ಹೈದರಾಬಾದ್: ಅತ್ಯಾಚಾರಕ್ಕೆ ಒಳಗಾದ ದುರ್ದೈವಿಗಳ ಹೆಸರನ್ನೇ ಬಹಿರಂಗಪಡಿಸಬಾರದು ಎಂಬ ನಿಯಮವಿದೆ. ಆದರೆ, ಹೈದರಾಬಾದ್‌ನ ಬಿಜೆಪಿ ಶಾಸಕನೊಬ್ಬ ಆಕೆಯ ಹೆಸರು ಮಾತ್ರವಲ್ಲ, ಫೋಟೊ ಮತ್ತು ವಿಡಿಯೊವನ್ನೇ ಬಿಡುಗಡೆ ಮಾಡುವ ಮೂಲಕ ತನ್ನ ಸಂವೇದನಾರಹಿತ ನಡವಳಿಕೆಯನ್ನು ತೆರೆದಿಟ್ಟಿದ್ದಾನೆ. ಈತನ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.
ಮೇ 28ರಂದು ಹೈದರಾಬಾದ್‌ನಲ್ಲೊಂದು ಭೀಕರ ಅತ್ಯಾಚಾರ ನಡೆದಿತ್ತು. ಹುಡುಗಿಯೊಬ್ಬಳು ಗೆಳೆಯನೊಂದಿಗೆ ಪಬ್‌ಗೆ ಹೋಗಿದ್ದಳು. ಗೆಳೆಯ ಮಧ್ಯಭಾಗದಲ್ಲೇ ಏನೋ ಕೆಲಸವಿದೆ ಎಂದು ಮನೆ ಕಡೆ ಹೊರಟ. ಪಬ್‌ನಲ್ಲಿ ಒಬ್ಬಳೇ ಇದ್ದ ಹುಡುಗಿಗೆ ಹುಡುಗರ ತಂಡವೊಂದರ ಪರಿಚಯವಾಯಿತು. ಮನೆಗೆ ಹೊರಡುವ ಸಂದರ್ಭದಲ್ಲಿ ಆಕೆ ತನ್ನನ್ನು ಮನೆಗೆ ಬಿಡುವಂತೆ ಕೇಳಿಕೊಂಡಿದ್ದಾಳೆ. ಅದಕ್ಕೆ ಒಪ್ಪಿದ ಹುಡುಗರು ಆಕೆಯನ್ನು ಐಷಾರಾಮಿ ಕಾರಿನಲ್ಲಿ ಕರೆದುಕೊಂಡು ಹೊರಟಿದ್ದಾರೆ. ಮಾರ್ಗ ಮಧ್ಯೆ ಆ ಹುಡುಗರು ಕಾರನ್ನು ಒಂದು ಕಡೆ ನಿಲ್ಲಿಸಿ ಒಬ್ಬರಾದ ಮೇಲೆ ಒಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದರು. ಹೀಗೆ ಅತ್ಯಾಚಾರ ಮಾಡಿದ ಹುಡುಗರೆಲ್ಲರೂ ಅಪ್ರಾಪ್ತರಾಗಿದ್ದರು. ಮತ್ತು ಪ್ರಭಾವಿ ರಾಜಕಾರಣಿಗಳ ಮಕ್ಕಳಾಗಿದ್ದರು. ಇವರೆಲ್ಲರನ್ನೂ ಈಗ ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್, ಬಿಜೆಪಿ, ಎಂಐಎಂ ಪಕ್ಷಗಳ ನಡುವೆ ಭಾರಿ ವಾಗ್ಯುದ್ಧವೇ ನಡೆದಿತ್ತು. ಅದರ ನಡುವೆ, ಬಿಜೆಪಿ ಶಾಸಕ ಎಂ. ರಘುನಂದನ್ ರಾವ್ ಅವರು ಎಡವಟ್ಟು ಮಾಡಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಹುಡುಗಿಯ ಚಿತ್ರ ಮತ್ತು ವಿಡಿಯೊವನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಜತೆಗೆ ಪತ್ರಿಕಾಗೋಷ್ಠಿಯಲ್ಲೂ ಬಹಿರಂಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 228A ಪ್ರಕಾರ, ಅತ್ಯಾಚಾರಕ್ಕೊಳಗಾದವರ ಗುರುತು ಅಥವಾ ಅದನ್ನು ಬಹಿರಂಗಪಡಿಸುವ ಯಾವುದೇ ಇತರ ವಿವರಗಳನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ.
ವಕೀಲ ಕರಂ ಕೋಮಿರೆಡ್ಡಿ ಅವರ ದೂರಿನ ಮೇರೆಗೆ ಶಾಸಕ ಎಂ ರಘುನಂದನ್ ರಾವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋಮಿ ರೆಡ್ಡಿ ಅವರ ದೂರನ್ನು ಉಲ್ಲೇಖಿಸಿ ಸ್ಥಳೀಯ ಪೊಲೀಸ್ ಅಧಿಕಾರಿ ಪಿ ನರೇಶ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ| ವೈವಾಹಿಕ ಅತ್ಯಾಚಾರ: ಹೈಕೋರ್ಟ್ ಪೀಠದಲ್ಲಿ ವಿಭಜಿತ ತೀರ್ಪು, ಮುಂದಿನ ಹೆಜ್ಜೆ ಸುಪ್ರೀಂ ಕಡೆ
ರಾವ್ ಅವರು ಬಾಲಕಿಯ ಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ವಿರುದ್ಧವಾಗಿದೆ ಮತ್ತು ಯಾವುದೇ ರೀತಿಯ ಮಾಧ್ಯಮಗಳಲ್ಲಿ ಮಗುವಿನ ಗುರುತನ್ನು ಬಹಿರಂಗಪಡಿಸುವುದನ್ನು ನಿಷೇಧಿಸುವ ಬಾಲನ್ಯಾಯ ಕಾಯಿದೆ, 2015 ರ ಸೆಕ್ಷನ್ 74ಗೆ ವಿರುದ್ಧವಾಗಿದೆ.
ಕೋಮಿರೆಡ್ಡಿ ಅವರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ತೆಲಂಗಾಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ನೀಡಲಾಗಿದೆ.
ಇದನ್ನೂ ಓದಿ| ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ಪ್ರಕಟ