ಭೋಪಾಲ್: ನಾಲ್ಕನೇ ತರಗತಿ ಮಕ್ಕಳು ಹೇಗಿರುತ್ತಾರೆ? ಶಿಸ್ತಿನಿಂದ ಶಾಲೆಗೆ ಹೋಗಿ, ತರಗತಿಯಲ್ಲಿ ಟೀಚರ್ ಇಲ್ಲದಿದ್ದಾಗ ಗಲಾಟೆ ಮಾಡಿ, ಟೀಚರ್ ಬಂದಾಗ ವಿಧೇಯರಾಗಿದ್ದು, ಗೆಳೆಯ-ಗೆಳೆತಿಯರ ಜತೆ ಮುನಿಸಿಕೊಂಡು, ಶಾಲೆ ಬಿಟ್ಟಾಗ ಎಲ್ಲರೂ ಮುನಿಸು ಮರೆತು ಮನೆಗೆ ಹೋಗುತ್ತಾರೆ. ಆದರೆ, ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ಮಕ್ಕಳು ರೌಡಿಗಳಂತೆ ವರ್ತಿಸಿದ್ದಾರೆ. ಸಹಪಾಠಿಯೊಬ್ಬನಿಗೆ ಜಾಮಿಟ್ರಿ ಬಾಕ್ಸ್‌ನ ತ್ರಿಜ್ಯದಿಂದ ನೂರು ಬಾರಿ ಇರಿದಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆಯೇ ಸಣ್ಣ ಗಲಾಟೆ ನಡೆದಿದೆ. ಇದೇ ಕಾರಣಕ್ಕಾಗಿ 4ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಕೆಲ ವಿದ್ಯಾರ್ಥಿಗಳು ತ್ರಿಜ್ಯದಿಂದ ನೂರಕ್ಕೂ ಅಧಿಕ ಬಾರಿ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನು ಪ್ರಾಣಾಪಾಯದಿಂದ ಪಾರಾಗಿದ್ದರೂ ಮೈತುಂಬ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಪೋಷಕರ ಆಕ್ರೋಶ
ತ್ರಿಜ್ಯದಿಂದ ನೂರು ಬಾರಿ ಹಲ್ಲೆಗೊಳಗಾದ ವಿದ್ಯಾರ್ಥಿಯ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶಾಲೆ ಆಡಳಿತ ಮಂಡಳಿ, ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಇದಾದ ಬಳಿಕ ಶಾಲೆಯ ಪ್ರಾಂಶುಪಾಲರಾದ ರಮಾ ಶರ್ಮಾ ಅವರು ವಿದ್ಯಾರ್ಥಿಯ ಪೋಷಕರನ್ನು ಮನವೊಲಿಸಿದ್ದು, ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Self Harming: ರನ್ನಿಂಗ್ ರೇಸ್ನಲ್ಲಿ ಸೋಲು; ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಸೂಸೈಡ್!
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಆರಾಧ್ಯ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬರುತ್ತಾರೆ. ಆದರೆ, ಅವರು ಪ್ರತಿ ದಿನ ಯಾವುದಾದರೊಂದು ಗಲಾಟೆಗೆ ಕಾರಣರಾಗುತ್ತಿದ್ದರು ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸರಿ-ತಪ್ಪು ಅರಿಯದ ವಯಸ್ಸಿನ ವಿದ್ಯಾರ್ಥಿಗಳನ್ನು ಪೋಷಕರು ಹಾಗೂ ಶಾಲೆಗಳ ಶಿಕ್ಷಕರು ನಿಯಂತ್ರಿಸಬೇಕಿದೆ. ಇಲ್ಲದಿದ್ದರೆ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡ ಭಯಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಶಿಕ್ಷಣ ತಜ್ಞರು ಎಚ್ಚರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ