Site icon Vistara News

60 ಬಾರಿ ಇರಿದು ಕೊಂದ, ಬಳಿಕ ಶವದ ಎದುರು ಕುಣಿದ 16ರ ಬಾಲಕ! ಭೀಕರ ವಿಡಿಯೊ

Delhi Murder Case

Boy Stabs A Man 60 Times, Dances Over Body In Delhi; Brutal Video Viral

ನವದೆಹಲಿ: ಮೀಸೆ ಮೂಡುವ, ಇನ್ನೇನು ಹರೆಯ ಆರಂಭವಾಗುವ 16ನೇ ವಯಸ್ಸಿನಲ್ಲಿ ಬಾಲಕನೊಬ್ಬನ (Teenage Boy) ಚಟುವಟಿಕೆಗಳು ಏನಿರಲು ಸಾಧ್ಯ? ಸ್ಮಾರ್ಟ್‌ಫೋನ್‌ನಲ್ಲಿ ಬ್ಯುಸಿ ಆಗಿರುವ, ಬೈಕ್‌ ಕಲಿಯುವುದು, ಕ್ರಿಕೆಟ್‌ ಆಡುವುದು, ಕದ್ದು ಥಿಯೇಟರ್‌ಗೆ ಹೋಗುವುದು ಸೇರಿ ಹಲವು ‘ತುಂಟ’ ಚಟುವಟಿಕೆಗಳು ಆರಂಭವಾಗುತ್ತವೆ. ಆದರೆ, ದೆಹಲಿಯಲ್ಲಿ 16 ವರ್ಷದ ಬಾಲಕನೊಬ್ಬ ವ್ಯಕ್ತಿಯೊಬ್ಬನಿಗೆ 60ಕ್ಕೂ ಬಾರಿ ಚಾಕು ಇರಿದು (Boy Stabs Man), ಆತನ ಶವದ ಎದುರು ಡಾನ್ಸ್‌ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಭೀಕರ ವಿಡಿಯೊ ವೈರಲ್‌ (Viral Video) ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ಕಳೆದ ಮಂಗಳವಾರ (ನವೆಂಬರ್‌ 21) ರಾತ್ರಿ ದೆಹಲಿಯ ವೆಲ್‌ಕಮ್‌ ಎಂಬ ಪ್ರದೇಶದಲ್ಲಿ ಬಾಲಕನು ವ್ಯಕ್ತಿಗೆ ಪದೇಪದೆ ಚಾಕು ಇರಿದ, ಆತನನ್ನು ಕೊಂದ ಬಳಿಕ ಅಲ್ಲಿಯೇ ನೃತ್ಯ ಮಾಡಿದ ಭೀಕರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. “ಮಂಗಳವಾರ ರಾತ್ರಿ 11.15ರ ಸುಮಾರಿಗೆ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಬಂದಿದೆ. ವೆಲ್‌ಕಮ್‌ ಪ್ರದೇಶದ ಜನತಾ ಮಜ್ದೂರ್‌ ಕಾಲೋನಿಯಲ್ಲಿ ಬಾಲಕನೊಬ್ಬ ವ್ಯಕ್ತಿಗೆ ಚಾಕು ಇರಿದು ಕೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ” ಎಂದು ಡಿಸಿಪಿ ಜಾಯ್‌ ಟಿರ್ಕಿ ತಿಳಿಸಿದ್ದಾರೆ.

ಇಲ್ಲಿದೆ ಭೀಕರ ವಿಡಿಯೊ

ಬಿರಿಯಾನಿ ತಿನ್ನುವ ಆಸೆಗೆ ಕೊಲೆ?

ಬಾಲಕನಿಗೆ ಬಿರಿಯಾನಿ ತಿನ್ನುವ ಆಸೆಯಾಗಿದ್ದು, ಇದೇ ಆಸೆಯೇ ಆತನನ್ನು ಕೊಲೆ ಮಾಡಿಸಿದೆ ಎಂದು ತಿಳಿದುಬಂದಿದೆ. ಬಾಲಕನಿಗೆ ಬಿರಿಯಾನಿ ತಿನ್ನಬೇಕು ಎಂದು ಅನಿಸಿದೆ. ಆಗ ಆತನು ವ್ಯಕ್ತಿಯಿಂದ ಸುಮಾರು 350 ರೂ. ಕಳ್ಳತನ ಮಾಡಿದ್ದಾನೆ. ಕಳ್ಳತನ ಗೊತ್ತಾದ ವ್ಯಕ್ತಿಯು ಬಾಲಕನ ಜತೆ ಜಗಳಕ್ಕೆ ಇಳಿದಿದ್ದಾನೆ. ಇದೇ ವೇಳೆ ಕುಪಿತಗೊಂಡ ಬಾಲಕನು ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ವ್ಯಕ್ತಿ ಮೂರ್ಛೆ ಹೋದ ಬಳಿಕ ಆತನಿಗೆ ಸುಮಾರು 60 ಬಾರಿ ಚಾಕು ಇರಿದಿದ್ದಾನೆ. ವ್ಯಕ್ತಿ ಮೃತಪಟ್ಟಿದ್ದಾನೆ ಎಂಬುದನ್ನು ದೃಢಪಡಿಸಿಕೊಂಡ ಆತ ಅಲ್ಲಿಯೇ ನೃತ್ಯ ಮಾಡಿದ್ದಾನೆ.

ಇದನ್ನೂ ಓದಿ: Murder Case: ಪೋಟೊ ಶೂಟ್ ವಿಚಾರಕ್ಕೆ ಚಾಕು ಇರಿದು ಯುವಕನ ಕೊಲೆ

ಪಿಸಿಆರ್‌ಗೆ ಕರೆ ಬಂದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ವ್ಯಕ್ತಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಮರಣೋತ್ತರ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿರುವ ಪೊಲೀಸರು, ಬಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಆಟವಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಬಾಲಕನು ಕೊಲೆ ಮಾಡಿರುವುದು ಜನರನ್ನು ಆತಂಕಕ್ಕೆ ದೂಡಿದೆ.

Exit mobile version