ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ (Chaitra Fraud Case) ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri swameeji) ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ವಾಮೀಜಿಗೆ ರಾಜ್ಯ ಹೈಕೋರ್ಟ್ ನವೆಂಬರ್ 8ರಂದು ಜಾಮೀನು ನೀಡಿತ್ತು. ಇದಾದ ಬಳಿಕ ಶೂರಿಟಿ, ಇಬ್ಬರು ವ್ಯಕ್ತಿಗಳ ಬಾಂಡ್ ಸೇರಿದಂತೆ ಹಲವು ಷರತ್ತುಗಳನ್ನು ಪೂರೈಸಿದ ಬಳಿಕ ಶನಿವಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಹಾಲಶ್ರೀ ಸ್ವಾಮೀಜಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್ ಮುತಾಲಿಕ್ ಅವರು ಕೇಸರಿ ಶಾಲು ಹಾಕಿ ಸ್ವಾಗತ ಮಾಡಿದರು.
ಈ ವೇಳೆ ಮಾತನಾಡಿದ ಅಭಿನವ ಹಾಲಶ್ರೀ ಅವರು, ʻʻಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡಬೇಕು. ಪ್ರಕರಣದ ತನಿಖೆ ವೇಳೆ ಅದನ್ನು ಪರಿಗಣಿಸಬೇಕು. ಮುಂದೊಂದು ದಿನ ಈ ಪ್ರಕರಣದ ಬಗ್ಗೆ ಮಾತನಾಡುತ್ತೇನೆʼʼ ಎಂದು ಹೇಳಿದರು.
ʻʻನಮ್ಮನ್ನ ನಂಬಿ ಅರಾಧಿಸುವ ಸಮಾಜಕ್ಕೆ, ನಮ್ಮ ಮೇಲೆ ನಂಬಿಕೆಯಿಟ್ಟಿರುವ ಭಕ್ತ ಸಮೂಹದ ಆಶಯಕ್ಕೆ ಯಾವುದೇ ಧಕ್ಕೆ ಬರದಂತೆ ಬದುಕು ಕಟ್ಟಿಕೊಂಡು ಬಂದಿದ್ದೇನೆ. ಮುಂದೆಯೂ ಅದೇ ರೀತಿ ಬದುಕು ಸಾಗಿಸುತ್ತೇನೆʼʼ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು ಹಾಲಶ್ರೀ.
ಅವರು ಬೆಂಗಳೂರಿನಿಂದ ಹಿರೇಹಡಗಲಿಗೆ ನೇರವಾಗಿ ಹೋಗುತ್ತಾರಾ ಅಥವಾ ಕೆಲವು ದಿನ ಭಕ್ತರ ಮನೆಯಲ್ಲಿದ್ದು ಬಳಿಕ ಮಠಕ್ಕೆ ಹೋಗುತ್ತಾರೆಯೇ ಎನ್ನುವುದರ ಬಗ್ಗೆ ಖಾತ್ರಿಯಾಗಿಲ್ಲ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಮತ್ತು ಗ್ಯಾಂಗ್ ಉದ್ಯಮಿ ಗೋವಿಂದ ಪೂಜಾರಿ ಅವರನ್ನು ವಂಚಿಸಿದ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ ಮೂರನೇ ಆರೋಪಿಯಾಗಿದ್ದಾರೆ. ಚೈತ್ರಾ ಮತ್ತು ಇತರ ಆರು ಮಂದಿ ಆರೋಪಿಗಳು ನಾನಾ ಕಾರಣ ಹೇಳಿ ಗೋವಿಂದ ಪೂಜಾರಿಯಿಂದ 3.5 ಕೋಟಿ ರೂ. ಸುಲಿಗೆ ಮಾಡಿದ್ದರೆ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ 1.5 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಗೋವಿಂದ ಪೂಜಾರಿ ಹೇಳಿದ್ದರು.
ತಲೆಮರೆಸಿಕೊಂಡು ಕಟಕ್‌ನಲ್ಲಿ ಸಿಕ್ಕಿಬಿದ್ದ ಹಾಲಶ್ರೀ
ಚೈತ್ರಾ ಕುಂದಾಪುರಗಳನ್ನು ಸೆಪ್ಟೆಂಬರ್ 12ರಂದು ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಸೆ. 13ರಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ (CCB Custody) ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಂಡ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಚೈತ್ರಾ ಕುಂದಾಪುರ ಮತ್ತು ಟೀಮನ್ನು ಸಿಸಿಬಿ ಪೊಲೀಸರು ಬೆನ್ನಟ್ಟುತ್ತಿರುವ ಮಾಹಿತಿ ಸಿಗುತ್ತಿದ್ದಂತೆಯೇ ಅಭಿನವ ಹಾಲಶ್ರೀ ಸ್ವಾಮೀಜಿ ಮಠದಿಂದ ಪರಾರಿಯಾಗಿ ಮೈಸೂರಿಗೆ ಬಂದಿದ್ದರು. ಅಲ್ಲಿಂದ ಮೊಬೈಲ್ ಮತ್ತು ನಾಲ್ಕು ಸಿಮ್ ಖರೀದಿ ಮಾಡಿ ಬಸ್ ಮೂಲಕ ಹೈದರಾಬಾದ್‌ಗೆ ಅಲ್ಲಿಂದ ರೈಲು ಮೂಲಕ ಒಡಿಶಾದ ಕಟಕ್‌ಗೆ ಹೋಗಿದ್ದರು. ಮುಂದೆ ಕಾಶಿಗೆ ಹೋಗಿ ತಲೆಮರೆಸಿಕೊಳ್ಳುವ ಪ್ರಯತ್ನದಲ್ಲಿದ್ದ ಅವರನ್ನು ಕಟಕ್ ರೈಲು ನಿಲ್ದಾಣದಲ್ಲೇ ಅತ್ಯಂತ ಚಾಣಾಕ್ಷತನದಿಂದ ಬಂಧಿಸಲಾಗಿತ್ತು.
ಇದನ್ನೂ ಓದಿ: Chaitra fraud Case : ಚೈತ್ರಾ ವಂಚನೆ ಕೇಸಿನ 3ನೇ ಆರೋಪಿ ಅಭಿನವ ಹಾಲಶ್ರೀಗೆ ಜಾಮೀನು
ವಂಚನೆ ಪ್ರಕರಣದಲ್ಲಿ ಹಾಲಶ್ರೀ ಪಾತ್ರವೇನು?
ಹಾಲಶ್ರೀ ಸ್ವಾಮೀಜಿ ಅವರು ಪ್ರಖರ ಹಿಂದುತ್ವವಾದಿಯಾಗಿದ್ದು ಬಿಜೆಪಿ ನಾಯಕರ ಜತೆ ಸಂಪರ್ಕ ಹೊಂದಿದ್ದರು. ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಮೊದಲಾದವರು ಆ ಕಡೆ ಹೋದಾಗ ಅವರನ್ನು ಭೇಟಿ ಮಾಡುತ್ತಿದ್ದರು. ತನಗೆ ಅಮಿತ್ ಶಾ ಜತೆಗೇ ಸಂಪರ್ಕವಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಡೀಲ್ ಬಂದಾಗ ಚೈತ್ರಾ ಹಾಲಶ್ರೀಗಳನ್ನು ಸಂಪರ್ಕಿಸಿದ್ದಳು. ಹಾಲಶ್ರೀ ಸ್ವಾಮೀಜಿ ಈ ಡೀಲ್‌ಗೆ 1.5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಮತ್ತು ಅದನ್ನು ಗೋವಿಂದ ಪೂಜಾರಿ ಬೆಂಗಳೂರಿನ ಮಠದಲ್ಲಿ ನೀಡಿದ್ದರು. ಹಾಲಶ್ರೀಯನ್ನು ಹೊರತುಪಡಿಸಿದ ಚೈತ್ರಾ ಗ್ಯಾಂಗ್ ಗೋವಿಂದ ಪೂಜಾರಿಯಿಂದ 3.5 ಕೋಟಿ ರೂ. ವಸೂಲಿ ಮಾಡಿತ್ತು.
ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ಸೀಜ್ ಆಗಿದ್ದು 3.67 ಕೋಟಿ, ಹಾಲಶ್ರೀಯ ಐಷಾರಾಮಿ ಕಾರು ನೋಡಿದ್ರಾ?
ಆದರೆ, ಹಾಲಶ್ರೀ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದರು. ಕೊನೆಗೆ ಇದೊಂದು ವಂಚನೆಯ ಜಾಲ ಎಂದು ತಿಳಿದ ಗೋವಿಂದ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದರು. ಗೋವಿಂದ ಪೂಜಾರಿಯಿಂದ ಪಡೆದ 1.5 ಕೋಟಿ ರೂ. ಮೊತ್ತದಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆ, ಜಾಗ ಮತ್ತು ಕಾರು ಖರೀದಿ ಮಾಡಿ ಐಷಾರಾಮಿ ಬದುಕಿಗೆ ಶಿಫ್ಟ್ ಆಗಿದ್ದರು..