ಬೆಂಗಳೂರು/ ಚಿಕ್ಕಮಗಳೂರು: ಚೈತ್ರಾ ಕುಂದಾಪುರ (Chaitra Kundapura) ಎಂಬ ಬೆಂಕಿ ಭಾಷಣಕಾರ್ತಿ ಬೈಂದೂರು ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋವಿಂದ ಬಾಬು ಪೂಜಾರಿ (Govinda Poojari) ಎಂಬವರಿಂದ ಐದು ಕೋಟಿ ರೂ. ವಸೂಲಿ ಮಾಡಿ ವಂಚಿಸಿದ ಪ್ರಕರಣದಲ್ಲಿ ಹಲವು ರೋಚಕ ಘಟನೆಗಳಿವೆ. ಈ ವಂಚನೆಯ ಜಾಲದಲ್ಲಿ (Fraud Case) ಬರುವ ಆರೆಸ್ಸೆಸ್ ಪ್ರಚಾರಕ ವಿಶ್ವನಾಥ್ಜೀ (RSS Pracharak Vishwanathji) ಎಂಬ ಪಾತ್ರವನ್ನು ಸೃಷ್ಟಿ ಮಾಡಲು ಚೈತ್ರಾ ಕುಂದಾಪುರ ಕೊಟ್ಟಿರುವ ದುಡ್ಡು 10 ಲಕ್ಷ ರೂ.!
ಚಿಕ್ಕಮಗಳೂರಿನ ಒಬ್ಬ ಸಾಮಾನ್ಯ ಅಂಗಡಿಕಾರನನ್ನು ಸೆಲೂನ್ಗೆ ಕರೆದುಕೊಂಡು ಹೋಗಿ ವಿಶ್ವನಾಥ್ಜೀಯಾಗಿ ಬದಲಾಯಿಸಿದ ಚೈತ್ರಾ, ಬೆಂಗಳೂರಿನ ಒಬ್ಬ ಕಬಾಬ್ ವ್ಯಾಪಾರಿಯನ್ನು ಬಿಜೆಪಿಯ ಚುನಾವಣಾ ಸಮಿತಿ ಸದಸ್ಯ ಎಂದು ಪಾರ್ಟ್ ಮಾಡಿಸಿದ್ದಳು!
ಗೋವಿಂದ ಪೂಜಾರಿ ಅವರು ಬೈಂದೂರು ಟಿಕೆಟ್ ಕೊಡಿಸುವಂತೆ ಮೊದಲು ಚೈತ್ರಾ ಕುಂದಾಪುರಳನ್ನು ಕೇಳುತ್ತಾರೆ. ಆಕೆ ಓಕೆ ಸಾರ್ ಮಾಡಿಕೊಡೋಣ ಎಂದು ಭರವಸೆ ನೀಡುತ್ತಾಳೆ. ಬಳಿಕ ಅವಳು ಚರ್ಚೆ ಮಾಡುವುದು ಚಿಕ್ಕಮಗಳೂರಿನ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಗನ್ ಕಡೂರುನನ್ನು. ಗೋವಿಂದ ಪೂಜಾರಿ ಅವರಿಗೆ ತಾವು ಟಿಕೆಟ್ಗಾಗಿ ದೊಡ್ಡ ದೊಡ್ಡ ವ್ಯಕ್ತಿಗಳ ಜತೆ ಸಮಾಲೋಚನೆಯಲ್ಲಿದ್ದೇವೆ ಎನ್ನುವುದನ್ನು ತೋರಿಸುವುದಕ್ಕಾಗಿ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಸೃಷ್ಟಿ ಮಾಡುವ ಎರಡು ಪಾತ್ರಗಳೇ ಆರೆಸ್ಸೆಸ್ ಪ್ರಚಾರಕ್ ವಿಶ್ವನಾಥ್ಜೀ ಮತ್ತು ಬಿಜೆಪಿಯ ಚುನಾವಣಾ ಮಂಡಳಿಯ ಹಿರಿಯ ಸದಸ್ಯ ನಾಯ್ಕ್!
ಗೋವಿಂದ ಪೂಜಾರಿ ಅವರಿಗೆ ಈ ವ್ಯಕ್ತಿಗಳನ್ನು ಭೇಟಿ ಮಾಡಿಸಬೇಕು ಎಂದಾದಾಗ ಗಗನ್ ಕಡೂರ್ಗೆ ಹೊಳೆಯುವ ಐಡಿಯಾವೇ ತನ್ನ ಪರಿಚಯದವನೇ ಆದ ಧನರಾಜ್. ಧನರಾಜ್ ಕಡೂರಿನಲ್ಲಿ ಇನ್ನೋವಾ ವಾಹನ ಬಾಡಿಗೆ ಮಾಡುವ ಒಬ್ಬ ವ್ಯಕ್ತಿ. ಅದೊಂದು ದಿನ ಚೈತ್ರಾ ಧನರಾಜ್ನನ್ನು ಗಗನ್ ಕಡೂರು ಮನೆಗೆ ಕರೆಸಿಕೊಂಡು ಮಾತನಾಡುತ್ತಾಳೆ. ಕರಾವಳಿಯ ಚುನಾವಣಾ ಟಿಕೆಟ್ ವಿಚಾರವನ್ನು ಮಾತನಾಡುತ್ತಾಳೆ. ಗೋವಿಂದ ಪೂಜಾರಿಯವರಿಗೆ ಟಿಕೆಟ್ ಸಿಗೋದು ಗ್ಯಾರಂಟಿ ಆಗಿದೆ. ನಾವೇ ನಿಂತು ಎಲ್ಲ ಮಾಡಿಸಿದ್ದೇವೆ. ಆದರೆ, ಒಂದೊಮ್ಮೆ ಟಿಕೆಟ್ ಸಿಕ್ಕಿದರೆ ಅದು ತನಗೆ ಹೊಸಪೇಟೆಯ ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಗಳೇ ಮಾಡಿಸಿದ್ದಾರೆ ಎಂದು ತಿಳಿಯುತ್ತಾರೆ. ನಾವು ಇಷ್ಟೆಲ್ಲ ಕಷ್ಟಪಟ್ಟಿದ್ದು ವೇಸ್ಟ್ ಆಗುತ್ತದೆ. ಹೀಗಾಗಿ ವಿಶ್ವನಾಥ್ಜೀ ಎನ್ನುವ ವ್ಯಕ್ತಿ ಬೇಕಲ್ಲ ಎಂದು ಕೇಳುತ್ತಾಳೆ. ಇದರಲ್ಲಿ ಏನೂ ಡೇಂಜರ್ ಇಲ್ಲ, ಸಹಕಾರ ನೀಡಿದರೆ ನಿಮಗೂ ಲಾಭವಾಗುತ್ತದೆ, ನಮಗೂ ಲಾಭವಾಗುತ್ತದೆ ಎನ್ನುತ್ತಾಳೆ.
ದುಡ್ಡಿನಾಸೆಗೆ ಬೀಳುವ ಧನರಾಜ್ ಆಯ್ತು ಮಾಡಿಸೋಣ ಅಂತಾನೆ. ಆಗ ಅವನ ತಲೆಗೆ ಹೊಳೆದಿರುವ ಹೆಸರು ರಮೇಶ್! ರಮೇಶ್ ಮೂಲತಃ ಚಳ್ಳಕೆರೆಯವನು. ಕಡೂರಿನಲ್ಲಿ ಸಣ್ಣ ಪುಟ್ಟ ವ್ಯವಹಾರ ಮಾಡಿಕೊಂಡಿದ್ದಾನೆ.
ಸೆಲೂನ್ನಲ್ಲೇ ರೆಡಿ ಆದ್ರು ಆರೆಸ್ಸೆಸ್ ಪ್ರಚಾರಕ ವಿಶ್ವನಾಥ್ ಜಿ!
ಇತ್ತ ಧನರಾಜ್ ರಮೇಶ್ನ ಜತೆ ಮಾತನಾಡುತ್ತಾನೆ. ರಮೇಶ್ ಕೂಡಾ ಏನೇನೋ ವೇಷ ಮಾಡಿಲ್ವಾ? ಇದನ್ನೂ ಮಾಡೋಣ ಬಿಡು ಅಂತಾನೆ. ಅದೊಂದು ದಿನ ಗೋವಿಂದ ಪೂಜಾರಿ ಅವರು ಚಿಕ್ಕಮಗಳೂರಿಗೆ ಬರಲು ದಿನ ನಿಗದಿಯಾಗುತ್ತದೆ. ಆವತ್ತು ರಮೇಶ್ನನ್ನು ಕಡೂರಿನ ಒಂದು ಸೆಲೂನ್ಗೆ ಕರೆದುಕೊಂಡು ಹೋಗಿ ಚಂದ ಕಟ್ಟಿಂಗ್ ಮಾಡಿಸಿ ಡ್ರೆಸ್ ಹಾಕಿಸಿ ವಿಶ್ವನಾಥ್ ಜೀ ಮಾಡಲಾಗುತ್ತದೆ.
ಅದಕ್ಕಿಂತ ಮೊದಲು ಆರೆಸ್ಸೆಸ್ ಪ್ರಚಾರಕ್ ಎಂದರೆ ಏನು? ಅವರು ಹೇಗಿರುತ್ತಾರೆ? ಹೇಗೆ ಮಾತನಾಡುತ್ತಾರೆ? ಹೇಗ ಸಿಂಪಲ್ ಆಗಿರುತ್ತಾರೆ ಎನ್ನುವುದೆಲ್ಲವನ್ನೂ ಚೈತ್ರಾ ಕುಂದಾಪುರ ರಮೇಶ್ಗೆ ವಿವರಣೆ ಕೊಟ್ಟಿದ್ದಳು. ಹಾಗೆ ಆ ದಿನ ಬಂತು ಗೋವಿಂದ ಪೂಜಾರಿ ಅವರು ಬಂದು ವಿಶ್ವನಾಥ್ ಜೀ ಎಂಬ ನಕಲಿ ಆರೆಸ್ಸೆಸ್ ಪ್ರಚಾರಕರನ್ನು ಭೇಟಿ ಮಾಡುತ್ತಾರೆ. ಆಗ 50 ಲಕ್ಷದ ಡೀಲ್ ಕುದುರುತ್ತದೆ!
ಇದನ್ನೂ ಓದಿ: Chaithra Kundapura : ಮುಸ್ಲಿಮರ ಮೇಲೆ ಬೆಂಕಿ ಉಗುಳುವ ಚೈತ್ರಾ ಕುಂದಾಪುರ ಅಡಗಿ ಕುಳಿತದ್ದು ಮುಸ್ಲಿಮ್ ಫ್ರೆಂಡ್ ಮನೆಯಲ್ಲಿ!
ಕಬಾಬ್ ವ್ಯಾಪಾರಿ ಬಿಜೆಪಿಯ ಹಿರಿಯ ಲೀಡರ್ ಆಗಿದ್ದು ಹೀಗೆ!
ಅಂದ ಹಾಗೆ, ಚಿಕ್ಕಮಗಳೂರಿನಲ್ಲಿ ಪ್ರಚಾರಕ ವಿಶ್ವನಾಥ್ಜೀ ಪಾತ್ರ ಸೃಷ್ಟಿ ಮಾಡಿದಂತೆಯೇ ಬೆಂಗಳೂರಿನಲ್ಲಿ ಬಿಜೆಪಿಯ ಚುನಾವಣಾ ಮಂಡಳಿಯ ಹಿರಿಯ ಸದಸ್ಯ ನಾಯ್ಕ್ ಪಾತ್ರವನ್ನು ಸೃಷ್ಟಿ ಮಾಡಲಾಗುತ್ತದೆ. ಅಲ್ಲಿ ಚೈತ್ರಾ ಕೈಗೆ ಸಿಕ್ಕಿದವನು ಕೆ.ಆರ್. ಮಾರ್ಕೆಟ್ನಲ್ಲಿ ಕಬಾಬ್ ವ್ಯಾಪಾರಿಯಾಗಿರುವ ಒಬ್ಬ ವ್ಯಕ್ತಿ. ಬಿಜೆಪಿಯ ಹಿರಿಯ ನಾಯಕರು ಬೆಂಗಳೂರಿಗೆ ಬಂದಿದ್ದಾರೆ. ಕುಮಾರಕೃಪಾ ಗೆಸ್ಟ್ ಹೌಸ್ನಲ್ಲಿರುತ್ತಾರೆ ಎಂದು ಗೋವಿಂದ ಪೂಜಾರಿ ಅವರಿಗೆ ಹೇಳುತ್ತಾಳೆ ಚೈತ್ರಾ. ಆವತ್ತು ಗೋವಿಂದ ಪೂಜಾರಿ ಅವರು ಬಂದಾಗ ನಕಲಿ ನಾಯ್ಕ್ ಭೇಟಿಯಾಗುತ್ತಾರೆ. ನಿಮ್ಮ ಟಿಕೆಟ್ ಫೈನಲ್ ಆಗಿದೆ. ನೀವು ಮೂರು ಕೋಟಿ ಅಮೌಂಟ್ ಕೂಡಾ ರೆಡಿ ಮಾಡಿ ಎಂದು ಕಬಾಬ್ ವ್ಯಾಪಾರಿ ಸ್ಟೈಲಾಗಿ ಹೇಳುತ್ತಾನೆ. ಗೋವಿಂದ ಪೂಜಾರಿ ಅವರು ಇದನ್ನು ನಂಬಿಕೊಂಡು ಹೋಗುತ್ತಾರೆ.
ಧನರಾಜ್ಗೆ ಕೊಟ್ಟಿದ್ದು 10 ಲಕ್ಷ ರೂ.!
ನಕಲಿ ವಿಶ್ವನಾಥ್ ಜೀ ಸೃಷ್ಟಿಯ ನಾಟಕದ ಪಾತ್ರಧಾರಿಗಳಾದ ಧನರಾಜ್ ಮತ್ತು ರಮೇಶ್ಗೆ ಚೈತ್ರಾ ಕುಂದಾಪುರ ಯಾವ ಮೋಸವನ್ನೂ ಮಾಡಿಲ್ಲ! ಯಾಕೆಂದರೆ ಒಂದು ಸಣ್ಣ ಆಕ್ಟ್ಗೆ 10 ಲಕ್ಷ ರೂ. ಕೊಟ್ಟಿದ್ದಾಳೆ ಎಂದು ಸ್ವತಃ ಧನರಾಜ್ ಹೇಳಿದ್ದಾನೆ!
ಹಾಗಿದ್ದರೆ ಧನರಾಜ್ ಮತ್ತು ರಮೇಶ್ ಹೇಳಿದ್ದೇನು?
ಈ ಪ್ರಕರಣದಲ್ಲಿ ತಮ್ಮ ಪಾತ್ರವೇನು? ತಮ್ಮ ನಿಲುವೇನು ಎನ್ನುವುದನ್ನು ಧನರಾಜ್ ಮತ್ತು ರಮೇಶ್ ವಿಡಿಯೊ ಮೂಲಕ ಹೇಳಿದ್ದಾರೆ.
ʻʻಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ಎಂದು ನಮ್ಗೆ ಗೊತ್ತಿರಲಿಲ್ಲ. ನಿಮಗೂ ಅನುಕೂಲ ಆಗುತ್ತೆ ಎಂದಿದ್ದಕ್ಕೆ ನಾವು ಒಪ್ಪಿಕೊಂಡಿದ್ದೀವಿ. ನಾನು ಹೇಳಿದಾಗಿ ನೀವು ನಟಿಸಿ ಎಂದು ಹೇಳಿದ್ರು. ನಾವು ಹಾಗೇ ಮಾಡಿದ್ವಿ ಅಷ್ಟೇ. ದೊಡ್ಡ ವ್ಯವಹಾರ ಬಗ್ಗೆ ಮಾಹಿತಿ ಇಲ್ಲʼʼ ಎಂದು ಧನರಾಜ್ ಮತ್ತು ರಮೇಶ್ ಹೇಳಿದ್ದಾರೆ.
ʻʻಎಲ್ಲಾ ಕ್ರಿಯೆಟ್ ಮಾಡಿದ್ದು ಗಗನ್. ಆ ರೀತಿ ನಾವು ನಟನೆ ಮಾಡಿದ್ವಿ ಅಷ್ಟೇ. ಟಿಕೆಟ್ ನೀಡಿದ್ರೆ ಅವರು ಗೆಲ್ಲುತ್ತಾರೆ. ಆಗ ನಿಮಗೂ ಹೆಲ್ಪ್ ಆಗುತ್ತದೆ ಎಂದಿದ್ರು. ನಮಗೆ ಒಟ್ಟು 10 ಲಕ್ಷ ರೂ. ಕೊಟ್ಟಿದ್ದಾರೆʼʼ ಎಂದು ಧನರಾಜ್ ಹೇಳಿದ್ದಾನೆ. ಜತೆಗೆ ಈ ವಿಚಾರವನ್ನು ಬಾಯಿ ಬಿಟ್ಟರೆ ಹುಷಾರ್ ಎನ್ನುವ ಬೆದರಿಕೆಯನ್ನೂ ಹಾಕಿದ್ದಾಳಂತೆ ಚೈತ್ರಾ.
ಧನರಾಜ್, ರಮೇಶ್ ಪಾತ್ರವನ್ನು ಪತ್ತೆ ಹಚ್ಚಿದ್ದೇ ಗೋವಿಂದ ಪೂಜಾರಿ, ಹೇಗೆ?
ನಿಜವೆಂದರೆ, ವಿಶ್ವನಾಥ್ಜಿ ಒಂದು ನಕಲಿ ಪಾತ್ರ. ಅದನ್ನು ಮಾಡಿದ್ದು ಧನರಾಜ್ ಮತ್ತು ರಮೇಶ್ ಎಂದು ತನಿಖೆ ಮೂಲಕ ಪತ್ತೆ ಹಚ್ಚಿದ್ದೇ ಗೋವಿಂದ ಪೂಜಾರಿ.
ಯಾವಾಗ ಚೈತ್ರಾ ಕುಂದಾಪುರ ಹಣ ಪಡೆದುಕೊಂಡ ಆರೆಸ್ಸೆಸ್ ಪ್ರಚಾರ ವಿಶ್ವನಾಥ್ಜಿ ಮೃತಪಟ್ಟರು ಎಂದು ಹೇಳಿದಳೋ ಆಗ ಗೋವಿಂದ ಪೂಜಾರಿ ಅವರು ಮೊದಲ ಬಾರಿಗೆ ಸಂಶಯ ಪಟ್ಟು ಹುಡುಕಲು ಶುರು ಮಾಡುತ್ತಾರೆ. ಮೊದಲು ವಿಶ್ವನಾಥ್ಜೀ ಎಂಬ ಪ್ರಚಾರಕರೇ ಇಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳುವ ಅವರು ನಂತರ ಚಿಕ್ಕಮಗಳೂರಿನ ಹಿಂದೂ ಸಂಘಟನೆ ಕಾರ್ಯಕರ್ತರ ಮಂಜು ಎಂಬವರನ್ನು ಸಂಪರ್ಕಿಸಿ ಚಿಕ್ಕಮಗಳೂರಿನಲ್ಲಿರುವ ʻಆ ಸಂಘದ ಪ್ರಚಾರಕ ವಿಶ್ವನಾಥ್ಜಿʼ ಯಾರು ಎಂದು ಪ್ರಶ್ನಿಸುತ್ತಾರೆ. ಆಗ ಮಂಜು ಕಡೂರಿನ ಆ ಸೆಲೂನ್ನಲ್ಲಿ ನಡೆದ ವಿದ್ಯಮಾನವನ್ನು ನೆನಪಿಸಿಕೊಳ್ಳುತ್ತಾರೆ. ಗೋವಿಂದ ಪೂಜಾರಿ ಅವರು ಆ ಸೆಲೂನ್ಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗುತ್ತದೆ. ಅಲ್ಲಿಗೆ ಧನರಾಜ್ ಮತ್ತು ರಮೇಶ್ ಆವತ್ತೇ ಗೋವಿಂದ ಪೂಜಾರಿ ಕೈಗೆ ಸಿಕ್ಕಿಬಿದ್ದಿದ್ದರು. ಮತ್ತು ಚೈತ್ರಾ ಕುಂದಾಪುರಳ ಸಮಸ್ತ ವಂಚನೆ ಬಿಚ್ಚಿಕೊಂಡಿತ್ತು.