Site icon Vistara News

Atrocity Case : ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನದಲ್ಲಿ ಚಾರ್ಜ್‌ಶೀಟ್‌ ಹಾಕ್ಲೇಬೇಕು; ಸಿದ್ದರಾಮಯ್ಯ ಆರ್ಡರ್‌

Siddaramaiah

ಬೆಂಗಳೂರು: ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಮತ್ತು ಜಾತಿ ದೌರ್ಜನ್ಯದ ಕೊಲೆ ಪ್ರಕರಣಗಳಲ್ಲಿ (Scheduled Caste and Scheduled Tribe (Prevention of Atrocities) Act, 1989) 120 ದಿನ ಕಳೆದರೂ ಆರೋಪಿಗಳ ವಿರುದ್ಧ ಆರೋಪ ಪಟ್ಟಿ (Chargesheet) ಏಕೆ ದಾಖಲಾಗಿಲ್ಲ ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ್ದಾರೆ ಸಿಎಂ ಸಿದ್ದರಾಮಯ್ಯ (CM Siddaramaiah). ಹೀಗೇ ಆದರೆ ಎಸ್.ಪಿ, ಡಿಸಿಪಿ ಗಳನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇನ್ನು ಮುಂದೆ ಇಂಥ ಪ್ರಕರಣಗಳಲ್ಲಿ 60 ದಿನದ ಒಳಗೆ ಜಾರ್ಜ್‌ಶೀಟ್‌ (Chargesheet should be submitted within 60 days) ಸಲ್ಲಿಸಬೇಕು ಎಂದು ಸೂಚಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂಕಿ ಅಂಶಗಳನ್ನು ಮುಂದಿಟ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಸಿದ್ದರಾಮಯ್ಯ..

ಕಳೆದ ಐದು ವರ್ಷಗಳಲ್ಲಿ ದಾಖಲಾದ 10893 ಪ್ರಕರಣಗಳಲ್ಲಿ 1100 ಪ್ರಕರಣಗಳಲ್ಲಿ 120 ದಿನಗಳಲ್ಲಿಯೂ ಚಾರ್ಜ್‌ ಶೀಟ್‌ ಹಾಕಿಲ್ಲ. ಇದು ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಅಧಿಕಾರಿಗಳ ಅಸಡ್ಡೆಯನ್ನು ತೋರಿಸುತ್ತದೆ. ಇದರಿಂದ ಸಂತ್ರಸ್ತರಿಗೆ ನ್ಯಾಯ ಕೊಡಿಸಿದಂತಾಗುವುದಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಅಡಿಯಲ್ಲಿ 90 ದಿನಗಳೊಳಗೆ ಚಾರ್ಜ್‌ ಶೀಟ್‌ ಹಾಕದಿದ್ದರೆ, ಎಸ್ ಸಿ /ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ 90 ದಿನಗಳೊಳಗೆ ಆರೋಪ ಪಟ್ಟಿ ದಾಖಲಾಗದಿದ್ದರೆ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಗುತ್ತದೆ. ಹೀಗೆ ಜಾಮೀನು ಪಡೆದವರಿಗೆ ಕಾನೂನಿನ ಭಯ ಇರುತ್ತದಾ ಎಂದು ಖಾರವಾಗಿ ಪ್ರಶ್ನಿಸಿದರು.

ಚಾರ್ಜ್‌ಶೀಟ್‌ ಸಲ್ಲಿಸಲು 90 ದಿನದವರೆಗೆ ಸಮಯಾವಕಾಶ ಇದೆ ಎಂದು ಕಾಯಬೇಡಿ. ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎರಡು ತಿಂಗಳೊಳಗೆ ಚಾರ್ಜ್‌ ಶೀಟ್‌ ಹಾಕುವ ಬಗ್ಗೆ ಎಸ್‌.ಪಿ. ಗಳಿಗೆ, ಡಿಸಿಪಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪೊಲೀಸರು ಜಾಗರೂಕತೆಯಿಂದ ತನಿಖೆ ಮಾಡಬೇಕು. ಇವುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶಿಕ್ಷೆ ಕೊಡಿಸಲು ಎಲ್ಲ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣದಿಂದ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ, ನಾಗರಿಕ ಹಕ್ಕು ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸರ್ಕಾರ ಈ ಕಾಯ್ದೆಗೆ ಹೆಚ್ಚಿನ‌ ಮಹತ್ವ ನೀಡಿ ಗಂಭೀರವಾಗಿ ಪರಿಗಣಿಸುತ್ತದೆ. ಸಂತ್ರಸ್ತರಿಗೆ ರಕ್ಷಣೆ ಸಿಗಬೇಕು. ಈ ಉದ್ದೇಶ ಸಫಲವಾಗಲು ಸಮಾಜ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ, ಪ್ರಾಸಿಕ್ಯೂಷನ್‌ ಇಲಾಖೆ, ಕಂದಾಯ ಇಲಾಖೆ ಸಮನ್ವಯದೊಂದಿಗೆ ಕೆಲಸ ಮಾಡಬೇಕು. ಸಮನ್ವಯ ಇದ್ದಾಗ ಮಾತ್ರ ವ್ಯವಸ್ಥಿತವಾಗಿ ಈ ವರ್ಗದ ಜನರಿಗೆ ನ್ಯಾಯ ಸಿಗಲು ಸಾಧ್ಯವಾಗುತ್ತದೆ ಎಂದರು.

ಕೇವಲ 3.44% ಶಿಕ್ಷೆ ಪ್ರಮಾಣ ರಾಜ್ಯಕ್ಕೆ ಅಪಮಾನ

ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್ ಒನ್ ಎನ್ನುವ ಅಭಿಪ್ರಾಯ ಇದೆ. ಆದರೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷೆ ಪ್ರಮಾಣ ಕೇವಲ 3.44 ಇದೆ. ಅಂದರೆ ಪೊಲೀಸ್ ಇಲಾಖೆ ಕಳೆದ ಐದು ವರ್ಷಗಳಲ್ಲಿ ಎಸ್ ಸಿ/ಎಸ್ ಟಿ ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿತ್ತಾ ಎಂದು ಪ್ರಶ್ನಿಸಿ ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇದಕ್ಕೆ ಎಸ್.ಪಿ. ಹಾಗೂ ಡಿಸಿಪಿಗಳನ್ನು ನೇರವಾಗಿ ಹೊಣೆ ಮಾಡಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಸಿ ಪ್ರಕರಣಗಳ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ ಮತ್ತು ಐಜಿಗೆ ಸೂಚಿಸಿದರು.

ಸಭೆಯಲ್ಲಿ‌ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್‌.ಸಿ. ಮಹಾದೇವಪ್ಪ ಹಾಗೂ ಸಚಿವರಾದ ಡಾ. ಜಿ. ಪರಮೇಶ್ವರ, ಕೆ.ಹೆಚ್. ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ, ಆರ್.ಬಿ. ತಿಮ್ಮಾಪೂರ, ಕೆ.ಎನ್. ರಾಜಣ್ಣ, ನಾಗೇಂದ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳ ಶಾಸಕರು, ಸಂಸದರು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Actor Upendra : 2ನೇ FIRಗೂ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ; ಉಪೇಂದ್ರಗೆ ಬಿಗ್‌ ರಿಲೀಫ್‌

ಸಿದ್ದರಾಮಯ್ಯ ಅವರ ಸೂಚನೆಗಳು

  1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡುವ ಜತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಸಮಾಜ‌ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು.
  2. ಜಿಲ್ಲಾಧಿಕಾರಿಗಳೂ ಕಡ್ಡಾಯವಾಗಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಮತ್ತೊಂದು ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾ ಮತ್ತು ತಾಲೂಕು ಕೆಡಿಪಿ ಸಭೆಗಳಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳ ರಿವ್ಯೂ (ಪರಿಶೀಲನೆ) ನಡೆಸದ ಕಾರಣದಿಂದ ಹೀಗಾಗುತ್ತದೆ. ಆದ್ದರಿಂದ ಶಾಸಕರು, ಜಿಲ್ಲಾ ಸಚಿವರು, ಡಿಸಿ-ಎಸ್ ಪಿ ಗಳು ಕಡ್ಡಾಯವಾಗಿ ರಿವ್ಯೂ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದರು
  3. ರಾಜಕಾರಣಿಗಳು ಈ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯ ಪ್ರವೇಶಿಸದೆ ಪೊಲೀಸರಿಗೆ ಸಹಕಾರ ನೀಡಬೇಕು. ಪ್ರತಿ ಪ್ರಕರಣ ದಾಖಲಿಸುವಾಗ ಪೊಲೀಸರು ತಮ್ಮ ವಿವೇಚನೆಯನ್ನು ಬಳಸಬೇಕು.
  4. ಮುಂದಿನ ಸಭೆಯಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳ ಅವಧಿ ಮತ್ತು ಇತರ ಮಾಹಿತಿಯನ್ನು ಒದಗಿಸಬೇಕು. ಹೆಚ್ಚು ಪ್ರಕರಣಗಳು ಬಾಕಿ ಇರುವಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುವುದು.
  5. ಅನುಕಂಪ ಆಧಾರದ ಉದ್ಯೋಗ ನೀಡುವುದರಲ್ಲಿ 54 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ. ಬಹಳಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಇದಕ್ಕೆ ಎರಡು ವರ್ಷದೊಳಗೆ ಅರ್ಜಿ ಸಲ್ಲಿಸಬೇಕೆಂಬ ಷರತ್ತಿನ ಬಗ್ಗೆ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
  6. ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆಯಲಾಗುವುದು.
  7. ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (CRE cell) ಬಲ ಪಡಿಸುವ ಕುರಿತು ವರದಿ ಸಿದ್ಧಪಡಿಸಲಾಗಿದ್ದು, ಕಡತವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಸಮಾಜ ಕಲ್ಯಾಣ ಸಚಿವರು ಸಭೆಯಲ್ಲಿ ತಿಳಿಸಿದರು.
  8. ಕಳೆದ ಐದು ವರ್ಷಗಳಲ್ಲಿ 53 ಕೊಲೆ ಪ್ರಕರಣಗಳಲ್ಲಿಯೂ ಚಾರ್ಜ್‌ ಶೀಟ್‌ ಹಾಕದಿರುವ ಕುರಿತು ಆಕ್ಷೇಪಿಸಿದ ಮುಖ್ಯಮಂತ್ರಿಗಳು, ಅಂತಹ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸೂಚಿಸಿದರು.
Exit mobile version