Site icon Vistara News

Halashri Swameeji: ಹಾಲಶ್ರೀ ಬೇಟೆಗಾಗಿ ಅರ್ಚಕರ ವೇಷದಲ್ಲಿ ದೇವಸ್ಥಾನ ಸುತ್ತಿದ ಸಿಸಿಬಿ ಪೊಲೀಸ್! ಪುರಿಯಲ್ಲಿ ಜಸ್ಟ್‌ ಮಿಸ್!

Halashri swameeji chased by CCB in priests dress

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಜತೆ ಸೇರಿ ‌ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು (Halashri Swameeji) ಹುಡುಕಲು ಸಿಸಿಬಿ ಪೊಲೀಸರು ಪಟ್ಟ ಪಾಡು, ಹಾಕಿದ ವೇಷ ಕಡಿಮೆಯಲ್ಲ! ಹೌದು ಸಿಸಿಬಿ ಪೊಲೀಸರು (CCB Police) ಹಾಲಶ್ರೀ ಪತ್ತೆಗಾಗಿ ವೇಷ ಕೂಡಾ ಹಾಕಿದ್ದಾರೆ!

ಸೆ. 11ರಂದು ರಾತ್ರಿ ಹಾಲಶ್ರೀ ಮಠದಿಂದ ಕಣ್ಮರೆಯಾಗಿದ್ದ ಸ್ವಾಮೀಜಿ ಸಿಸಿಬಿ ಪೊಲೀಸರ ಭಾರಿ ಕಾರ್ಯಾಚರಣೆಗಳ ಬಳಿಕ ಸೆ. 18ರಂದು ರಾತ್ರಿ 9.25ರ ಹೊತ್ತಿಗೆ ಒಡಿಶಾದ ಕಟಕ್‌ನಲ್ಲಿ ರೈಲಿನಲ್ಲಿ ಸಿಕ್ಕಿಬಿದ್ದಿದ್ದರು. ಅಂದರೆ ಅವರು ಕರ್ನಾಟಕ ಬಿಟ್ಟು ತೆಲಂಗಾಣ, ಆಂಧ್ರ ಪ್ರದೇಶ ದಾಟಿ ಒಡಿಶಾ ತಲುಪಿದ್ದರು. ಹೀಗೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಅವರ ಪತ್ತೆಯಾಗಿ ಸಿಸಿಬಿ ಪೊಲೀಸರು ಮಾಡದ ಪ್ರಯತ್ನಗಳೇ ಇಲ್ಲ!

ಯಾವ ಹಾಲಶ್ರೀ ಸ್ವಾಮಿ ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಾವಿ ಬಟ್ಟೆ ಕಿತ್ತು ಹಾಕಿ ಟೀ ಶರ್ಟ್‌, ಬರ್ಮುಡಾ ಧರಿಸಿದ್ದರೋ ಆ ಸ್ವಾಮೀಜಿಯನ್ನು ಹಿಡಿಯುವುದಕ್ಕಾಗಿ ಪೊಲೀಸರೇ ಕಾವಿ ತೊಟ್ಟಿದ್ದರು, ಅರ್ಚಕರ ಬಟ್ಟೆ (CCB Police in priests dress) ಹಾಕಿದ್ದರು!

ಹೌದು, ಹಾಲಶ್ರೀ ಸ್ವಾಮೀಜಿ ನಾಪತ್ತೆಯಾಗಿ ಹಲವು ದಿನಗಳ ಕಾಲ ಮೊಬೈಲ್‌ ಹೆಚ್ಚಾಗಿ ಬಳಕೆ ಮಾಡುತ್ತಿರಲಿಲ್ಲ ಅಥವಾ ಬಳಸಿದ ಮೊಬೈಲ್‌ ಪೊಲೀಸರ ಟ್ರ್ಯಾಕ್‌ಗೆ ಸಿಕ್ಕಿರಲಿಲ್ಲ. ಬಳಿಕ ಮೊಬೈಲ್‌ ಟ್ರ್ಯಾಕ್‌ಗೆ ಸಿಕ್ಕದರೂ ಗಂಟೆಗೊಂದು ತಾಣ ಬದಲಾಯಿಸುವುದು, ಮೊಬೈಲ್‌ ಬದಲಾಯಿಸುವುದರಿಂದ ಅವರನ್ನು ಹಿಡಿಯುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ತಂಡ ಟೆಕ್ನಿಕಲ್‌ ಎವಿಡೆನ್ಸ್‌, ಟ್ರ್ಯಾಕಿಂಗ್‌ ಬಿಟ್ಟು ಸಾಂಪ್ರದಾಯಿಕ ತಂತ್ರ ಬಳಕೆಗೆ ಮುಂದಾಯಿತು. ಅದುವೇ ಅರ್ಚಕರ ವೇಷ. ಹಾಲಶ್ರೀ ಸ್ವಾಮೀಜಿ ಹೈದರಾಬಾದ್‌ ತಲುಪಿದ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು. ಅಲ್ಲಿಂದ ಅವರು ಕಾಶಿಗೆ ಹೋಗಿ ತಲೆಮರೆಸಿಕೊಳ್ಳುವ ಪ್ಲ್ಯಾನ್‌ ಹೊಂದಿರುವುದು ಅರಿವಿಗೆ ಬಂದಿತ್ತು. ಇದರ ಚೂರು ಪಾರು ಮಾಹಿತಿಯನ್ನು ಶ್ರೀಗಳ ಚಾಲಕ ನೀಡಿದ್ದ!

ಆದರೆ, ಅವರನ್ನು ಹುಡುಕುವುದು ಹೇಗೆ, ತಡೆಯುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆ. ಇದಕ್ಕೆ ಪೊಲೀಸರು ದೇವಸ್ಥಾನಗಳಲ್ಲಿ ಹುಡುಕುವ ಪ್ಲ್ಯಾನ್‌ ಮಾಡಿದರು. ಹಾಲಶ್ರೀ ಸ್ವಾಮೀಜಿ ಸಂಪರ್ಕ ಇರುವ, ಇತ್ತೀಚೆಗೆ ಭೇಟಿ ನೀಡಿರುವ ದೇವಸ್ಥಾನ, ಮಠ, ಆಶ್ರಮಗಳನ್ನು ಪಟ್ಟಿ ಮಾಡಿದರು. ಹೈದರಾಬಾದ್‌ ಸುತ್ತಮುತ್ತಲಿನ ಸ್ಥಳಗಳನ್ನು ಟಾರ್ಗೆಟ್‌ ಮಾಡಿ ಹುಡುಕುವುದು ಅವ ಪ್ಲ್ಯಾನ್‌ ಆಗಿತ್ತು.

ಅರ್ಚಕರ ವೇಷ ಹಾಕಿದ ನಾಲ್ವರು ಸಿಸಿಬಿ ಸಿಬ್ಬಂದಿ ಯಾರು?

ಈ ಹಿನ್ನೆಲೆಯಲ್ಲಿ ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಎಂಬ ನಾಲ್ವರು ಸಿಬ್ಬಂದಿ ಅರ್ಚಕರ ವೇಷ ಹಾಕಿದರು. ಅದರಲ್ಲೂ ಶೃಂಗೇರಿ ದೇವಸ್ಥಾನದ ಅರ್ಚಕರ ಮಾದರಿಯಲ್ಲಿ ಮಡಿಬಟ್ಟೆ ಧರಿಸಿ ಕಾರ್ಯಾಚರಣೆಗೆ ಇಳಿದರು.

ಸ್ವಾಮಿಜೀ ಬೆನ್ನತ್ತಿದ್ದ ನಾಲ್ವರು ಅರ್ಚಕರ ವೇಷದಲ್ಲಿ ಪ್ರತಿಯೊಂದು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದರು. ನಾವು ಶೃಂಗೇರಿಯಿಂದ ಬಂದಿದ್ದೀವಿ ಅಂತಾ ವಿಶೇಷ ಪೂಜೆ ಸಲ್ಲಿಸೋ ನಾಟಕವಾಡಿದರು. ಒಂದೊಂದೇ ಮಠ, ದೇವಸ್ಥಾನ ಮುಗಿಸಿ ಒರಿಸ್ಸಾದ ಪೂರಿ ಜಗನ್ನಾಥ ದೇವಸ್ಥಾನಕ್ಕೂ ಹೋಗಿದ್ದರು. ಹಾಲಶ್ರೀ ಸ್ವಾಮೀಜಿ ಅಲ್ಲಿಗೆ ಹೋದ ಮಾಹಿತಿ ಅವರಿಗೆ ಸಿಕ್ಕಿತ್ತು.

ಪುರಿ ಜಗನ್ನಾಥ ದೇವಸ್ಥಾನದಲ್ಲಿ ಜಸ್ಟ್‌ ಮಿಸ್‌ ಆಗಿದ್ರಾ ಸ್ವಾಮೀಜಿ!

ಇಡೀ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಮಡಿತೊಟ್ಟ ಬಟ್ಟೆಯಲ್ಲಿ ಹಾಲಶ್ರೀಗಾಗಿ ಹುಡುಗಾಟ ನಡೆಸಿದರು. ಅಲ್ಲಿ ಕೂಡಾ ʻʻನಾವು ಶೃಂಗೇರಿಯಿಂದ ಬಂದಿದ್ದೀವಿ. ಗಣೇಶ ಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಬೇಕುʼʼ ಅಂದಿದ್ದ ಪೊಲೀಸರು.. ಈ ಮಾತನ್ನು ಕದ್ದು ಕೇಳಿಸಿಕೊಂಡಿದ್ದರೋ ಗೊತ್ತಿಲ್ಲ, ಅಲ್ಲೇ ಇದ್ದರೆನ್ನಲಾದ ಹಾಲಶ್ರೀ ತಕ್ಷಣ ದೇವಸ್ಥಾನ ತೊರೆದಿದ್ದರು ಎನ್ನಲಾಗಿದೆ.

ಭುವನೇಶ್ವರದಿಂದ ಬೋಧಗಯಾಕ್ಕೆ ಟಿಕೆಟ್‌ ಮಾಡಿಸಿದ್ದರು!

ಈ ನಡುವೆ, ಇಲ್ಲೇ ಉಳಿದರೆ ಅಪಾಯವಿದೆ ಎಂದು ತಿಳಿದ ಸ್ವಾಮೀಜಿ, ಪೂರಿಯಿಂದ ಹೊರಟು ಭುವನೇಶ್ವರದಿಂದ ಬಿಹಾರದ ಬೋಧಗಯಾಕ್ಕೆ ರೈಲ್ವೆ ಟಿಕೆಟ್‌ ಬುಕ್‌ ಮಾಡಿದ್ದರು. ಈ ರೈಲು ಟಿಕೆಟ್‌ನ ಪಿಎನ್‌ಆರ್‌ ನಂಬರ್‌ ಪೊಲೀಸರಿಗೆ ಸಿಕ್ಕಿತು. ಕೂಡಲೇ ಅವರು ಅಲರ್ಟ್‌ ಆದರು.

ಆದರೆ, ಸ್ವಾಮೀಜಿ ಇನ್ನಷ್ಟು ಚಾಲಾಕಿ. ಭುವನೇಶ್ವರ ರೈಲ್ವೆ ನಿಲ್ದಾಣಕ್ಕೆ ಪೊಲೀಸರು ಬರಬಹುದು ಎಂದು ಶಂಕಿಸಿದ ಅವರು ಅಲ್ಲಿಂದ 25 ಕಿಲೋಮೀಟರ್ ಇರುವ ಕಟಕ್ ರೈಲ್ವೆ ನಿಲ್ದಾಣಕ್ಕೆ ಬಸ್‌ನಲ್ಲಿ ಪ್ರಯಾಣಿಸಿದರು.

ಆದರೆ, ಸಿಸಿಬಿ ಪೊಲೀಸರು ಇನ್ನಷ್ಟು ಚಾಲಾಕಿಗಳು. ಅವರು ಭುವನೇಶ್ವರ, ಅದರ ಮುಂದಿನ ಕಟಕ್‌ ಮಾತ್ರವಲ್ಲ ಬೋಧಗಯಾದಲ್ಲೂ ಅವರಿಗೆ ಖೆಡ್ಡಾ ತೋಡಿದ್ದರು. ಅಲ್ಲೆಲ್ಲ ಅವರನ್ನು ಹಿಡಿಯಲು ಒಡಿಶಾ ಪೊಲೀಸರ ಸಹಾಯ ಕೇಳಿದ್ದರು. ಭುವನೇಶ್ವರದಲ್ಲಿ ರೈಲು ಹತ್ತದ ಸ್ವಾಮೀಜಿ ಕಟಕ್‌ನಲ್ಲಿ ರೈಲು ಹತ್ತಿದಾಗ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದರು!

Exit mobile version