ಬೆಂಗಳೂರು: ರಾಜಧಾನಿಯ ಎಲೆಕ್ಟ್ರಾನಿಕ್ ಸಿಟಿ (Electronic City) ಬಳಿ ರೇವ್ ಪಾರ್ಟಿ (Rave Party) ನಡೆಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರ (CCB Police) ತನಿಖೆ ಪೂರ್ಣಗೊಂಡಿದ್ದು, ಚಾರ್ಜ್‌ಶೀಟ್ (Charge Sheet) ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ತೆಲುಗು ನಟಿ ಹೇಮಾ (Actress Hema) ಸೇರಿ ಒಟ್ಟು 85ಕ್ಕೂ ಹೆಚ್ಚು ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಹೇಮಾ ವಿರುದ್ಧವೂ ಸಾಕ್ಷಿಗಳಿದ್ದು, ಸಿಸಿಬಿ ಚಾರ್ಜ್ ಫ್ರೇಮ್ ಮಾಡಿದೆ. ಈಕೆ ಡ್ರಗ್ಸ್ ಸೇವನೆ ಮಾಡಿದ್ದಕ್ಕೆ ಸಾಕ್ಷಿ ಲಭ್ಯವಾಗಿದೆ.
ಡ್ರಗ್ಸ್ ಸೇವನೆ ಮಾಡಿದ್ದೂ ಅಲ್ಲದೇ ಪೊಲೀಸರ ತನಿಖೆ ವೇಳೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾಳೆ. ಪೊಲೀಸರಿಗೆ ತನಿಖೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾಳೆ. ಪ್ರಭಾವ ಬಳಸಿ ತನಿಖೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿರುವ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ತಾನು ರೇವ್ ಪಾರ್ಟಿಯಲ್ಲಿ ಭಾಗವಹಿಸಿಯೇ ಇಲ್ಲ ಎಂದು ಈಕೆ ಪಾರ್ಟಿಯ ಸ್ಥಳದಿಂದಲೇ ಮಾಧ್ಯಮಗಳಿಗೆ ವಿಡಿಯೋ ಕಳಿಸಿ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಳು.
ಪಾರ್ಟಿ ಆಯೋಜನೆ ಮಾಡಿದ್ದ ಐವರು ಸೇರಿ ಒಟ್ಟು 85ಕ್ಕೂ ಹೆಚ್ಚು ಜನರ ವಿರುದ್ಧ ಚಾರ್ಜ್‌ಶೀಟ್ ಮಂಡಿಸಲಾಗುತ್ತಿದೆ. ಇನ್ನೂ ಕೆಲವೇ ದಿನದಲ್ಲಿ ನ್ಯಾಯಾಲಯಕ್ಕೆ ಇದನ್ನು ಸಿಸಿಬಿ ಸಲ್ಲಿಕೆ ಮಾಡಲಿದೆ ಎಂದು ತಿಳಿದುಬಂದಿದೆ. ಪಾರ್ಟಿಯಲ್ಲಿ 85ಕ್ಕೂ ಹೆಚ್ಚು ಜನರು ಭಾಗವಹಿಸಿರುವುದು ಪತ್ತೆಯಾಗಿತ್ತು. ಪಕ್ಕದ ಆಂಧ್ರಪ್ರದೇಶದ ಅನೇಕ ಪ್ರಭಾವಿಗಳು, ಶ್ರೀಮಂತ ಉದ್ಯಮಿಗಳು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ರೇವ್ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ ಅವರನ್ನು ಬಂಧಿಸಲಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ಕೋರ್ಟ್ ಆಕೆಗೆ ವಿಧಿಸಿತ್ತು. ನಂತರ ಜಾಮೀನು ಮಂಜೂರಾಗಿತ್ತು. ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ಕೋರ್ಟ್, ನಟಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನಟಿ ಹೇಮಾಳಿಂದ ಯಾವುದೇ ಮಾದಕ ವಸ್ತು ವಶಕ್ಕೆ ಪಡೆಯಲಾಗಿಲ್ಲ. ಹಲವು ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಮಾ ಅಲಿಯಾಸ್ ಕೊಲ್ಲ ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ವಾದ ಮಂಡಿಸಿದ್ದಾರೆ. ಹೀಗಾಗಿ ನಟಿ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ರೇವ್ ಪಾರ್ಟಿ ಪ್ರಕರಣದಲ್ಲಿ (Rave Party) ವಿಚಾರಣೆಗೆ ಆಗಮಿಸಿದ್ದ ತೆಲುಗು ನಟಿ ಹೇಮಾ ಅವರನ್ನು ಜೂನ್ 3ರಂದು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಸಲ್ಮಾ .ಎ.ಎಸ್ ಅವರು, ನಟಿ ಹೇಮಾ ಅವರನ್ನು ಜೂನ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದ್ದರು.
ಮೇ 19ರಂದು ಎಲೆಕ್ಟ್ರಾನಿಕ್ ಸಿಟಿಯ (Electronic city) ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾಗಿದ್ದಾಗ ಅವರನ್ನು ಅಧಿಕಾರಿಗಳು ಬಂಧಿಸಿದ್ದರು.
ಇದನ್ನೂ ಓದಿ | Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್?