Site icon Vistara News

Attibele Fire Accident : ಅತ್ತಿಬೆಲೆ ಪಟಾಕಿ ದುರಂತದ ಸಿಐಡಿ ತನಿಖೆ: ಸಿದ್ದರಾಮಯ್ಯ ಘೋಷಣೆ

Siddaramaiah visits Attibele Fire Accident place

ಆನೇಕಲ್/ಬೆಂಗಳೂರು: ಆನೇಕಲ್‌ನ ಅತ್ತಿಬೆಲೆ ಪಟಾಕಿ ಗೋದಾಮು ಅಗ್ನಿ ದುರಂತ (Attibele Fire Accident) ಪ್ರಕರಣದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು (Safety measures) ತೆಗೆದುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ, ಈ ಪ್ರಕರಣದ ಸಂಪೂರ್ಣ ತನಿಖೆ ಹೊಣೆಯನ್ನು ಸಿಐಡಿಗೆ (CID investigation) ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದಾರೆ.

ಆನೇಕಲ್‌ನ ಅತ್ತಿಬೆಲೆ ಪಟಾಕಿ ಗೋದಾಮೊಂದರಲ್ಲಿ (Attibele Fire Accident) ಶನಿವಾರ (ಅ.7) ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದು 14 ಜನರ ಪ್ರಾಣ ತೆಗೆದ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Attibele Fire Accident : ರಾಜ್ಯಾದ್ಯಂತ ಪಟಾಕಿ ಗೋದಾಮುಗಳ ಸುರಕ್ಷತಾ ಸಮೀಕ್ಷೆ: ಡಿ.ಕೆ. ಶಿವಕುಮಾರ್

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆನೇಕಲ್‌ನ ಈ ‌ಪಟಾಕಿ ಗೋದಾಮಿನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಶನಿವಾರ (ಅಕ್ಟೋಬರ್‌ 7) ಮಧ್ಯಾಹ್ನ 3.15 ರಿಂದ 03.30ರ ಸಂದರ್ಭದಲ್ಲಿ ಬೆಂಕಿ ಅವಘಡ ನಡೆದಿರುವುದು ಗೊತ್ತಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಅಗ್ನಿಶಾಮಕ ದಳ, ಪೊಲೀಸರು ನೋ ಅಬ್ಜಕ್ಷನ್‌ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಪರಿಶೀಲನೆ ಮಾಡಬೇಕಿತ್ತು. ಅವರು ಮಾಡಿದಂತೆ ಕಾಣುತ್ತಿಲ್ಲ. ಈ ಪ್ರಕರಣದ ತನಿಖೆ ಹೊಣೆಯನ್ನು ಸಿಐಡಿಗೆ ಕೊಡುತ್ತೇನೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಕೊಡುತ್ತೇವೆ. ಇದೊಂದು ದೊಡ್ಡ ದುರಂತ. ಪ್ರಕರಣ ಕೂಡಾ ದಾಖಲಾಗಿದೆ ಎಂದು ಹೇಳಿದರು.

ಯುಪಿಎಸ್‌ ವೈರ್‌ನಿಂದ ಅವಘಡ ಶಂಕೆ

ರಾಮಸ್ವಾಮಿ ರೆಡ್ಡಿ ಎಂಬುವವರು ಲೈಸೆನ್ಸ್‌ ಪಡೆದು ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಪಟಾಕಿಯು ಟ್ರಕ್‌ನಲ್ಲಿ ತಮಿಳುನಾಡಿನಿಂದ ಬರುತ್ತವೆ. ಆದರೆ, ಬೆಂಕಿ ಹೇಗೆ ಪಟಾಕಿಗೆ ತಗುಲಿತು ಎಂಬುದು ಇನ್ನೂ ಪತ್ತೆ ಆಗಿಲ್ಲ. ಸದ್ಯಕೆಕ ಅಲ್ಲಿ ಇರುವ ಯುಪಿಎಸ್‌ ವೈರ್‌ನಿಂದ ಬೆಂಕಿ ಅವಘಡ ಆಗಿರಬಹುದು ಎಂದು ಶಂಕಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಲೈಸೆನ್ಸ್‌ ಅವಧಿ ಮುಗಿದಿತ್ತು

ಗೋದಾಮಿನಲ್ಲಿ ಸುರಕ್ಷತಾ ಕ್ರಮವನ್ನು ತೆಗೆದುಕೊಂಡಿಲ್ಲ ಎಂಬುದು ಕಂಡುಬಂದಿದೆ. ಇನ್ನು 31-10-2021ರಿಂದ 13-09-2023 ವರೆಗೆ ಮಾತ್ರ ಲೈಸೆನ್ಸ್‌ ಪಡೆಯಲಾಗಿತ್ತು. ಇನ್ನೊಂದು ಲೈಸೆನ್ಸ್‌ ಅನ್ನು 2026 ತನಕ ಮಾಡಿಸಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಇದನ್ನೂ ಓದಿ: Attibele Fire Accident : ಪಟಾಕಿ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ: ಎಚ್.ಡಿ. ಕುಮಾರಸ್ವಾಮಿ

ಗೋದಾಮು ಮಾಲೀಕರ ನಿರ್ಲಕ್ಷ್ಯ

ಇದು ಬಹಳ ಕಂಜೆಸ್ಟೆಡ್ ಜಾಗವಾಗಿದೆ. ಒಟ್ಟು 14 ಜನ ಮೃತಪಟ್ಟಿದ್ದಾರೆ. ಎಲ್ಲರೂ ತಮಿಳುನಾಡಿವರಾಗಿದ್ದು, ವಿದ್ಯಾರ್ಥಿಗಳಾಗಿದ್ದಾರೆ. ರಜೆ ಸಮಯ ಆಗಿದ್ದರಿಂದ ಸಂಪಾದನೆ ಮಾಡಲು ಬಂದಿದ್ದರು. ಅಲ್ಲದೆ, ಇದು ಗೋದಾಮು ಮಾಲೀಕರ ನಿರ್ಲಕ್ಷ್ಯ ಎಂಬುದು ಗೊತ್ತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

20 ಕಾರ್ಮಿಕರಿದ್ದರು

ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್‌ ಮಾಡುವಾಗ ಈ ಅವಘಡ ಸಂಭವಿಸಿದೆ.

ಮೃತರಲ್ಲಿ ಏಳು ಜನ ಒಂದೇ ಗ್ರಾಮದವರು

ಅಗ್ನಿ ಅವಘಡದಲ್ಲಿ ಸಜೀವವಾಗಿ ದಹನಗೊಂಡ 14 ಜನರ ಪೈಕಿ ಏಳು ಮಂದಿ ಒಂದೇ ಗ್ರಾಮದವರು ಎಂದು ತಿಳಿದುಬಂದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಟಿ ಅಮ್ಮಾಪೇಟೆ ಎಂಬ ಗ್ರಾಮದ ಗಿರಿ, ಆದಿಕೇಶವನ್, ವಿಜಯ್ ರಾಘವನ್, ಇಲಂಬರದಿ, ಆಕಾಶ, ವೇಡಪನ್ ಸಚಿನ್ ಸೇರಿ ಏಳು ಯುವಕರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಹಿಂಭಾಗ ಕೊಠಡಿಯಲ್ಲಿ ಸಜೀವ ದಹನ

ಗೋದಾಮಿನ ಒಳಗಡೆ ಸಿಲುಕಿಕೊಂಡ ಕಾರ್ಮಿಕರಿಗೆ ಎಮರ್ಜೆನ್ಸಿ ಎಕ್ಸಿಟ್‌ ಡೋರ್‌ ಸಹ ಇರದೇ ಇದ್ದರಿಂದ ಹೊರಗೆ ಹೋಗುವ ದಾರಿ ಕಾಣದಂತಾಗಿತ್ತು. ಹೀಗಾಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಿಂಬದಿಗೆ ಓಡಿ ಹೋಗಿದ್ದರು. ಆದರೆ, ಹಿಂಬದಿ ಸಹ ಪಟಾಕಿಗಳ ರಾಶಿಯೇ ಇತ್ತು. ಅಲ್ಲಿ ಅವರಿಗೆ ತಪ್ಪಿಸಿಕೊಳ್ಳಲು ದ್ವಾರ ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಗೊಂಡರು.

ಇದನ್ನೂ ಓದಿ: Attibele Fire Accident : ಎಮರ್ಜೆನ್ಸಿ ಎಕ್ಸಿಟ್‌ ಇದ್ದಿದ್ದರೆ ಬದುಕುತ್ತಿದ್ದರು ಆ 14 ಮಂದಿ!

ಕೊನೆಗೆ ಅವರಿಗೆ ಕಾಣಿಸಿದ್ದೇ ಪಟಾಕಿ ಗೋದಾಮಿನ ಹಿಂಭಾಗ ಇರುವ ಕೊಠಡಿಯಾಗಿದೆ. ಎಲ್ಲರೂ ಅಲ್ಲಿಯೇ ಹೋಗಿ ಅವಿತು ಕುಳಿತುಕೊಂಡಿದ್ದರು. ಹೀಗಾಗಿ ಒಂದೇ ಜಾಗದಲ್ಲಿ ‌ಏಳು‌ ಜನ ಸ್ನೇಹಿತರು ಸುಟ್ಟು ಕರಕಲಾಗಿ ಹೋದರು. ಇನ್ನು ಪಟಾಕಿ ಸಂಗ್ರಹಿಸಲು ಗೋದಾಮು ಮಾಲೀಕರ ಬಳಿ ಪರವಾನಗಿಯೇ ಇಲ್ಲ ಎಂಬ ಮಾಹಿತಿ ಸಹ ಲಭ್ಯವಾಗಿದೆ.

Exit mobile version