʻʻಒಂದೋ ಸಲ್ಮಾನ್ ಖಾನ್ ಇಲ್ಲವೇ ಅವರ ತಂದೆ ಜಂಬಾಜಿ ಅವರ ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಬಿಷ್ಣೋಯಿಗಳು ಅವರನ್ನು ಕೊಲ್ಲದೆ ಬಿಡುವುದಿಲ್ಲʼʼ ಎಂದಿದ್ದಾನಂತೆ ಲಾರೆನ್ಸ್.
ಏನಿದು ಕೃಷ್ಣ ಮೃಗ ಪ್ರಕರಣ?
೧೯೯೮ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಮಾ ಸಿನಿಮಾದ ಚಿತ್ರೀಕರಣದ ರಾಜಸ್ಥಾನದ ನಾನಾ ಭಾಗಗಳಲ್ಲಿ ನಡೆದಾಗ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಮತ್ತು ಟಬು ಅವರೆಲ್ಲ ಸೇರಿಕೊಂಡು ಕೃಷ್ಣ ಮೃಗ ಬೇಟೆಯಾಡಿದ ಆರೋಪ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಸಲ್ಮಾನ್ ಖಾನ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಖುಲಾಸೆಗೊಳಿಸಿತ್ತು. ೨೦೧೮ರಲ್ಲಿ ನಡೆದ ವಿಚಾರಣೆಯ ವೇಳೆ ಜೋಧ್‌ಪುರ ಕೋರ್ಟ್ ಸಲ್ಮಾನ್ ಖಾನ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಬಳಿಕ ಜಾಮೀನು ನೀಡಿತ್ತು.