ತಿರುವಳ್ಳೂರು: ಕಲ್ಲಕುರಿಚಿಯ ಕನಿಯಮುನೂರ್ ಗ್ರಾಮದಲ್ಲಿರುವ ಶಕ್ತಿ ಮೆಟ್ರಿಕ್ಯುಲೇಶನ್ ಸ್ಕೂಲ್‌ನ ಹಾಸ್ಟೆಲ್‌ನಲ್ಲಿ ಶ್ರೀಮತಿ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಗೂಢವಾಗಿ ಪ್ರಾಣ ಕಳೆದುಕೊಂಡ ವಿದ್ಯಮಾನ ನಡೆದು ಎರಡು ವಾರಗಳಾಗುವ ಮುನ್ನವೇ ತಮಿಳುನಾಡಿನಲ್ಲಿ ಇನ್ನೊಬ್ಬ ಪಿಯುಸಿ ವಿದ್ಯಾರ್ಥಿನಿಯ ಸಾವು ಸಂಭವಿಸಿದೆ.
ಈ ಬಾರಿ ತಿರುವಳ್ಳೂರ್ ಜಿಲ್ಲೆಯ ಸರಕಾರಿ ಅನುದಾನಿತ ಶಾಲೆಯೊಂದರ ಹಾಸ್ಟೆಲ್ ರೂಮ್‌ನಲ್ಲಿ ೧೨ನೇ ತರಗತಿಯ ವಿದ್ಯಾರ್ಥಿನಿಯ ಸಾವು ಸಂಭವಿಸಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಈಗಾಗಲೇ ಘಟನೆಯ ಬಗ್ಗೆ ಸಿಬಿ-ಸಿಐಡಿ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಡಿಐಜಿ ಪ್ರಕಟಿಸಿದ್ದಾರೆ. ಶಾಲೆಯ ಆವರಣದಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ.
೧೭ ವರ್ಷದ ಹುಡುಗಿಯ ಮೃತದೇಹವನ್ನು ತಿರುವಳ್ಳೂರ್ ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿದ್ದು, ಅಲ್ಲಿ ಪೋಸ್ಟ್ ಮಾರ್ಟಂ ನಡೆಯಲಿದೆ. ವಿದ್ಯಾರ್ಥಿನಿ ಸೋಮವಾರ ಮುಂಜಾನೆ ಹೊತ್ತಿನಲ್ಲಿ ಈ ಕೃತ್ಯವನ್ನು ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಹಿ ನೆನಪು ಮರೆಯುವ ಮುನ್ನವೇ
ಕಳೆದ ಜುಲೈ ೧೩ರಂದು ಕಲ್ಲಕುರಿಚಿಯಲ್ಲಿ ಪಿಯುಸಿ ವಿದ್ಯಾರ್ಥಿನಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಳು. ಈ ಘಟನೆ ಬಯಲಾಗುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಪೋಷಕರು ಜಮಾಯಿಸಿ ವಾಹನಗಳನ್ನು ಸುಟ್ಟು ಹಾಕಿದ್ದರು. ಶಾಲೆಯ ಆವರಣದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆದಿತ್ತು.
ಪೋಷಕರ ಪ್ರತಿಭಟನೆ ಎಷ್ಟು ತೀವ್ರವಾಗಿತ್ತು ಎಂದರೆ ಮಗಳ ಶವವನ್ನೂ ಸ್ವೀಕರಿಸಲೂ ಹೆತ್ತವರು ನಿರಾಕರಿಸಿದ್ದರು. ತಾವು ಬಯಸಿದ ವೈದ್ಯರ ಮೂಲಕ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಜತೆಗೆ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂಕೋರ್ಟ್ ಅದಕ್ಕೆ ಮನ್ನಣೆ ನೀಡಲಿಲ್ಲ. ಕೊನೆಗೆ ಎರಡು ದಿನಗಳ ಹಿಂದಷ್ಟೇ ಕುಟುಂಬ ಮೃತದೇಹವನ್ನು ಸ್ವೀಕರಿಸಿ ಅಂತ್ಯ ಸಂಸ್ಕಾರ ನಡೆಸಿತ್ತು.
ವಿದ್ಯಾರ್ಥಿನಿಯ ಸಾವಿನ ಹಿಂದೆ ಹಾಸ್ಟೆಲ್‌ನ ವಾರ್ಡನ್‌ಗಳು, ಕೆಲಸಗಾರರು, ಆಡಳಿತ ಮಂಡಳಿಯ ಕೈವಾಡವಿದೆ ಎನ್ನುವುದು ಹೆತ್ತವರ ಗಂಭೀರ ಆರೋಪವಾಗಿದೆ. ಇದೀಗ ಹೈಕೋರ್ಟ್ ಮರಣೋತ್ತರ ಪರೀಕ್ಷಾ ವರದಿಯನ್ನು ಸರಿಯಾಗಿ ಅವಲೋಕಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ| School Girl Suicide | ಶಿಕ್ಷಕರ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ಶಾಲೆ ಮೇಲೆ ಜನರ ದಾಳಿ, ಬಸ್‌ಗೆ ಬೆಂಕಿ