ಬೆಂಗಳೂರು: ಗಂಡ – ಹೆಂಡತಿ ಜಗಳ (Couples Fight) ಉಂಡು ಮಲಗುವ ತನಕ ಎಂಬುದು ಹಳೇ ಗಾಧೆ. ಈಗ ಲೇಟೆಸ್ಟ್ ಗಾಧೆಯೊಂದು ಬಂದಿದೆ. “ಗಂಡ-ಹೆಂಡಿರ ಜಗಳ ಪೊಲೀಸ್ ಸ್ಟೇಷನ್ (Police Station) ಗ್ಲಾಸ್ ಪೀಸ್ ಪೀಸ್ ಆಗುವ ತನಕ!” ಎಂದು ಮಾರ್ಪಾಟು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಿದ್ದ ಜಗಳ ಬೀದಿಗೆ ಬಂದಿದ್ದಲ್ಲದೆ, ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿತ್ತು. ಪತ್ನಿ ಮನೆಯವರನ್ನು ಠಾಣೆಗೆ ಕರೆಸಿದ್ದ ಆರೋಪಿ ಅಲ್ಲಿಯೂ ಜಗಳ ತೆಗೆದಿದ್ದ, ಕೊನೆಗೆ ಸಿಟ್ಟು ನೆತ್ತಿಗೇರಿ ಠಾಣೆಯ ಮುಂಭಾಗದ ಬಾಗಿಲ ಗ್ಲಾಸ್‌ಗಳಿಗೆ ಕೈಯಿಂದ ಗುದ್ದಿ ಒಡೆದು ಹಾಕಿದ್ದಾನೆ.
ಜಯನಗರದ ಶ್ರೀಧರ್ ಎಂಬಾತನೇ ಪೊಲೀಸ್ ಠಾಣೆಯ ಗಾಜಿನ ಬಾಗಿಲನ್ನು ಒಡೆದು ಹಾಕಿದ ಆರೋಪಿಯಾಗಿದ್ದಾನೆ. ಪತಿ ಹಾಗೂ ಪತ್ನಿಯ ಜಗಳದಿಂದ ಈಗ ಸಾರ್ವಜನಿಕ ಆಸ್ತಿ ನಷ್ಟವಾಗುವಂತೆ ಆಗಿದೆ. ಅಲ್ಲದೆ, ಪತ್ನಿ ಹಾಗೂ ಆಕೆಯ ಮನೆಯವರ ಮೇಲೆ ಕಂಪ್ಲೇಂಟ್ ಕೊಡಲು ಬಂದಾತ ಸಿಟ್ಟಿನಿಂದ ಮಾಡಿಕೊಂಡ ಅವಾಂತರದಿಂದ ತನ್ನ ಮೇಲೆಯೇ ಕೇಸ್ ಹಾಕಿಸಿಕೊಂಡಂತೆ ಆಗಿದೆ.
ಜಯನಗರದ ಶ್ರೀಧರ್ ಎಂಬಾತ ಕಳೆದ ಎರಡು ವರ್ಷಗಳ ಹಿಂದೆ ಅರ್ಚನಾ ಎಂಬಾಕೆ ಮದುವೆಯಾಗಿದ್ದ. ಮಗುವಾದ ನಂತರ ಪತ್ನಿ ಅರ್ಚನಾ ಅವರು ಪತಿ ಶ್ರೀಧರ್ ಮನೆಗೆ ಬಾರದೇ ತಂದೆ ಮನೆಯಾದ ಮಾರೇನಹಳ್ಳಿಯಲ್ಲಿಯೇ ಉಳಿದುಕೊಂಡಿದ್ದರು. ಶ್ರೀಧರ್ ಎಷ್ಟೇ ಕರೆದರೂ ಮನೆಗೆ ಬರಲು ಒಪ್ಪಲಿಲ್ಲ. ಈ ಬಗ್ಗೆ ಠಾಣೆಗೆ ದೂರು ನೀಡಲು ಜಯನಗರ ಪೊಲೀಸ್ ಠಾಣೆಗೆ ಶ್ರೀಧರ್ ಬಂದಿದ್ದ.
ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ನೀಡಬೇಕು. ಮಗುವಾದ ಮೇಲೆ ಪತ್ನಿಯು ತವರು ಮನೆಯಿಂದ ವಾಪಸ್ ಬರುತ್ತಿಲ್ಲ. ನೀವೇ ನನಗೆ ನ್ಯಾಯ ಕೊಡಿ ಎಂದು ಪೊಲೀಸರಿಗೆ ಕೇಳಿಕೊಂಡಿದ್ದ. ಹೀಗಾಗಿ ನಾನು ದೂರು ಕೊಡುತ್ತೇನೆ ಎಂದು ಹೇಳಿದ್ದ. ಆಗ ಪೊಲೀಸರು ಸಹ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿದರಾಯಿತು ಎಂದು ಶ್ರೀಧರ ಪತ್ನಿಯ ಕುಟುಂಬಸ್ಥರನ್ನು ಠಾಣೆಗೆ ಕರೆಸಿದ್ದರು. ಮೊದಲು ಮಾತನಾಡಿಕೊಂಡು ಎಲ್ಲವನ್ನೂ ಬಗೆಹರಿಸಿಕೊಳ್ಳಿ. ಕುಟುಂಬ ಎಂದ ಮೇಲೆ ಮಾತುಗಳು ಬರುತ್ತವೆ, ಹೋಗುತ್ತವೆ. ಎಲ್ಲರೂ ಅನುಸರಿಸಿಕೊಂಡು ಹೋಗಬೇಕು ಎಂಬ ಕಿವಿ ಮಾತನ್ನೂ ಪೊಲೀಸರು ನೀಡಿದ್ದಾರೆ.
ಇದನ್ನೂ ಓದಿ: Rave party: ಬೆಂಗಳೂರು ರೇವ್ ಪಾರ್ಟಿ ಕೇಸ್; ಬಿಲ್ಡಪ್ ಕೊಡಲು ಹೋಗಿ ಲಾಕ್ ಆದ ತೆಲುಗು ನಟಿ ಹೇಮಾ!
ಶ್ರೀಧರ್ ಮೇಲೆ ಎಫ್‌ಐಆರ್
ಈ ವೇಳೆ ಮಾತುಕತೆ ಮಾಡುತ್ತಿದ್ದ ವೇಳೆ ಶ್ರೀಧರ್‌ಗೂ ಹಾಗೂ ಆತನ ಪತ್ನಿಯ ಮನೆಯವರಿಗೂ ಜಗಳ ಶುರುವಾಗಿದೆ. ಶ್ರೀಧರ್‌ಗೆ ತನ್ನ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಲು ಆಗಿಲ್ಲ. ಹಾಗಾಗಿ ಗಲಾಟೆ ಭರದಲ್ಲಿ ಅಲ್ಲಿಯೇ ಇದ್ದ ಬಾಗಿಲ ಗ್ಲಾಸ್‌ಗಳಿಗೆ ಕೈಯಿಂದಲೇ ಬಲವಾಗಿ ಗುದ್ದಿದ್ದಾನೆ. ಆಗ ಗ್ಲಾಸ್‌ಗಳು ಪೀಸ್ ಪೀಸ್ ಆಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಕೇಸ್ ಅಡಿ ಶ್ರೀಧರ್ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.