Site icon Vistara News

Chaitra Kundapura : ಬಿಜೆಪಿ ಟಿಕೆಟ್‌ ವಂಚನೆ ಜಾಲದ ಹಿಂದೆ ದೊಡ್ಡ ದೊಡ್ಡವರಿದ್ದಾರಾ?; ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ

Halasri swameeji and Chaitra

ಬೆಂಗಳೂರು: ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಅವರು ಪ್ರಧಾನ ಆರೋಪಿಯಾಗಿರುವ ಬಿಜೆಪಿ ವಿಧಾನಸಭಾ ಟಿಕೆಟ್‌ ವಂಚನಾ ಜಾಲದ (BJP Ticket) ಹಿಂದೆ ದೊಡ್ಡ ದೊಡ್ಡ ನಾಯಕರು ಇದ್ದಾರಾ? ಹೀಗೊಂದು ಪ್ರಶ್ನೆಯ ಕಿಡಿ ಹಚ್ಚಿದ್ದಾರೆ ಚೈತ್ರಾ ಕುಂದಾಪುರ.

ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಐದು ಕೋಟಿ ರೂಪಾಯಿ ವಸೂಲಿ ಮಾಡಿ ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಗ್ಯಾಂಗ್‌ನ ಆರು ಮಂದಿ ಈಗ ಬಂದಿತರಾಗಿದ್ದಾರೆ. ಸದ್ಯ ಸಿಸಿಬಿ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ ನೀಡಿರುವ ಒಂದು ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.

ʻಸ್ವಾಮೀಜಿ ಸಿಕ್ಕಾಕಿಕೊಳ್ಳಿ, ಎಲ್ಲ ಸತ್ಯ ಹೊರಗಡೆ ಬರುತ್ತೆ, ದೊಡ್ಡ ದೊಡ್ಡವರ ಹೆಸರೆಲ್ಲ ಹೊರಗಡೆ ಬರುತ್ತದೆ. ನಾನು ಎ1 ಆರೋಪಿಯಾಗಿರಬಹುದು. ಆದರೆ ಸತ್ಯ ಹೊರಗೆ ಬರುತ್ತದೆʼʼ ಎಂದು ಆಕೆ ಸಿಸಿಬಿ ಕಸ್ಟಡಿಯಲ್ಲಿರುವ ಸಂದರ್ಭದಲ್ಲೇ ಹೇಳಿದ್ದಾರೆ. ಇದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಚೈತ್ರಾ ಕುಂದಾಪುರ ಅವರು ಸ್ವಾಮೀಜಿ ಎಂದು ಉಲ್ಲೇಖ ಮಾಡುತ್ತಿರುವುದು ವಿಜಯ ನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು.

ಅಭಿನವ ಹಾಲಶ್ರೀ ಸ್ವಾಮೀಜಿ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು. ಅವರು ಗೋವಿಂದ ಪೂಜಾರಿ ಅವರಿಂದ ನೇರವಾಗಿ ಪಡೆದಿರುವ ಹಣದ ಮೊತ್ತ 1.5 ಕೋಟಿ ರೂ.!

ಬೈಂದೂರು ಕ್ಷೇತ್ರದ ಟಿಕೆಟ್‌ ಬೇಕು ಎಂದು ಕೇಳಿದ ಗೋವಿಂದ ಪೂಜಾರಿ ಅವರನ್ನು ಚೈತ್ರಾ ಕುಂದಾಪುರ ಅವರನ್ನು ಹೂವಿನ ಹಡಗಲಿಯ ಮಠಕ್ಕೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಲಾಗಿದೆ. ಅಲ್ಲಿ ಟಿಕೆಟ್‌ ಕೊಡಿಸುವ ಭರವಸೆ ನೀಡುವ ಸ್ವಾಮೀಜಿ 1.5 ಕೋಟಿ ರೂ. ಕೊಡಬೇಕು ಎಂದು ಕೇಳಿದ್ದಾರೆ ಮತ್ತು ಅದನ್ನು ಬೆಂಗಳೂರಿನ ಜಯನಗರದಲ್ಲಿರುವ ಕಚೇರಿಗೇ ಕೊಂಡೊಯ್ದು ಒಪ್ಪಿಸಲಾಗಿದೆ. ಈ ವಿಚಾರವನ್ನು ಗೋವಿಂದ ಪೂಜಾರಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಇರುವುದೇನು?

2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವನಾಥ್ ಜೀ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕಾಲ್‌ ಮಾಡಿ, ಕರ್ನಾಟಕದ ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಿ ಎಂಬ ಸಲಹೆಯನ್ನು ಗೋವಿಂದ ಪೂಜಾರಿ ಅವರಿಗೆ ನೀಡಲಾಗುತ್ತದೆ.

ಒಂದೂವರೆ ಕೋಟಿ ರೂ. ಕೇಳಿದ ಸ್ವಾಮೀಜಿ!

ಗೋವಿಂದ ಪೂಜಾರಿ ಅವರು ಬೆಂಗಳೂರಿನಿಂದ ಹೊಸಪೇಟೆಗೆ ಹೋಗಿ ಅಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯ ಮುಂದೆ ಕುಕ್ಕರುಗಾಲಲ್ಲಿ ಕೂರುತ್ತಾರೆ. ಆಗ ಸ್ವಾಮೀಜಿಯವರು, ʻʻಗೋವಿಂದ ಪೂಜಾರಿಯವರೇ ವಿಶ್ವನಾಥಜೀ ಅವರು ಎಲ್ಲ ವಿಷಯ ತಿಳಿಸಿದ್ದಾರೆ. ಅವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಟ್ಟಿದ್ದು. ನನಗೆ ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದೆ. ಖಂಡಿತ ಟಿಕೆಟ್‌ ಕೊಡಿಸೋಣ. ಆದರೆ, ಮುಂದಿನ ಪ್ರಕ್ರಿಯೆ 1,50,00,000 ರೂ. (1.5 ಕೋಟಿ ರೂ.) ಬೇಕಾಗುತ್ತದೆ ಎಂದರು. ಗೋವಿಂದ ಪೂಜಾರಿ ಅವರು ಸ್ವಲ್ಪ ಕಾಲಾವಕಾಶ ಕೇಳುತ್ತಾರೆ. ಕೊನೆಗೆ 2023ರ ಜನವರಿ 16ರಂದು ಬೆಂಗಳೂರಿನ ಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ 1.5 ಕೋಟಿ ರೂ.ಯನ್ನು ನೀಡುತ್ತಾರೆ ಗೋವಿಂದ ಪೂಜಾರಿ. ಟಿಕೆಟ್‌ ಸಿಗದಿದ್ದರೆ ಹಣ ವಾಪಸ್‌ ಎಂಬ ಭರವಸೆಯನ್ನು ಸ್ವಾಮೀಜಿ ಕೂಡಾ ನೀಡುತ್ತಾರೆ.

ಈ ನಡುವೆ, ಟಿಕೆಟ್‌ ಸಿಗದೆ ಇದ್ದಾಗ ಸಿಟ್ಟುಗೊಂಡ ಗೋವಿಂದ ಪೂಜಾರಿ ಅವರು ದೂರು ಕೊಡಲು ಮುಂದಾದಾಗ ಸ್ವಾಮೀಜಿ ನಾನು ನಿಮ್ಮ ಹಣವನ್ನು ವಾಪಸ್‌ ಕೊಡುತ್ತೇನೆ. ಈ ಕೇಸಿನಲ್ಲಿ ನನ್ನನ್ನು ಬಿಟ್ಟುಬಿಡಿ ಎನ್ನುತ್ತಾರೆ!

ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

ಈಗ ಚೈತ್ರಾ ಹೇಳಿಕೆಯ ಹಿಂದೆ ಏನಿದೆ?

ಇದೀಗ ಚೈತ್ರಾ ಕುಂದಾಪುರ ಅವರ ಸ್ವಾಮೀಜಿಯ ವಿಚಾರಣೆ ನಡೆದರೆ ದೊಡ್ಡ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿರುವುದರ ಹಿಂದೆ ಏನಿದೆ ಎಂದು ಗಮನಿಸಿದರೆ, ಒಂದೊಮ್ಮೆ ಸ್ವಾಮೀಜಿ ಬಂಧನವಾದರೆ ಅವರ ಜತೆ ಸಂಪರ್ಕದಲ್ಲಿರುವ ನಾಯಕರ ಬಣ್ಣವೂ ಬಯಲಾಗಲಿದೆ ಎಂದು ಆಕೆ ಹೇಳಿದಂತೆ ಅನಿಸುತ್ತದೆ.

ನಿಜವೆಂದರೆ ಈ ವಂಚನಾ ಜಾಲದಲ್ಲಿರುವ ಅಧಿಕೃತ ಮತ್ತು ನಿಜವಾದ ಕ್ಯಾರೆಕ್ಟರ್‌ ಸ್ವಾಮೀಜಿ ಅವರದು ಮಾತ್ರ. ಉಳಿದುದೆಲ್ಲವೂ ಹಣಕ್ಕಾಗಿ ಮಾಡಿದ ಪಾತ್ರಗಳು. ಟಿಕೆಟ್‌ ಬಗ್ಗೆ ಬಿಜೆಪಿ ವಲಯದ ಜತೆಗೆ ಸಂಪರ್ಕ ಇರುವ ವ್ಯಕ್ತಿ ಎಂಬ ನೆಲೆಯಲ್ಲಿ ಮಾತುಕತೆ ನಡೆದಿರುವುದು ಸ್ವಾಮೀಜಿ ಜತೆಗೆ ಮಾತ್ರ.

ಸ್ವಾಮೀಜಿಯವರು ಹಲವಾರು ನಾಯಕರ ಜತೆ ನಿಕಟ ಸಂಪರ್ಕ ಹೊಂದಿರುವುದು, ಮಾತುಕತೆ ವೇಳೆ ತನಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ಜತೆ ಒಡನಾಟವಿದೆ ಎಂದು ಹೇಳಿರುವುದು ಹಾಗೂ ಈ ಟಿಕೆಟ್‌ಗಾಗಿ ಒಂದುವರೆ ಕೋಟಿ ಕೊಡಬೇಕು ಎಂದು ಕೇಳಿರುವುದು ಸಂಶಯಗಳಿಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಇದುವರೆಗೂ ಹಾಲಶ್ರೀ ಸ್ವಾಮೀಜಿ ಬಂಧನ ಆಗಿಲ್ಲ. ಅವರು ಸಿಸಿಬಿ ವಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಹೇಳಲಾಗಿಲ್ಲ.

ಹಾಗಿದ್ದರೆ ಹಿಂದು ಸಂಘಟನೆಗಳನ್ನು ಬೆಂಬಲಿಸುವುದರಲ್ಲಿ ಮುಂಚೂಣಿಯಲ್ಲಿರುವ ಸ್ವಾಮೀಜಿ, ರಾಜಕಾರಣಿಗಳ ಜತೆ ನಿಕಟ ಸಂಪರ್ಕದಲ್ಲಿರುವ ಸ್ವಾಮೀಜಿಯ ಬಂಧನವಾದರೆ ಸ್ಫೋಟಕ ಸತ್ಯವೇನಾದರೂ ಹೊರಗೆ ಬರುತ್ತದಾ? ಕಾದು ನೋಡಬೇಕು.

Exit mobile version