Site icon Vistara News

ತಲೆ ಕೂದಲು ಚಿಕ್ಕದಾಗಿ ಕತ್ತರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ; ಸಲೂನ್​ನಿಂದ ಬರುತ್ತಿದ್ದಂತೇ ಅತ್ತು, ರಂಪಾಟ ಮಾಡಿದ್ದ!

Boy Committed Suicide In Maharashtra Over Short Haircut

#image_title

ಪುಣೆ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂಬ ಕಾರಣಕ್ಕೆ, ಅಪ್ಪ-ಅಮ್ಮ ಬೈದರು, ಮೊಬೈಲ್​ ನೋಡಬೇಡ ಎಂದರು ಎಂಬಿತ್ಯಾದಿ ಕಾರಣಕ್ಕೆ ಮಕ್ಕಳು/ಹದಿಹರೆಯದವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಅದೆಷ್ಟೋ ನೋಡಿದ್ದೇವೆ. ಇದೀಗ ಮಹಾರಾಷ್ಟ್ರದ ಭಯಂದರ್ ಎಂಬಲ್ಲಿ 13ವರ್ಷದ ಬಾಲಕನೊಬ್ಬ ಅತ್ಯಂತ ಕ್ಷುಲ್ಲಕ ಮತ್ತು ವಿಚಿತ್ರ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‘ತನ್ನ ತಲೆಕೂದಲನ್ನು ಅತ್ಯಂತ ಚಿಕ್ಕದಾಗಿ ಕತ್ತರಿಸಿಬಿಟ್ಟರು (Short Haircut)’ ಎಂಬ ಕಾರಣಕ್ಕೆ ಅಪಾರ್ಟ್​ಮೆಂಟ್​​ನ 16ನೇ ಮಹಡಿಯಲ್ಲಿರುವ ತಮ್ಮ ಮನೆಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಾಲಕನ ಹೆಸರು ಶತ್ರುಘ್ನ ಪಾಠಕ್​. ಇವನು ತನ್ನ ಸಹೋದರ ಸಂಬಂಧಿಯೊಟ್ಟಿಗೆ ಸಲೂನ್​ಗೆ ಹೋಗಿದ್ದ. ಅಲ್ಲಿ ಅವನನ್ನು ಕೇಳಲಾಯಿತು ಎಂಥ ಹೇರ್​ಸ್ಟೈಲ್​ ಬೇಕೆಂದು. ಈ ಬಾಲಕ ಹೇಳಿದ್ದ. ಆದರೆ ಮನೆಗೆ ಬಂದು ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡ ಬಳಿಕ ಶತ್ರುಘ್ನ ತೀವ್ರ ನೊಂದಿದ್ದ. ನಾನು ಹೇಳಿದಂತೆ ಕ್ಷೌರಿಕ ಕೂದಲು ಕಟ್​ ಮಾಡಿಲ್ಲ ಎಂದು ಹೇಳಿಕೊಂಡು ಅತ್ತಿದ್ದ. ಆಗ ಅವನ ಇಬ್ಬರು ಅಕ್ಕಂದಿರು, ಅಮ್ಮ ಎಲ್ಲ ಸೇರಿ ಸಮಾಧಾನ ಮಾಡಿದ್ದರು. ಬಳಿಕ ಸಮಾಧಾನಗೊಂಡಿದ್ದರೂ, ಅವನಿಗೆ ಬೇಸರ ಇದ್ದೇ ಇತ್ತು.

ರಾತ್ರಿ ತನ್ನ ಪಾಡಿಗೆ ಹೋಗಿ ರೂಮಿನಲ್ಲಿ ಮಲಗಿದ್ದ. ಮನೆಯಲ್ಲಿ ಎಲ್ಲರೂ ಮಲಗಿದ್ದರು. ರಾತ್ರಿ 11.30ರ ಹೊತ್ತಿಗೆ ಕೋಣೆಯಿಂದ ಎದ್ದು, ಬಾತ್​ರೂಮಿಗೆ ಹೋಗಿ ಅಲ್ಲಿನ ಕಿಟಕಿಯಿಂದ ಕೆಳಗೆ ಹಾರಿದ್ದಾನೆ. ಅದು ಮನೆಯವರಿಗೆ ಗೊತ್ತಾಗಿ ಕೂಡಲೇ ಕೆಳಗೆ ಓಡಿದ್ದಾರೆ. ಅಲ್ಲಿಗೆ ಹೋಗುವಷ್ಟರಲ್ಲಿ ಹುಡುಗನ ದೇಹ ರಕ್ತದ ಮಡುವಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ ಅಷ್ಟರಲ್ಲೇ ಅವನ ಜೀವ ಹೋಗಿತ್ತು. ಕೂದಲು ಚಿಕ್ಕದಾಗಿ ಕತ್ತರಿಸಿಬಿಟ್ಟರು ಎಂಬ ಕಾರಣಕ್ಕೆ ಅಷ್ಟೊಂದು ಮನನೊಂದುಕೊಂಡು, ಅವನು ಜೀವ ತೆಗೆದುಕೊಂಡಿದ್ದು ತಮಗೂ ಶಾಕ್​ ತಂದಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಇದನ್ನೂ ಓದಿ: ಹೊನ್ನಾವರದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ; ಚಿತ್ರದುರ್ಗದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

ಇದೇ ವರ್ಷ ಜನವರಿ ತಿಂಗಳಲ್ಲಿ ಗುಜರಾತ್​ನ ಅಹ್ಮದಾಬಾದ್​​ನ ನವ ನರೋಡಾ ಎಂಬಲ್ಲಿ 12 ವರ್ಷದ ಹುಡುಗನೊಬ್ಬ ತನ್ನ ಮನೆಯ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪರೀಕ್ಷೆ ಬಗ್ಗೆ ಅತೀವವಾಗಿ ಹೆದರಿ ಅವನು ಜೀವ ಕಳೆದುಕೊಂಡಿದ್ದ. ಜನವರಿ 30ರಂದು ಆತನ ಅಮ್ಮ ಸ್ನಾನ ಮಾಡುತ್ತಿದ್ದಳು, ಅಪ್ಪ ಅದಾಗಲೇ ಕೆಲಸಕ್ಕೆಂದು ಹೋಗಿಯಾಗಿತ್ತು. ಮನೆಯಲ್ಲೇ ಇದ್ದ ಹುಡುಗ ನೇಣಿಗೆ ಕೊರಳೊಡ್ಡಿದ್ದ. ಇತ್ತೀಚೆಗೆ ಅಂದರೆ ಮಾರ್ಚ್​ 25ರಂದು ಹರ್ಯಾಣದ ಗುರುಗ್ರಾಮದಲ್ಲಿ 12ವರ್ಷದ ಹುಡುಗನೊಬ್ಬ ಕೂಡ ಪರೀಕ್ಷಾ ಭಯದಿಂದಲೇ ಸೂಸೈಡ್ ಮಾಡಿಕೊಂಡಿದ್ದ. ಅಪಾರ್ಟ್​​ಮೆಂಟ್​​ವೊಂದರಲ್ಲಿ 13ನೇ ಮಹಡಿಯ ಫ್ಲ್ಯಾಟ್​​ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಈತ, ಅಲ್ಲಿಂದಲೇ ಕೆಳಗೆ ಹಾರಿದ್ದ.

Exit mobile version