ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಬಳಿಕ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ, ಎನ್‌ಕೌಂಟರ್‌ಗಳು ಜಾಸ್ತಿಯಾದ ಕಾರಣ ಅಪರಾಧಿಗಳೇ ಜೈಲಿಗೆ ಬಂದು ನಮ್ಮನ್ನು ಬಂಧಿಸಿ ಎಂಬುದಾಗಿ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‌ಕೌಂಟರ್‌ಗಳು ಮಾತ್ರವಲ್ಲ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಅಪರಾಧ ಸಾಬೀತಾಗಿ ಶಿಕ್ಷೆ ವಿಧಿಸುವಲ್ಲಿಯೂ (Conviction Rate) ರಾಜ್ಯ ಮುಂದಿದೆ ಎಂದು ಸರಕಾರ ತಿಳಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (NCRB- ೨೦೨೧) ವರದಿ ಪ್ರಕಾರ ರಾಜ್ಯವು ಅಕ್ರಮ ಶಸ್ತ್ರಾಸ್ತ್ರಗಳ ಜಪ್ತಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ವಿಧಿಸುವಲ್ಲಿ ಅಗ್ರ ಸ್ಥಾನದಲ್ಲಿದೆ. ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ೭,೭೧೩ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಹಾಗೆಯೇ, ಸೈಬರ್‌ಕ್ರೈಂನಲ್ಲಿ ೨೯೨ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ೧,೧೨,೮೦೦ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. ಅಲ್ಲದೆ, ಕಳೆದ ವರ್ಷ ೪೦,೨೧೨ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಉತ್ತರ ಪ್ರದೇಶವು ದೇಶದಲ್ಲಿಯೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ೧೬ನೇ ಸ್ಥಾನದಲ್ಲಿದೆ. ಕಳೆದ ವರ್ಷ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ೫೬,೦೮೩ ಪ್ರಕರಣ ದಾಖಲಾಗಿವೆ. ಆದಾಗ್ಯೂ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇದನ್ನೂ ಓದಿ | POCSO ACT | ಏನಿದು ಪೋಕ್ಸೋ ಕಾಯಿದೆ, ಅಪರಾಧಿಗಳಿಗೆ ಶಿಕ್ಷೆ ಏನು?