Site icon Vistara News

Chaitra Kundapura : ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ಸೀಜ್‌ ಆಗಿದ್ದು 3.67 ಕೋಟಿ, ಹಾಲಶ್ರೀಯ ಐಷಾರಾಮಿ ಕಾರು ನೋಡಿದ್ರಾ?

Chaitra Gagan kadur and Halashri Swameeji

ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ಐದು ಕೋಟಿ ರೂ. ವಂಚನೆ ಮಾಡಿದ್ದ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನಿಂದ ಈಗಾಗಲೇ ಸಾಕಷ್ಟು ಪ್ರಮಾಣದ ನಗದು, ಚಿನ್ನಾಭರಣ ಮತ್ತು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ವಶಪಡಿಸಿಕೊಳ್ಳಲಾದ ನಗದು ಮತ್ತು ವಸ್ತುಗಳ ಒಟ್ಟು ಮೌಲ್ಯ ಸುಮಾರು 3.67 ಕೋಟಿ ರೂ! (Money and gold worth 3.67 Crores) ಅಂದರೆ ಗೋವಿಂದ ಪೂಜಾರಿಗೆ ವಂಚಿಸಿದ ಮೊತ್ತದಲ್ಲಿ ಸುಮಾರು ಶೇಕಡಾ 75ರಷ್ಟನ್ನು ಮರಳಿ ಪಡೆಯಲಾಗಿದೆ. ಡಿಸಿಪಿ ಅಬ್ದುಲ್ ಅಹ್ಮದ್‌ ಹಾಗೂ ಎಸಿಪಿ ರೀನಾ ಸುವರ್ಣಾ ನೇತೃತ್ವದ ತಂಡದಿಂದ ವಿಚಾರಣೆ ನಡೆದ ವೇಳೆ ಮಾಹಿತಿ ಪಡೆದು ದಾಳಿ ಮಾಡಿ ಇವುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಆರೋಪಿಗಳು ಖರೀದಿಸಿರುವ ಜಮೀನು ಮತ್ತಿತರ ವಿಚಾರಗಳು ಸೇರಿಲ್ಲ.

ಇತರೆ ವಂಚನೆ ಪ್ರಕರಣಗಳಿಗೆ ಹೋಲಿಸಿದರೆ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಜಪ್ತಿ ಆಗಿದೆ ಎನ್ನಲಾಗಿದೆ. ಒಟ್ಟಾರೆ ಹಣದಲ್ಲಿ 23 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ.

ಹಾಗಿದ್ದರೆ ಯಾರ ಕೈಯಿಂದ ಎಷ್ಟೆಷ್ಟು ಸಿಕ್ಕಿದೆ ಎಂಬುದರ ವಿವರ ಇಲ್ಲಿದೆ

ಚೈತ್ರಾ ಕುಂದಾಪುರ: ದಿ ಕಿಂಗ್‌ ಪಿನ್‌ (Chaitha kundapura: The Kingpin)

ಪ್ರಕರಣದ ನಂಬರ್‌ ಒನ್‌ ಆರೋಪಿಯಾಗಿರುವ ಚೈತ್ರಾ ಕುಂದಾಪುರ ಕೈಯಿಂದ 81 ಲಕ್ಷ ನಗದು, 1.23 ಲಕ್ಷ ಮೌಲ್ಯದ ಚಿನ್ನಾಭರಣ, 1.8 ಕೋಟಿ ಮೊತ್ತದ ನಿಶ್ಚಿತ ಠೇವಣಿ, 12 ಲಕ್ಷ ಮೌಲ್ಯದ ಕಿಯಾ ಕಾರು ವಶವಾಗಿದೆ.

ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swameeji)

ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಅವರಿಗೆ ಸೇರಿದ ಸುಮಾರು 56 ಲಕ್ಷ ರೂ.ವನ್ನು ಮಠದಿಂದ ವಶಕ್ಕೆ ಪಡೆಯಲಾಗಿದೆ (ಮೈಸೂರಿನ ವಕೀಲ ಪ್ರಣವ್‌ ಪ್ರಸಾದ್‌ ಅಲ್ಲಿ ಇಟ್ಟುಬಂದ ಹಣ). ಪರಿಚಯಸ್ಥನ ಬಳಿ 25 ಲಕ್ಷ ರೂ. ಸಿಕ್ಕಿದೆ. 25 ಲಕ್ಷ ಮೌಲ್ಯದ ಇನ್ನೋವಾ ಕಾರು ವಶವಾಗಿದೆ.

ಗಗನ್‌ ಕಡೂರ್: ದ ಮಾಸ್ಟರ್‌ ಮೈಂಡ್‌ (Gagan Kadur : The Mastermind)

ಇಡೀ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿರುವ, ವಂಚನೆಗೆ ಹಲವು ನಾಟಕಗಳನ್ನು ಹೆಣೆದ ನಿರ್ದೇಶಕ ಗಗನ್‌ ಕಡೂರು ಕೈಯಿಂದ 20 ಲಕ್ಷ ರೂ. ನಗದು ಸಿಕ್ಕಿದೆ. ಈತ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯೂ ಹೌದು.

ಧನರಾಜ್ ಹಾಗೂ ರಮೇಶ್: ನಾಟಕದ ಪಾತ್ರಧಾರಿಗಳು (Dhanaraj, Ramesh)

ಚಿಕ್ಕಮಗಳೂರಿನ ಐಬಿಯಲ್ಲಿ ಕುಳಿತು ನಾನೇ ಆರೆಸ್ಸೆಸ್‌ ಪ್ರಚಾರಕ್‌ ವಿಶ್ವನಾಥ್‌ ಜಿ ಎಂದು ಪರಿಚಯಿಸಿಕೊಂಡ ರಮೇಶ್‌ ಮತ್ತು ಅವನಿಗೆ ವೇಷ ಹಾಕಿಸಿದ ಇನ್ನೋವಾ ಚಾಲಕ ಧನರಾಜ್‌ ಕೈಯಿಂದ ಸಿಕ್ಕಿರುವ ಮೊತ್ತ ಆರು ಲಕ್ಷ ರೂ. ಇದು ನಾಟಕದಲ್ಲಿ ಪಾತ್ರ ಮಾಡಿದ್ದಕ್ಕಾಗಿ ಅವರಿಗೆ ಸಿಕ್ಕಿರುವ ಸಂಭಾವನೆ.

ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

ಹಾಲಶ್ರೀ ಖರೀದಿಸಿದ್ದ ಕಾರು ಈಗ ಸಿಸಿಬಿ ಕಚೇರಿಯಲ್ಲಿ ಪಾರ್ಕಿಂಗ್‌

ಹಾಲಶ್ರೀ ಸ್ವಾಮೀಜಿ ತಾನು ವಂಚನೆ ನಡೆಸಿ ಪಡೆದ ಹಣದಲ್ಲಿ ಜಾಗ ಖರೀದಿ, ಪೆಟ್ರೋಲ್‌ ಪಂಪ್‌ ಖರೀದಿ ಮಾಡಿದ್ದರು. ಅದರ ಜತೆ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನೂ ಖರೀದಿಸಿದ್ದರು. ಸುಮಾರು 25 ಲಕ್ಷ ಮೌಲ್ಯದ ಕಾರು ಸಿಸಿಬಿ ಕಚೇರಿಯ ಮುಂಭಾಗದಲ್ಲಿದೆ.

ಹಿರಿಯ ಸ್ವಾಮೀಜಿಯೊಬ್ಬರಿಂದ ಕಾರಿಗೆ ಪೂಜೆ ಮಾಡಿಸಿಕೊಂಡಿದ್ದ ಹಾಲಶ್ರೀ ಇತ್ತೀಚೆಗೆ ತಲೆಮರೆಸಿಕೊಳ್ಳುವ ಸಂದರ್ಭದಲ್ಲಿ ಕಾರನ್ನು ಮಠದಲ್ಲಿ ಅಡಗಿಸಿಟ್ಟಿದ್ದರು. ಸಿಕ್ಕಿಬಿಳುವ ಭಯದಿಂದ ಕಾರಿನ ನಂಬರ್ ಪ್ಲೇಟ್ ತೆಗೆದಿದ್ದರು. ಈ ನಡುವೆ ಈ ಕಾರು ಮೈಸೂರಿನಲ್ಲಿತ್ತು ಎಂಬ ಮಾಹಿತಿಯೂ ಇದೆ.

Exit mobile version